ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿರುವ ಸರ್ಕಾರಿ ಸಾರ್ವಜನಿಕ ಬಾಲಕಿಯರ ವಿದ್ಯಾರ್ಥಿ ನಿಲಯದ ಸ್ಥಿತಿ
ನಂಜನಗೂಡು: ಕಟ್ಟಡದ ಮುಂಭಾಗ ಬೆಳೆದ ಬೃಹತ್ ಗಿಡಗಳು, ಅಲ್ಲಲ್ಲಿ ಬಿದ್ದ ಮದ್ಯದ ಬಾಟಲಿಗಳು, ಸಿಗರೇಟ್ ಖಾಲಿ ಪ್ಯಾಕೆಟ್‌ಗಳು. ಪಾಳುಕೊಂಪೆಯಂತಾದ ಕಟ್ಟಡ...
ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿನ ಸರ್ಕಾರಿ ಸಾರ್ವಜನಿಕ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡದ ಸ್ಥಿತಿಯಿದು. ಎರಡು ದಶಕದಿಂದ ಪಾಳು ಬಿದ್ದು, ಮದ್ಯವ್ಯಸನಿಗಳ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ನಂಜನಗೂಡು- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದೊಡ್ಡಕವಲಂದೆಯಲ್ಲಿ 2003ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರಿಗೆ ನಿರ್ಮಾಣವಾದ ವಸತಿ ನಿಲಯ ಅಂದಿನ ಕೇಂದ್ರ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಅಂದಿನ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ಅವಧಿಯಲ್ಲಿ ಲೋಕಾರ್ಪಣೆಗೊಂಡಿತ್ತು.
ಆರಂಭದ ಎರಡು ವರ್ಷ ಕಾರ್ಯನಿರ್ವಹಿಸಿತು, ವಿದ್ಯಾರ್ಥಿನಿಯರ ದಾಖಲಾತಿ ಕಡಿಮೆಯಾದ ಕಾರಣಕ್ಕೆ ವಸತಿ ನಿಲಯವನ್ನು ಮುಚ್ಚಲಾಯಿತು. ಸ್ಥಗಿತಗೊಳಿಸಿ ಎರಡು ದಶಕ ಕಳೆದರೂ ಪುನರಾರಂಭ ಮಾಡಲು ಅಧಿಕಾರಿಗಳು ಇಚ್ಛಾಶಕ್ತಿ ತೋರಲಿಲ್ಲ.
ವಿಶಾಲವಾದ 6 ಕೊಠಡಿಗಳು, ಶೌಚಾಲಯ, ಭೋಜನಾಲಯ, ಗ್ರಂಥಾಲಯ, ನಿಲಯ ಪಾಲಕರ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿಶಾಲ ಆವರಣ ಹೊಂದಿದೆ. ಪ್ರಕೃತಿಯ ಸುಂದರ ವಾತಾವರಣದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಿದ್ದರೂ ಉಪಯೋಗಕ್ಕೆ ಬಾರದಾಗಿದೆ.
ವಸತಿ ನಿಲಯದ ಆವರಣದಲ್ಲಿ ತೆಂಗಿನ ಮರಗಳಿವೆ, ನಿರ್ವಹಣೆ ಇಲ್ಲದೇ ಸೊರಗುತ್ತಿವೆ. ವಿದ್ಯಾರ್ಥಿನಿಲಯದ ಆವರಣದಲ್ಲಿ ಕೊಳವೆಬಾವಿ, ನಿಲಯದ ಸುತ್ತಲೂ ಕಾಂಪೌಂಡ್ ಇದ್ದರೂ ಪಾಳು ಬಿದ್ದಿದೆ.
‘ವಿಶಾಲ ಆಗಿರುವ ವಿದ್ಯಾರ್ಥಿನಿಲಯವನ್ನು ಸರ್ಕಾರ ಮತ್ತೆ ಆರಂಭಿಸಿ ಅನುಕೂಲ ಮಾಡಿಕೊಡಬೇಕು’ ಎಂದು ಗ್ರಾಮದ ಶಿವಕುಮಾರ್ ಆಗ್ರಹಿಸಿದರು.
‘ಆರಂಭಕ್ಕೆ ಅಗತ್ಯ ಕ್ರಮ’
‘ಇತ್ತೀಚೆಗೆ ತಾಲ್ಲೂಕಿಗೆ ವರ್ಗಾವಣೆಗೊಂಡು ಬಂದಿದ್ದೇನೆ. ವಿದ್ಯಾರ್ಥಿ ನಿಲಯ ಪಾಳು ಬಿದ್ದಿರುವ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಕೂಡಲೇ ದೊಡ್ಡಕವಲಂದೆ ಗ್ರಾಮದಲ್ಲಿರುವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ತೆರಳಿ ಪರಿಶೀಲನೆ ನಡೆಸಿ, ಮತ್ತೆ ಆರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಮುಚ್ಚಿರುವ ವಸತಿ ನಿಲಯವನ್ನು ಪ್ರಾರಂಭಿಸಲು ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದಲಿಂಗು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಾಲ್ಲೂಕಿನ ಹಲವೆಡೆ ವಿದ್ಯಾರ್ಥಿ ನಿಲಯಗಳಿಲ್ಲದೆ, ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ದೂರದ ಊರುಗಳಿಗೆ ಪ್ರತಿನಿತ್ಯ ಪ್ರಯಾಣ ಮಾಡುವ ಸ್ಥಿತಿಯಿದೆ.ಶಿವಕುಮಾರ್, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.