
ನಂಜನಗೂಡು: ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಧ್ರುವನಾರಾಯಣ ಸ್ಮಾರಕ ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು ಮಣಿಸಿದ ಗೋವಾದ ಈ.ಜಿ.ಎಫ್.ಸಿ ತಂಡ ಟ್ರೋಫಿಯೊಂದಿಗೆ ₹1 ಲಕ್ಷ ನಗದು ಬಹುಮಾನ ಪಡೆಯಿತು.
ಮಂಗಳೂರು ಯುನೈಟೆಡ್ ತಂಡ ಎರಡನೆ ಸ್ಥಾನ ಪಡೆದು ₹50 ಸಾವಿರ ನಗದು, ನಂಜನಗೂಡಿನ ರಾಯಲ್ ಫಿಟ್ನೆಸ್ ತಂಡ ಬೆಂಗಳೂರು ತಂಡವನ್ನು ಮಣಿಸಿ ₹25 ಸಾವಿರ ನಗದು ಬಹುಮಾನ ಪಡೆದವು. ಟೂರ್ನಿಯ ಅತ್ಯುತ್ತಮ ಆಟಗಾರ ಗೋವಾ ತಂಡದ ವೆಲ್ರಾಯ್ ಮೌಸಿ ಹಾಗೂ ಅತ್ಯುತ್ತಮ ಗೋಲ್ ಕೀಪರ್ ಗೋವಾ ತಂಡದ ಮಂಜು ಪಡೆದುಕೊಂಡರು. ಮಂಗಳೂರು ತಂಡದ ಸಫಾನ್ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು.
ಪ್ರಶಸ್ತಿ ವಿತರಿಸಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ, ‘ನನ್ನ ತಂದೆ ದಿ. ಆರ್.ಧ್ರುವನಾರಾಯಣ ಅವರ ಸ್ಮರಣಾರ್ಥ ಕಳೆದ ವರ್ಷದಿಂದ ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ನಡೆದ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳಿಂದ 30 ತಂಡಗಳು ಭಾಗವಹಿಸಿ ಉತ್ತಮ ಆಟವನ್ನು ಪ್ರದರ್ಶಿಸಿ ಕ್ರೀಡಾಪ್ರೇಮಿಗಳನ್ನು ರಂಜಿಸಿದವು’ ಎಂದರು.
‘ಫುಟ್‌ಬಾಲ್ ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಧ್ರುವನಾರಾಯಣ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಟೂರ್ನಿ ಆಯೋಜಿಸಲಾಗುವುದು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಸಿ.ಬಸವರಾಜು, ಕಾವೇರಪ್ಪ, ಹಿರೇಹಳ್ಳಿ ಸೋಮೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಮಾರುತಿ, ಸಿ.ಎಂ.ಶಂಕರ್, ಲತಾ ಸಿದ್ದಶೆಟ್ಟಿ, ಮುಖಂಡರಾದ ನಾಗರಾಜಯ್ಯ, ಕಳಲೆ ರಾಜೇಶ್, ದೇಬೂರು ಅಶೋಕ್, ಹಾಡ್ಯ ಜಯರಾಮ, ನಗರಸಭಾ ಮಾಜಿ ಸದಸ್ಯರಾದ ಪ್ರದೀಪ್, ರವಿ, ಕೆ.ಎಂ. ಬಸವರಾಜು, ಮುಳ್ಳೂರು ಮಹೇಂದ್ರ, ಉಪ್ಪಿನಹಳ್ಳಿ ಶಿವಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.