ADVERTISEMENT

‘ಸಂಸ್ಕೃತ ಜನರ ಭಾಷೆಯಾಗಲಿ’

ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಚಾರ್ತುಮಾಸ್ಯ ಇಂದು ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 15:36 IST
Last Updated 13 ಸೆಪ್ಟೆಂಬರ್ 2019, 15:36 IST
ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಶುಕ್ರವಾರ ಮುಸ್ಸಂಜೆ ನಡೆದ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ ಸುವರ್ಣ ಮಹೋತ್ಸವದಲ್ಲಿ ಲಕ್ಷ್ಮೀ ಲಹರಿ ಸಂಸ್ಕೃತ ಪುಸ್ತಕವನ್ನು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು
ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಶುಕ್ರವಾರ ಮುಸ್ಸಂಜೆ ನಡೆದ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ ಸುವರ್ಣ ಮಹೋತ್ಸವದಲ್ಲಿ ಲಕ್ಷ್ಮೀ ಲಹರಿ ಸಂಸ್ಕೃತ ಪುಸ್ತಕವನ್ನು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು   

ಮೈಸೂರು: ‘ಸಂಸ್ಕೃತ ದೇವ ಭಾಷೆ ಎಂಬ ಕಲ್ಪನೆ ಹೋಗಿ, ಜನ ಸಾಮಾನ್ಯರ ಭಾಷೆಯಾದಾಗ ಮಾತ್ರ ಉಳಿಯಲಿದೆ, ಬೆಳೆಯಲಿದೆ’ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಶ್ರೀಕೃಷ್ಣಧಾಮದಲ್ಲಿ ಶುಕ್ರವಾರ ಮುಸ್ಸಂಜೆ ನಡೆದ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ ಸುವರ್ಣ ಮಹೋತ್ಸವ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಆ‌ಶೀರ್ವಚನ ನೀಡಿದ ಸ್ವಾಮೀಜಿ, ‘ಸಂಸ್ಕೃತ ಮೃತ ಭಾಷೆಯಲ್ಲ. ಅಪಾರವಾದ ಜ್ಞಾನ ಭಂಡಾರ ಹೊಂದಿರುವ ಭಾಷೆ’ ಎಂದು ಹೇಳಿದರು.

‘ಜನರ ಬಳಕೆಯಲ್ಲಿ ಇಲ್ಲದಿರುವ ಭಾಷೆಯಲ್ಲಿ ದಿನ ಪತ್ರಿಕೆ ನಡೆಸುವುದು ಸಾಹಸದ ಕೆಲಸ. ಸುಧರ್ಮಾ ದಿನಪತ್ರಿಕೆ 50 ವರ್ಷ ಪೂರೈಸಿರುವುದು ಹೆಮ್ಮೆಯ ವಿಚಾರ ಹಾಗೂ ಪ್ರಶಂಸನೀಯವಾದುದು’ ಎಂದರು.

ADVERTISEMENT

ಪತ್ರಿಕೆಯ ಗೌರವ ಸಂಪಾದಕ ಡಾ.ಎಚ್.ವಿ.ನಾಗರಾಜರಾವ್, ಸಂಪತ್ ಕುಮಾರ್ ಪಾಲ್ಗೊಂಡಿದ್ದರು.

ಧರ್ಮಕ್ಕೆ ಜಯ: ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿ ಅವರ 81ನೇ, ವಿಶ್ವಪ್ರಸನ್ನತೀರ್ಥರ 32ನೇ ಚಾರ್ತುಮಾಸ್ಯ ಶನಿವಾರ ಮುಕ್ತಾಯಗೊಳ್ಳಲಿದೆ.

ಶುಕ್ರವಾರ ಗಾನಸಿರಿ ವೇದಾಂತ ಲಹರಿಯ ಸಮಾರೋಪ ನಡೆಯಿತು. ಬಳಿಕ ಮಹಾಭಾರತದ ಅನುಗ್ರಹ ಸಂದೇಶ ನೀಡಿದ ವಿಶ್ವೇಶತೀರ್ಥ ಸ್ವಾಮೀಜಿ, ‘ಎಲ್ಲ ಕಾಲದಲ್ಲಿಯೂ ಧರ್ಮಕ್ಕೆ ಜಯ ಲಭಿಸಿದೆ. ಅಧರ್ಮಕ್ಕೆ ಎಂದೂ ಗೆಲುವಿಲ್ಲ. ಶ್ರೀಕೃಷ್ಣನ ಕೃಪೆಯಿಲ್ಲದೆ ನಮ್ಮ ಶಕ್ತಿ ಬಳಸಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದರು.

‘ಇಂದಿನ ರಾಜಕಾರಣಿಗಳು ಸಂಪತ್ತು, ಆಸ್ತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇವರು ಪಾಂಡವರು–ಕೌರವರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಕೃಷ್ಣ ಯಾವುದೇ ರಾಗ-ದ್ವೇಷ ಇಲ್ಲದವ. ಧರ್ಮ ಅಂತ ಬಂದಾಗ ತನ್ನವರು ಬೇರೆಯವರು ಎಂದು ನೋಡುತ್ತಿರಲಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುತ್ತಿದ್ದ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.