ADVERTISEMENT

ದಸರಾ ಜಂಬೂಸವಾರಿ ಮುಗಿಸಿ ಅರಮನೆ ನಗರಿಗೆ ಆನೆಗಳ ಗುಡ್‌ಬೈ

ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡುಗೆ; ಮಾವುತರು– ಕಾವಾಡಿಗರು ಭಾವುಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 14:38 IST
Last Updated 26 ಅಕ್ಟೋಬರ್ 2023, 14:38 IST
ಮೈಸೂರಿನ ಅರಮನೆಯಲ್ಲಿ ಆವರಣದಲ್ಲಿ ಕ್ಯಾಪ್ಟನ್ ಅಭಿಮನ್ಯು‌ ನೇತೃತ್ವದ ಗಜಪಡೆಗೆ ಗುರುವಾರ ನಡೆದ ಬೀಳ್ಕೊಡುಗೆಯಲ್ಲಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಮಾವುತರನ್ನು ಸನ್ಮಾನಿಸಿದರು. ಮಾಲತಿಪ್ರಿಯಾ, ಸೌರಭ್‌ ಕುಮಾರ್, ಬಸವರಾಜ್, ಮುಜೀಬ್, ಸಂತೋಷ್ ಹೂಗಾರ್‌, ಟಿ.ಎಸ್‌.ಸುಬ್ರಹ್ಮಣ್ಯ ಇದ್ದರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.
ಮೈಸೂರಿನ ಅರಮನೆಯಲ್ಲಿ ಆವರಣದಲ್ಲಿ ಕ್ಯಾಪ್ಟನ್ ಅಭಿಮನ್ಯು‌ ನೇತೃತ್ವದ ಗಜಪಡೆಗೆ ಗುರುವಾರ ನಡೆದ ಬೀಳ್ಕೊಡುಗೆಯಲ್ಲಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಮಾವುತರನ್ನು ಸನ್ಮಾನಿಸಿದರು. ಮಾಲತಿಪ್ರಿಯಾ, ಸೌರಭ್‌ ಕುಮಾರ್, ಬಸವರಾಜ್, ಮುಜೀಬ್, ಸಂತೋಷ್ ಹೂಗಾರ್‌, ಟಿ.ಎಸ್‌.ಸುಬ್ರಹ್ಮಣ್ಯ ಇದ್ದರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.   

ಮೈಸೂರು: ದಸರಾ ಜಂಬೂಸವಾರಿ ಜವಾಬ್ದಾರಿಯನ್ನು ಶಿಸ್ತಿನಿಂದ ನಿಭಾಯಿಸಿದ್ದ ಗಜಪಡೆಯು ಗುರುವಾರ ಕಾಡಿನ ಆನೆ ಶಿಬಿರಗಳಿಗೆ ಮರಳುವಾಗಲೂ ಗಾಂಭೀರ್ಯ ಪ್ರದರ್ಶಿಸಿದವು. ಸಿಡಿಮದ್ದಿಗೆ ಬೆದರಿದ್ದ ‘ರೋಹಿತ’ ಕೊಸರಾಡದೇ ಲಾರಿ ಹತ್ತಿ ಚಪ್ಪಾಳೆ ಗಿಟ್ಟಿಸಿದ.

ಅರಮನೆ ಆವರಣದಲ್ಲಿ ನಡೆದ ‘ದಸರಾ ಆನೆಗಳ ಬೀಳ್ಕೊಡುಗೆ’ಯು ಭಾವುಕ ವಾತಾವರಣವನ್ನು ನಿರ್ಮಿಸಿತ್ತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಲಾರಿಗಳನ್ನು ಯಾವುದೇ ತೊಂದರೆ ನೀಡದೆ, ಮಾವುತರನ್ನು ಸತಾಯಿಸದೇ ಆಜ್ಞೆಯನ್ನು ಪಾಲಿಸಿದವು.

ಕಳೆದ ವರ್ಷ ‘ಶ್ರೀರಾಮ’ ಲಾರಿಯನ್ನು ಹತ್ತದೇ ಒಂದೂವರೆ ಗಂಟೆ ಮಾವುತ ಗಣೇಶ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸುಸ್ತಾಗಿಸಿದ್ದ. ‘ಅಭಿಮನ್ಯು’ ಹಾಗೂ ‘ಅರ್ಜುನ’ರ ‍ಪ್ರವೇಶದಿಂದ ಲಾರಿಯನ್ನು ಏರಿದ್ದ. ಈ ಬಾರಿ ಯಾವುದೇ ಆನೆಗಳೂ ಹಿಂದೇಟು ಹಾಕಲಿಲ್ಲ. ‘ಸುಗ್ರೀವ’ ಎರಡು ಬಾರಿ ಹತ್ತದೇ ವಾಪಸಾದರೂ, ಮೂರನೇ ಬಾರಿ ಲಾರಿಯ ಮೇಲೆ ಕಾಲೂರಿದ. 

ADVERTISEMENT

ರೋಹಿತ, ಹಿರಣ್ಯ ಭೇಷ್‌ ಭೇಷ್: ಮೊದಲನೆಯ ಕುಶಾಲತೋಪು ತಾಲೀಮಿನಲ್ಲಿ ಇದೇ ಮೊದಲ ಬಾರಿ ಬಂದಿದ್ದ ಕಿರಿಯ ಆನೆಗಳಾದ ರೋಹಿತ ಹಾಗೂ ಹಿರಣ್ಯ ಆರಾಮಾಗಿ ಏರಿದರು. ರೋಹಿತ ಆನೆಯ ಮಾವುತ ಮಹದೇವ ಅವರು ಆನೆಯ ಕತ್ತಿಗೆ ಹಗ್ಗವನ್ನು ಬಿಗಿದಿದ್ದರು. ಕಾಲಿಗೆ ಸರಪಳಿ ಹಾಕಿದ್ದರು. ಯಾವುದೇ ತೊಂದರೆ ನೀಡದೇ ಎರಡನೇ ಬಾರಿ ಲಾರಿ ಮೇಲೆ ಹೆಜ್ಜೆಯೂರಿ ಮೆಚ್ಚುಗೆಗೆ ಪಾತ್ರನಾದ.

‘ಹಿರಣ್ಯ’ಳ ಎರಡೂ ಕಾಲಿಗೆ ಸರಪಳಿ ಹಾಕಲಾಗಿತ್ತು. ನೆಗೆಯುತ್ತಲೇ ಬಂದವಳು ಎರಡನೇ ಸಲ ಲಾರಿ ಮೇಲೇರಿದಳು. ಉಳಿದ ಎಲ್ಲ ಆನೆಗಳು ಒಂದೇ ಬಾರಿಗೆ ಲಾರಿ ಏರಿದವು. ಆನೆಪ್ರಿಯರು, ಪ್ರವಾಸಿಗರು ಗಜಪಡೆಯ ಗಾಂಭೀರ್ಯಕ್ಕೆ ಶಿಳ್ಳೆ– ಚ‍ಪ್ಪಾಳೆಯ ಮಳೆಗೈದರು. ಭಾರದ ಮನಸ್ಸಿನಿಂದಲೇ ಎಲ್ಲ ದಸರಾ ಆನೆಗಳಿಗೂ ‘ಬೈ ಬೈ’ ಮಾಡಿದರು.

ಮಜ್ಜನದ ಆರೈಕೆ: ಬಿಸಿಲೇರಿದ್ದರಿಂದ ಎಲ್ಲ ಆನೆಗಳ ಮೇಲೆ ನೀರನ್ನು ಹಾಕಿ ಲಾರಿಗಳಿಗೆ ಹತ್ತಿಸಲಾಯಿತು. ಪ್ರಯಾಣದ ಮೇವನ್ನು ಮಾವುತರು ಹಾಗೂ ಕಾವಾಡಿಗರ ಮಕ್ಕಳು ಸಿದ್ಧಪಡಿಸಿಕೊಂಡಿದ್ದರು. ಕುಟುಂಬದ ಸಾಮಗ್ರಿಗಳು, ಅಡುಗೆ ಪರಿಕರಗಳನ್ನು ಆಯಾ ಆನೆ ಲಾರಿಯಲ್ಲಿ ಇರಿಸಲಾಯ್ತು.

ಸಾಂಪ್ರದಾಯಿಕ ಪೂಜೆ: ಗಜಪಡೆಗೆ ಮಜ್ಜನದ ನಂತರ ಬೆಳಿಗ್ಗೆ 10.40ಕ್ಕೆ ಸಾಂಪ್ರದಾಯಿಕವಾಗಿ ಜಿಲ್ಲಾಡಳಿತ, ಅರಮನೆ ಮಂಡಳಿಯಿಂದ ದಸರಾ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಅರಮನೆ ಅರ್ಚಕ ಪ್ರಹ್ಲಾದ ರಾವ್‌ ಗಣಪತಿ ಹಾಗೂ ದುರ್ಗಾ ಸ್ತೋತ್ರವನ್ನು ಹೇಳಿದರು. ನಂತರ ಕಬ್ಬು, ಹುಲ್ಲು, ತೆಂಗಿನಕಾಯಿ, ಪಂಚಫಲ ನೀಡಲಾಯಿತು. 

ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಡಿಸಿಎಫ್‌ಗಳಾದ ಸೌರಭ್‌ ಕುಮಾರ್, ಬಸವರಾಜ್, ಆರ್‌ಎಫ್‌ಒ ಸಂತೋಷ್‌ ಹೂಗಾರ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ಆನೆಗಳಿಗೆ ಪುಷ್ಪಾರ್ಚನೆ ಮಾಡಿದರು.

ಮಾವುತರು ಹಾಗೂ ಕಾವಾಡಿಗರಿಗೆ ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯಿಂದ ಛಾಯಾಚಿತ್ರ ಹಾಗೂ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಯಿತು. ಆನೆ ವೈದ್ಯ ಮುಜೀಬ್‌ ರೆಹಮಾನ್, ಸಿಬ್ಬಂದಿ ರಂಗರಾಜು, ಅಕ್ರಂ ಇದ್ದರು. 

ಸೆಲ್ಫಿಗೆ ಮುಗಿಬಿದ್ದರು: ಅರಮನೆಗೆ ಬಂದಿದ್ದ ಪ್ರವಾಸಿಗರು ಹಾಗೂ ನಾಗರಿಕರು ಆನೆಗಳನ್ನು ನೋಡಲು ಬಿಡಾರದತ್ತ ಧಾವಿಸಿ, ಪೂಜೆ ಹಾಗೂ ಬೀಳ್ಕೊಡುಗೆಯನ್ನು ಕಣ್ತುಂಬಿಕೊಂಡರು. ಮಜ್ಜನ ನೋಡಿ ಸಂಭ್ರಮಿಸಿದರು. ಬಾಳೆಹಣ್ಣು, ಸಿಹಿ ತಿಂಡಿಗಳನ್ನು ಮಾವುತರ ಮೂಲಕ ಆನೆಗಳಿಗೆ ತಿನ್ನಿಸಿದರು. ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಬಾರದ ಸಚಿವ, ಆಯುಕ್ತ: ‌ಗಜಪಡೆ ಬೀಳ್ಕೊಡುಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್, ಮೇಯರ್‌ ಶಿವಕುಮಾರ್ ಗೈರಾಗಿದ್ದರು.

ಮಜ್ಜನದ ಖುಷಿಯಲ್ಲಿ ಬಲ ‘ಭೀಮ’
ಆನೆ ಶಿಬಿರಗಳಿಗೆ ತೆರಳುವ ಮುನ್ನ ಮಾವುತರು– ಕಾವಾಡಿಗರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ ಕ್ಷಣ...
ಫೋಟೊ ಕೇಳುತ್ತಿದ್ದ ಮಗುವಿನೊಂದಿಗೆ ಬಂದ ತಾಯಿಗೆ ‘ಭೀಮ’ ಆನೆ ಸೊಂಡಿಲಿನಲ್ಲಿ ಮಳೆ ಸುರಿಸಿ ನಗಿಸಿದ ಕ್ಷಣ
ಹಿರಿಯ ಆನೆ ಮಾಸ್ಟರ್‌ ‘ಅರ್ಜುನ’ನ ಮಾವುತ ವಿನೂ ಹಾಗೂ ಅಂಬಾರಿ ಆನೆ ಕ್ಯಾಪ್ಟನ್ ‘ಅಭಿಮನ್ಯು’ ಮಾವುತ ವಸಂತ ‍ಪರಸ್ಪರ ತಬ್ಬಿಕೊಂಡು ಬೀಳ್ಕೊಟ್ಟ ಕ್ಷಣ
ಅಭಿಮನ್ಯು‌ ಮಾವುತ ವಸಂತ ಪತ್ನಿಯೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು
ಮೈಸೂರಿನ ಅರಮನೆಯಲ್ಲಿ ಆವರಣದಲ್ಲಿ ಕ್ಯಾಪ್ಟನ್ ಅಭಿಮನ್ಯು‌ ನೇತೃತ್ವದ ಗಜಪಡೆಗೆ ಗುರುವಾರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಭಿಮನ್ಯು‌ ಕಂಡಿದ್ದು ಹೀಗೆ. -ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.

ಅರಮನೆ ನಗರಿಯಲ್ಲಿ 55 ದಿನ

ಈ ಬಾರಿ ಗಜಪಡೆ ಹಾಗೂ ಕುಟುಂಬದವರು 55 ದಿನವಿದ್ದರು. ಸೆ.1ರಂದು ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶದ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಯಿತು. ಮತ್ತಿಗೋಡು ಆನೆ ಶಿಬಿರದ ಕ್ಯಾಪ್ಟನ್ ಅಭಿಮನ್ಯು (58) ಭೀಮ (23) ಮಹೇಂದ್ರ (40) ಬಳ್ಳೆ ಶಿಬಿರದ ಅರ್ಜುನ (63) ದುಬಾರೆ ಶಿಬಿರದ ಧನಂಜಯ (45) ಗೋಪಿ (42) ವಿಜಯಾ (63) ಹೊಸ ಆನೆ ಕಂಜನ್ (24) ಹಾಗೂ ಭೀಮನಕಟ್ಟೆ ಆನೆ ಶಿಬಿರದ ವರಲಕ್ಷ್ಮಿ (60) ಅರಮನೆ ನಗರಿಗೆ ಬಂದಿದ್ದವು. ಸೆ.5ರಂದು ಅರಮನೆ ಪ್ರವೇಶಿಸಿದ್ದವು. ಎರಡನೇ ತಂಡದಲ್ಲಿ ದೊಡ್ಡ ಹರವೆ ಶಿಬಿರದ ಲಕ್ಷ್ಮಿ (52) ರಾಮಪುರ ಶಿಬಿರದ ರೋಹಿತ್ (21) ಹಿರಣ್ಯ (46) ದುಬಾರೆ ಶಿಬಿರದ ಪ್ರಶಾಂತ (50) ಸುಗ್ರೀವ (41) ಆಗಮಿಸಿದ್ದವು. 56ನೇ ದಿನವಾದ ಗುರುವಾರ ಮರಳಿ ತಮ್ಮ ಶಿಬಿರಗಳತ್ತ ಆನೆಗಳು ಹಾಗೂ ಕುಟುಂಬದವರು ಮರಳಿದರು.

ಗೌರವ ಧನ: ಶೇ 50 ಹೆಚ್ಚಳ

ಅರಮನೆ ಮಂಡಳಿಯಿಂದ ತಲಾ ₹15 ಸಾವಿರದಂತೆ 55 ಮಾವುತರು ಕಾವಾಡಿಗರು ಅಡುಗೆ ಬಾಣಸಿಗರು ಹಾಗೂ ಸಿಬ್ಬಂದಿ ಸೇರಿದಂತೆ 55 ಮಂದಿಗೆ ಗೌರವಧನ ನೀಡಲಾಯಿತು. ಕಳೆದ ವರ್ಷ ₹10 ಸಾವಿರ ನೀಡಲಾಗಿತ್ತು. ಶೇ 50ರಷ್ಟು ಏರಿಕೆ ಮಾಡಲಾಗಿದ್ದು ಸಂತಸಪಟ್ಟರು. ಜೊತೆಗೆ ಪ್ರಶಂಸನಾ ಪತ್ರಗಳನ್ನು ಇದೇ ಮೊದಲ ಬಾರಿ ನೀಡಲಾಯಿತು. ನಾಲ್ಕು ವರ್ಷಗಳ ಹಿಂದೆ ತಲಾ ₹8500 ಗೌರವಧನ ನೀಡಲಾಗುತ್ತಿತ್ತು. ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಮಾತನಾಡಿ ‘ದಸರಾ ಮಹೋತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು ವಿಜೃಂಭಣೆಯಿಂದ ನಡೆದಿದೆ. ಮಾವುತರು ಹಾಗೂ ಕಾವಾಡಿಗರ ಬೇಡಿಕೆಯಂತೆ ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಿಸಲಾಗಿದೆ. ಉಪಸಮಿತಿಗಳಿಂದ ದಸರಾ ಖರ್ಚು ವೆಚ್ಚ ಮಾಹಿತಿ ಪಡೆಯುತ್ತಿದ್ದು ಎರಡ್ಮೂರು ದಿನದಲ್ಲಿ ಲೆಕ್ಕ ನೀಡಲಾಗುವುದು’ ಎಂದು ಹೇಳಿದರು. ‘ಕೆಲವೊಂದು ಸಣ್ಣ–ಪುಟ್ಟ ತೊಂದರೆಗಳಾಗಿದೆ. ಭಾವಾವೇಶಕ್ಕೆ ಒಳಗಾಗಿ ತಪ್ಪುಗಳು ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಪ್ರಾಥಮಿಕ ಮಾಹಿತಿಯನ್ನು ತೆಗೆದುಕೊಳ್ಳಲಾಗಿದೆ’ ಎಂದರು.

ಹೊರಡುವ ಮುನ್ನ ಭಾವುಕರಾದರು...

ಕೋಡಿ ಸೋಮೇಶ್ವರ ದೇವಾಲಯದ ಅಂಗಳದಲ್ಲಿ ಸೇರಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಾವುತರು– ಕಾವಾಡಿಗರು ಭಾವುಕರಾದರು. ಜವಾಬ್ದಾರಿಯನ್ನು ಯಶಸ್ವಿಯಾಗಿ ನೆರವೇರಿಸಿದ ಮಾವುತರ ಬಗ್ಗೆ ಮಾತನಾಡುವಾಗ ಅಧಿಕಾರಿಗಳ ಎದೆತುಂಬಿಬಂತು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ ‘ದಸರಾದಲ್ಲಿ ಪಾಲ್ಗೊಳ್ಳುವುದು ಆನೆಗಳೊಂದಿಗೆ ಇರುವುದು ನಮ್ಮ ಪೂರ್ವಜನ್ಮದ ಪುಣ್ಯ. ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ಅಚ್ಚುಕಟ್ಟಾಗಿ ದಸರಾ ನಡೆಸಿಕೊಟ್ಟಿದ್ದೀರಿ. ತಂಡವಾಗಿ ಕೆಲಸ ಮಾಡಿದ್ದೀರಿ. ಆನೆಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಚೆನ್ನಾಗಿ ಓದಿಸಿ’ ಎಂದು ಸಲಹೆ ನೀಡಿದರು.  ಡಿಸಿಎಫ್‌ ಸೌರಭ್‌ ಕುಮಾರ್ ಮಾತನಾಡಿ ‘ಐಎಫ್‌ಎಸ್‌‍ ಅಧಿಕಾರಿಗಳಾದ ಮಾತ್ರಕ್ಕೆ ನಾವೇನು ಮೇಲಿಂದ ಇಳಿದು ಬಂದಿಲ್ಲ. ನಮ್ಮಿಂದಲೂ ತಪ್ಪುಗಳಾಗಿವೆ. ಅವನ್ನು ಮನ್ನಿಸಬೇಕು. ಕುಟುಂಬದ ಭಾಗವಾಗಿ ನಾವೆಲ್ಲ ಇದ್ದೆವು. ದಸರಾದಲ್ಲಿ ಸಿಕ್ಕ ಅನುಭವಗಳು ಮರೆಯಲಾಗದ್ದು’ ಎಂದರು. ಮಾವುತ ವಸಂತ ಮಾತನಾಡಿ ‘ಕಾಡು ಉಳಿದರೆ ನಾಡು ಬೆಳೆಯಲು ಸಾಧ್ಯ. ಪ್ರಾಣಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು’ ಎಂದು ಮಾತು ಆರಂಭಿಸಿ ‘55 ದಿನಗಳಲ್ಲಿ ಆನೆ ತಾಲೀಮು ಸೌಕರ್ಯ ಕಲ್ಪಿಸುವಲ್ಲಿ ನೆರವಾದ ಅಧಿಕಾರಿಗಳು ಆರ್‌ಎಫ್‌ಒ ಸಂತೋಷ್‌ ಹೂಗಾರ್‌ ಪಶುವೈದ್ಯ ಮುಜೀಬ್ ರೆಹಮಾನ್‌ ಸಿಬ್ಬಂದಿ ಅಕ್ರಮ್‌ ರಂಗರಾಜು ಅವರ ಸಹಾಯವನ್ನು ಮರೆಯುವುದಿಲ್ಲ. ಮುಂದಿನ ವರ್ಷವೂ ಇವರೇ ಇರಲಿ’ ಎಂದರು. ಅದಕ್ಕೆ ಮಾವುತರು– ಕಾವಾಡಿಗರು ‘ಇರಬೇಕು’ ಎಂದು ಧ್ವನಿಗೂಡಿಸಿದರು.

‘ಮಹೇಂದ್ರ ಧನಂಜಯ ಸಿದ್ಧ’

‘ಅಭಿಮನ್ಯು ನಂತರ ಅಂಬಾರಿ ಆನೆಯಾಗಿ ಗೋಪಾಲಸ್ವಾಮಿಯನ್ನು ತಯಾರು ಮಾಡಲಾಗಿತ್ತು. ಈಗ ಅವನಿಲ್ಲ. ಮಹೇಂದ್ರ ಹಾಗೂ ಧನಂಜಯಗೆ ಅಭಿಮನ್ಯುವಿಗೆ ಹೊರಿಸುವ ಭಾರವನ್ನೇ ಹೊರಿಸಿ ತಯಾರು ಮಾಡಲಾಗಿದೆ. ನೆನಪಿನಲ್ಲಿ ಉಳಿಯುವಂತೆ ಮಾಡಲಾಗಿದೆ’ ಎಂದು ಡಿಸಿಎಫ್ ಸೌರಭ್‌ ಕುಮಾರ್ ಹೇಳಿದರು. ‘ಶ್ರೀರಂಗಪಟ್ಟಣ ದಸರೆಯಲ್ಲಿ ಎರಡು ಬಾರಿ ಅಂಬಾರಿ ಹೊತ್ತು ಮಹೇಂದ್ರ ಯಶಸ್ವಿಗೊಳಿಸಿದ್ದಾನೆ. ಅವನ ಮೇಲೆ ನಿರೀಕ್ಷೆಯೂ ಇದೆ. ಅದರಂತೆ ಅಂಬಾರಿ ಹೊರುವ ಕ್ಷಮತೆ ಇರುವ ಎರಡನೇ ಹಾಗೂ ಮೂರನೇ ಸಾಲಿನ ಜೋಡಿ ಆನೆಗಳನ್ನು ತಯಾರು ಮಾಡಲಾಗಿದೆ’ ಎಂದರು.  ‘ನಿಶಾನೆ ಆನೆಗೂ ಮುಂಚೆ ಎರಡ್ಮೂರು ತಂಡಗಳು ಹೊರಟಿದ್ದವು. ಹೀಗಾಗಿ ನೇರವಾಗಿ ಬಲರಾಮ ದ್ವಾರಕ್ಕೆ ಕರೆದೊಯ್ಯಲಾಯಿತು. ನಿಗದಿಯಂತೆಯೇ ನೌಫತ್ ಆನೆಗಳು ಸಾಲಾನೆಗಳು ಅಂಬಾರಿ ಆನೆ– ಕುಮ್ಕಿ ಆನೆಗಳು ತೆರಳಿವೆ. ಇದೇ ಮೊದಲ ಬಾರಿ ನಿಗದಿಯಂತೆ ಬನ್ನಿಮಂಟಪ ತಲುಪಿ ಅರಮನೆ ಬಿಡಾರಕ್ಕೆ ವಾಪಸಾಗಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.