ADVERTISEMENT

ಮೈಸೂರು: ಸರ್ಕಾರಿ ಶಾಲೆ ವಿದ್ಯಾರ್ಥಿ ಈಗ ಇನ್ಫೊಸಿಸ್‌ ಉಪಾಧ್ಯಕ್ಷ!

ಕನ್ನಡದ ದಾರಿಯಲ್ಲಿ–26

ಮೋಹನ್ ಕುಮಾರ ಸಿ.
Published 28 ನವೆಂಬರ್ 2021, 4:10 IST
Last Updated 28 ನವೆಂಬರ್ 2021, 4:10 IST
ನೆದರ್ಲೆಂಡ್‌ನ ಸಭೆಯಲ್ಲಿ ವಿನಾಯಕ್‌ ಪಿ. ಹೆಗಡೆ (ಬಲಬದಿ)
ನೆದರ್ಲೆಂಡ್‌ನ ಸಭೆಯಲ್ಲಿ ವಿನಾಯಕ್‌ ಪಿ. ಹೆಗಡೆ (ಬಲಬದಿ)   

ದೇಶದ ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿ ಇನ್ಫೊಸಿಸ್‌ನ ಉಪಾಧ್ಯಕ್ಷ ಹಾಗೂ ಐವಿಎಸ್‌ ಘಟಕದ ಡೆಲಿವರಿ ಹೆಡ್‌ ಆಗಿರುವ ವಿನಾಯಕ ಪಿ. ಹೆಗಡೆ ಕನ್ನಡ ಮಾಧ್ಯಮದಲ್ಲಿಯೇ ಓದಿದವರು!

ಮೈಸೂರು: ದೇಶದ ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿ ಇನ್ಫೊಸಿಸ್‌ನ ಉಪಾಧ್ಯಕ್ಷ ಹಾಗೂ ಐವಿಎಸ್‌ ಘಟಕದ ಡೆಲಿವರಿ ಹೆಡ್‌ ಆಗಿರುವ ವಿನಾಯಕ ಪಿ. ಹೆಗಡೆ ಕನ್ನಡ ಮಾಧ್ಯಮದಲ್ಲಿಯೇ ಓದಿದವರು!

ಕಂಪನಿಯ ಮೈಸೂರು ಕ್ಯಾಂಪಸ್‌ನಲ್ಲಿ 15 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ವಿನಾಯಕ್‌, ಇಲ್ಲಿನ 1,500 ಕನ್ನಡ ಪ್ರೇಮಿ ಉದ್ಯೋಗಿಗಳು ರಚಿಸಿಕೊಂಡಿರುವ ‘ಗಂಧದ ಗುಡಿ’ ಕನ್ನಡ ಬಳಗದಲ್ಲಿ ಸಕ್ರಿಯರಾಗಿದ್ದಾರೆ.

ADVERTISEMENT

ಉತ್ತರ ಕನ್ನಡದ ಕುಮಟಾದ ಬಗ್ಗೊಣ ಗ್ರಾಮದವರಾದ ಅವರು, ಕಲ್ಬಾಗ್‌, ಬಗ್ಗೊಣ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆದವರು. ಬಾಲ್ಯದಲ್ಲಿ ಮಯೂರ ಸೇರಿದಂತೆ ಕನ್ನಡ ಪತ್ರಿಕೆಗಳನ್ನು ಹಚ್ಚಿಕೊಂಡಿದ್ದರು. ಕನ್ನಡ ಗಾದೆಗಳು, ಚುಟುಕು ಸಾಹಿತ್ಯದಲ್ಲಿ ವಿಶೇಷ ಪ್ರೀತಿ. ಕನ್ನಡ ಭಾಷಣ ಸ್ಪರ್ಧೆಗಳಲ್ಲಿ ಇವುಗಳನ್ನು ಉಪಯೋಗಿಸಿ ಬಹುಮಾನ ಗಿಟ್ಟಿಸುತ್ತಿದ್ದರು.

ಉಗ್ರುಭಟ್ಟರಿಂದ ಕನ್ನಡ ಹಾಗೂ ವಿಜ್ಞಾನವನ್ನು ದಿವಾಕರ ಶಾಸ್ತ್ರಿ, ಗಣಿತವನ್ನು ತಂದೆಯ ದೊಡ್ಡಪ್ಪ– ಈಶ್ವರ ಹೆಗಡೆ ಅವರಿಂದ ಕಲಿತರು. ಮಹಾಭಾರತ, ರಾಮಯಣವಲ್ಲದೇ ಶಿವರಾಮ ಕಾರಂತರ ಲೇಖನಗಳು, ಕಾದಂಬರಿಯ ಸಾರ ಅಜ್ಜನ ಪಾಠದಲ್ಲಿ ಇರುತ್ತಿದ್ದವು.

ಕುಮಟಾದ ಡಾ.ಎ.ವಿ.ಬಾಳಿಗ ಕಲಾ, ವಿಜ್ಞಾನ ಕಾಲೇಜಿನಲ್ಲಿ ಪಿಯು ನಂತರ ಬಾಗಲಕೋಟೆ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಪಡೆದು ಟಿಸಿಎಸ್‌, ವಿಪ‍್ರೊ ಕಂಪನಿಯ ದೇಶ– ವಿದೇಶದ ಕಚೇರಿಗಳಲ್ಲಿ ಕೆಲಸ ಮಾಡಿದ್ದಾರೆ. ಅಮೆರಿಕದ ಹೂಸ್ಟನ್‌ನ ವಿಪ್ರೋ ಕಚೇರಿಯಲ್ಲಿ ಅಕೌಂಟೆಂಟ್‌ ಮ್ಯಾನೇಜರ್‌, ನಂತರ 2007ರಲ್ಲಿ ಇನ್ಪೋಸಿಸ್‌ ಸೇರಿ ಎರಡನೇ ಉನ್ನತ ಹುದ್ದೆಗೇರಿ ಎಂಜಿನಿಯರ್‌ಗಳಿಗೆ ಸ್ಫೂರ್ತಿ ಹಾಗೂ ಮಾದರಿಯಾಗಿದ್ದಾರೆ.

ಇನ್ಫೊಸಿಸ್‌ನ ‘ಗಂಧದಗುಡಿ’ ಕನ್ನಡ ಬಳಗ ಆಯೋಜಿಸುವ ದಸರಾ, ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಬಳಗವು ಕನ್ನಡದ ಸಾಹಿತಿಗಳು, ಕಲಾವಿದರನ್ನು ಕರೆಯಿಸಿ ಸಂವಾದ– ವಿಚಾರ ಸಂಕಿರಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇತರ ಭಾಷಿಕರಲ್ಲಿ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸುತ್ತಿದೆ.

‘ಪೋಷಕರಾದ ಪ್ರಭಾಕರ ಹೆಗಡೆ, ಜಯಲಕ್ಷ್ಮಿ ಕೃಷಿಕರಾದರೂ ಉನ್ನತ ಶಿಕ್ಷಣ‍ ಪಡೆಯಲು ಪ್ರೋತ್ಸಾಹ ನೀಡಿದರು. ಗ್ರಾಮೀಣ ಹಾಗೂ ಬಡತನದ ಹಿನ್ನೆಲೆಯಿಂದ ಬಂದವರಿಗೆ ಕಲಿಯುವ ಹಂಬಲ ಇದ್ದೇ ಇರುತ್ತದೆ. ಮಾತೃಭಾಷೆ ಚೆನ್ನಾಗಿ ಕಲಿತವರು, ಇತರ ಭಾಷೆಗಳನ್ನು ಕಲಿಯುವುದು ಸಾಧ್ಯ. ಸಂವಹನ ಕೌಶಲ ನಡೆಸುವಷ್ಟು ಇಂಗ್ಲಿಷ್‌ ಪರಿಚಯವಿದ್ದರೆ ಸಾಕಷ್ಟೇ. ಬಾಲ್ಯದಲ್ಲಿ ಇಂಗ್ಲಿಷ್‌ ಕಲಿಯುವುದಕ್ಕಾಗಿ ಡೆಕ್ಕನ್‌ ಹೆರಾಲ್ಡ್‌ ಓದುತ್ತಿದ್ದೆ’ ಎಂದು ವಿನಾಯಕ ಹೆಗಡೆ ಹೇಳಿದರು.

‘ಮಾತೃ ಭಾಷೆಯಲ್ಲಿಯೇ ಯೋಚಿಸುತ್ತೇವೆ. ಇಂಗ್ಲಿಷ್‌ನಲ್ಲಿ ಅಭಿವ್ಯಕ್ತಿಸುವ ಕಲೆ ಇದ್ದರೆ ಸಾಕು. ಜಗತ್ತಿನ ಯಾವುದೇ ಮೂಲೆಯಲ್ಲೂ ಕನ್ನಡಿಗರು ಕೆಲಸ ಗಿಟ್ಟಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.