ADVERTISEMENT

ಹೊಸ ವರ್ಷ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ದತೆ, ವಿದ್ಯುತ್‌ ದೀಪಗಳ ಅಲಂಕಾರ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:27 IST
Last Updated 31 ಡಿಸೆಂಬರ್ 2025, 4:27 IST
ಮೈಸೂರಿನ ಕಾಸ್ಮೊಪೊಲಿಟನ್‌ ಕ್ಲಬ್‌ನಲ್ಲಿ ಹೊಸ ವರ್ಷದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿರುವುದು
ಮೈಸೂರಿನ ಕಾಸ್ಮೊಪೊಲಿಟನ್‌ ಕ್ಲಬ್‌ನಲ್ಲಿ ಹೊಸ ವರ್ಷದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿರುವುದು   

ಮೈಸೂರು: ನಗರದಲ್ಲಿ ಹೊಸ ವರ್ಷಾಚರಣೆ ಸ್ವಾಗತಿಸಲು ಸಿದ್ದತೆ ನಡೆಯುತ್ತಿದ್ದು, ಕ್ಲಬ್‌, ಹೋಟೆಲ್‌ಗಳು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ. 

ಹೋಟೆಲ್‌ ಹಾಗೂ ರೆಸಾರ್ಟ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದು, ಹೊಸ ವೇದಿಕೆ, ಟೇಬಲ್‌ಗಳನ್ನು ಹಾಕಲಾಗಿದೆ. ಧ್ವನಿವರ್ಧಕ್‌ ಬಣ್ಣದ ಬೆಳಕು ಚೆಲ್ಲುವ ಲೈಟ್‌, ಲೇಸರ್‌ಗಳು ಜೋಡಣೆಗೊಂಡಿವೆ. ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಪಟಾಕಿ ಅಂಗಡಿಗಳಲ್ಲಿ ಸಾರ್ವಜನಿಕರು ಪಟಾಕಿ ಖರೀದಿಸಿದರು.

ಹೊಸ ವರ್ಷ ಆಚರಣೆಗೆ ಕೇಕ್‌ ಬಳಕೆ ಸರ್ವೆ ಸಾಮಾನ್ಯವಾಗಿದ್ದು, ಬೇಕರಿಗಳು ಕೇಕ್‌ ತಯಾರಿಯಲ್ಲಿ ತೊಡಗಿವೆ. ಹೊಸ ವರ್ಷಕ್ಕಾಗಿ ವಿನೂತನ ವಿನ್ಯಾಸವುಳ್ಳ ಕೇಕ್‌ ತಯಾರಿಸಲಾಗುತ್ತಿದೆ. ತಾರಾ ಹೋಟೆಲ್‌ಗಳಲ್ಲಿ ಎತ್ತರದ ಕೇಕ್‌ ರಚಿಸಲು ತಯಾರಿ ನಡೆದಿವೆ. ಮಾಲ್‌ಗಳೂ ಸಿಂಗಾರಗೊಂಡಿದ್ದು, ಜನರನ್ನು ಸೆಳೆಯಲು ಕಸರತ್ತು ನಡೆಸಿವೆ.

ADVERTISEMENT

ಸಂಗೀತ, ನೃತ್ಯ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ, ಸ್ನೇಹಿತರೊಡಗೂಡಿ ತಮ್ಮ ಮನೆಗಳಲ್ಲಿ, ಹೊಲಗಳಲ್ಲಿ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾಲಾ, ಕಾಲೇಜುಗಳಲ್ಲೂ ವಿದ್ಯಾರ್ಥಿ, ಶಿಕ್ಷಕರು ಅಣಿಯಾಗಿದ್ದಾರೆ. ಪ್ರಮುಖ ದೇವಾಲಯಗಳಲ್ಲೂ ವಿಶೇಷ ಪೂಜೆಗೆ ಏರ್ಪಾಡು ಮಾಡಲಾಗಿದೆ. 

ಪ್ರಮುಖ ಹೋಟೆಲ್‌ ಹಾಗೂ ಪಬ್‌ಗಳು ಪಾರ್ಟಿ ಆಯೋಜಿಸುತ್ತಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಕಾರ್ಯಕ್ರಮಕ್ಕೆ ತಲಾ ₹2 ಸಾವಿರದಿಂದ ₹3 ಸಾವಿರದವರೆಗೆ ಶುಲ್ಕ ನಿಗದಿಪಡಿಸಲಾಗಿದೆ. ಮಾಂಸಾಹಾರ, ಸಸ್ಯಾಹಾರದ ಜೊತೆಗೆ ತರಹೇವಾರಿ ಭಕ್ಷ್ಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಲವು ಹೋಟೆಲ್‌ಗಳು ಪ್ರವೇಶ ಶುಲ್ಕ ₹600 ರಿಂದ ₹1 ಸಾವಿರದವರೆಗೆ ನಿಗದಿಪಡಿಸಿ, ಹೊರಗಡೆಯಿಂದ ಊಟ ತರಲು ಅವಕಾಶ ಕಲ್ಪಿಸಿವೆ. ಈಗಾಗಲೇ ಯುವಕರು ಹಾಗೂ ಕುಟುಂಬದ ಕೆಲವು ಸದಸ್ಯರು ಹೋಟೆಲ್‌, ರೆಸಾರ್ಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.