ADVERTISEMENT

ಹಾಸ್ಟೆಲ್‌ ನಿರ್ಮಾಣ, ಸೌಕರ್ಯಕ್ಕೆ ₹ 250 ಕೋಟಿ

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 16:12 IST
Last Updated 9 ಜನವರಿ 2023, 16:12 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಮೈಸೂರು: ‘ಹಾಸ್ಟೆಲ್‌ಗಳ ನೂತನ ಕಟ್ಟಡ ನಿರ್ಮಾಣಕ್ಕೆ ₹ 100 ಕೋಟಿ ಹಾಗೂ ಹಾಸ್ಟೆಲ್‌ಗಳಿಗೆ ಮೂಲಸೌಲಭ್ಯ ಕಲ್ಪಿಸಲು ₹ 150 ಕೋಟಿ ಅನುದಾನ ನೀಡಲಾಗಿದೆ’ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಡಾ.ಬಿ.ಆರ್.ಅಂಬೇಡ್ಕರ್‌ ಹೆಸರಿನಲ್ಲಿ 100, ಕನಕದಾಸರ ಹೆಸರಿನಲ್ಲಿ 50 ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು. ಮೈಸೂರು ಸೇರಿದಂತೆ ಐದು ಕಡೆ ದೀನದಯಾಳ್ ಉಪಾಧ್ಯಾಯ ಹೆಸರಲ್ಲಿ ಸಾವಿರ ಮಕ್ಕಳ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದರು.

‘ಮುಂದಿನ ವರ್ಷ, ಯಾವುದೇ ಹಾಸ್ಟೆಲ್‌ನಲ್ಲೂ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗಲಿಲ್ಲ ಎಂಬ ಸ್ಥಿತಿ ಬಾರದಂತೆ ನೋಡಿಕೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

‘ಯಾವುದೇ ಸಮುದಾಯ ಪ.ಜಾತಿ ಅಥವಾ ಪ.ಪಂಗಡಕ್ಕೆ ಸೇರಿಸಲು ಮನವಿ ಮಾಡಿದರೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ವರದಿಯಂತೆ ವರದಿಯಂತೆ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತದೆ. ಅನೇಕ ಸಮುದಾಯಗಳು ಮನವಿ ಸಲ್ಲಿಸಿವೆ’ ಎಂದು ಪ್ರತಿಕ್ರಿಯಿಸಿದರು.

‘ಪರಿಶಿಷ್ಟ ಜಾತಿ ಮೀಸಲು ಪ್ರಮಾಣವನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿ ಜಾರಿಗೆ ತಂದಿದೆ. ಷೆಡ್ಯೂಲ್ 9ಕ್ಕೆ ಸೇರಿಸುವುದು ಸರ್ಕಾರದ ಕರ್ತವ್ಯ. ಇದಕ್ಕೆ ಸಮಯದ ಗಡುವು ಹಾಕಿಕೊಂಡಿಲ್ಲ. ಸರ್ವಪಕ್ಷಗಳ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿದ್ದ ವಿರೋಧ ಪಕ್ಷದವರು, ಷೆಡ್ಯೂಲ್‌ 9ಗೆ ಸೇರಿಸಿದ ಬಳಿಕ ಅಭಿನಂದನೆ ಸಲ್ಲಿಸಲಿ’ ಎಂದು ಹೇಳಿದರು.

‘1ರಿಂದ 8ನೇ ತರಗತಿವರೆಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರವೇ ಭರಿಸುವಂತೆ ಹೇಳಿದ್ದರಿಂದ ನೇರವಾಗಿ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿ ವೇತನದ ವಿಚಾರಗಳಲ್ಲಿ ಉಂಟಾಗಿದ್ದ ಗೊಂದಲವನ್ನು ನಿವಾರಿಸಲಾಗಿದೆ. ಅಧಿವೇಶನದಲ್ಲೇ ಈ ಬಗ್ಗೆ ವಿವರ ನೀಡಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಪಕ್ಷದಿಂದ ಕೈಗೊಂಡಿರುವ ಅಭಿಯಾನದಲ್ಲಿ ಬೂತ್‌ ಮೂಲಕ ರಾಜ್ಯ ಗೆಲ್ಲುವುದಕ್ಕೆ ಸಂಘಟನೆ ಮಾಡಲಾಗುತ್ತಿದೆ. ಜನರ ಮನೆಗಳಿಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ. ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಪಕ್ಷದ ತತ್ವ–ಸಿದ್ಧಾಂತ, ಕಾರ್ಯಕ್ರಮಗಳನ್ನು ತಿಳಿಸಲಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ಬುಡ ಅಲುಗಾಡುತ್ತಿದೆ ಎಂಬ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ, ‘ಬಿಜೆಪಿಯ ಬೇರು ಗಟ್ಟಿಯಾಗಿದ್ದು, ಅಲುಗಾಡಿಸಲು ಸಾಧ್ಯವಿಲ್ಲ’ ಎಂದರು.

ಶಾಸಕ ಎಲ್.ನಾಗೇಂದ್ರ, ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ.ಗಿರಿಧರ್, ವಾಣೀಶ್ ಕುಮಾರ್, ಮಾಧ್ಯಮ ವಕ್ತಾರರಾದ ಮಹೇಶ್‌ರಾಜೇ ಅರಸ್, ಪ್ರದೀಪ್ ಕುಮಾರ್, ರಾಜಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.