ADVERTISEMENT

ಮೈಸೂರು: ಉದ್ಯಾನ ಪರಿಚಾರಕರೊಬ್ಬರ ಪರಿಸರ ಪ್ರೇಮ

ರಂಗಾಯಣದಲ್ಲಿ ಹಸಿರು ವನ

ಡಿ.ಬಿ, ನಾಗರಾಜ
Published 5 ಜೂನ್ 2021, 5:28 IST
Last Updated 5 ಜೂನ್ 2021, 5:28 IST
ಮೈಸೂರು ರಂಗಾಯಣದ ಪರಿಸರ
ಮೈಸೂರು ರಂಗಾಯಣದ ಪರಿಸರ   

ಮೈಸೂರು: ಇವರಿಗೆ ಕಿವಿ ಕೇಳದು; ಮಾತೂ ಬಾರದು. ಆದರೆ, ಅವರು ಗಿಡ–ಮರಗಳ ದನಿಗೆ ಕಿವಿಯಾಗಬಲ್ಲರು. ಅವುಗಳೊಂದಿಗೆ ಮನಸಾರೆ ಮಾತಾಡಬಲ್ಲರು. ನಿತ್ಯವೂ ಹಸಿರಿನ ಸಾಂಗತ್ಯದಲ್ಲೇ ಇರುವ ಅವರಿಗೆ ಮರಗಳೊಂದಿಗೆ ಮಾತಿಲ್ಲದ ದಿನವೇ ಇಲ್ಲ.

ತಮ್ಮ ಮಕ್ಕಳನ್ನು ಆರೈಕೆ ಮಾಡಿದಂತೆಯೇ ಮೈಸೂರು ರಂಗಾಯಣದ ಆವರಣದಲ್ಲಿರುವ ಪ್ರತಿಯೊಂದು ಗಿಡವನ್ನೂ ಪೋಷಿಸಿದ್ದಾರೆ. ಸಸಿ ನೆಟ್ಟು ನೀರೆರೆದು–ಗೊಬ್ಬರ ಹಾಕಿ ಮರವನ್ನಾಗಿ ಬೆಳೆಸಿದ್ದಾರೆ. ಪ್ರತಿ ಮರದ ಬೆಳವಣಿಗೆಯಲ್ಲೂ ಇವರ ಬೆವರ ಹನಿಯಿದೆ.

1989ರಿಂದಲೂ ಮೈಸೂರು ರಂಗಾಯಣದ ಉದ್ಯಾನ ಪರಿಚಾರಕರಾಗಿರುವ ಬ್ರಹ್ಮಲಿಂಗಪ್ಪ, ರಂಗಾಯಣದ ಪರಿಸರವನ್ನು ಪರಿಶುದ್ಧವಾಗಿಟ್ಟುಕೊಳ್ಳಲು ಶ್ರಮಿಸುತ್ತಿದ್ದಾರೆ.

ADVERTISEMENT

ರಂಗಭೂಮಿಯ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಿದ್ದಾರೆ. ಇಲ್ಲಿನ ಪ್ರಶಾಂತ ವಾತವರಣದಲ್ಲಿ ಹಕ್ಕಿಗಳ ಕಲರವವನ್ನು ಕೇಳಬಹುದು. ಮುಂಜಾನೆ–ಮುಸ್ಸಂಜೆಯ ವೇಳೆ ನಗರದೊಳಗೆ ನವಿಲಿನ ನರ್ತನವನ್ನೂ ಆಗಾಗ್ಗೆ ನೋಡುವ ಅವಕಾಶವನ್ನು ರಂಗಾಸಕ್ತರಿಗೆ ಕಲ್ಪಿಸಿದ್ದಾರೆ ಬ್ರಹ್ಮಲಿಂಗಪ್ಪ.

ರಂಗ ದಿಗ್ಗಜ ಬಿ.ವಿ.ಕಾರಂತರ ಕಲ್ಪನೆಯ ‘ವನ ರಂಗ’ ಸಾಕಾರಕ್ಕಾಗಿ ದುಡಿದವರಲ್ಲಿ ಬ್ರಹ್ಮಲಿಂಗಪ್ಪ ಒಬ್ಬರು. ಕಾರಂತರ ಆಶಯಕ್ಕೆ ತಕ್ಕಂತೆ ರಂಗಾಯಣದ ಆವರಣದಲ್ಲಿ ಬೆಳೆದಿದ್ದ, ತಾವು ಬೆಳೆಸಿದ್ದ ಮರ–ಗಿಡಗಳನ್ನು ಬಳಸಿಕೊಂಡೇ ರಂಗಭೂಮಿ ಸಜ್ಜಿಕೆ ನಿರ್ಮಿಸಲು ಹೆಗಲಿಗೆ ಹೆಗಲುಕೊಟ್ಟು ಶ್ರಮಿಸಿದವರಲ್ಲಿ ಮುಂಚೂಣಿಯಲ್ಲಿದ್ದರು.

ಮೂರು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ರಂಗಾಯಣದ ಭಾಗವಾಗಿರುವ ಬ್ರಹ್ಮಲಿಂಗಪ್ಪ, ನಿತ್ಯವೂ ಗಿಡ–ಮರಗಳ ಕಾಳಜಿ ಮಾಡುತ್ತಾರೆ. ಅವಕಾಶ ಸಿಕ್ಕ ಕಡೆ ಸಸಿ ನೆಟ್ಟು ಬೆಳೆಸುತ್ತಾರೆ. ಯಾವುದಾದರೂ ಮರಕ್ಕೆ ರೋಗ ತಗುಲಿದರೆ, ಇವರ ಮನಸ್ಸೂ ಮುದುಡುತ್ತದೆ. ತಕ್ಷಣವೇ ಔಷಧೋಪಚಾರ ನಡೆಸಿ, ಗುಣಮುಖವಾಗುವ ತನಕವೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾರೆ.

ಹಲಸು–ಮಾವು ಗಿಡಗಳನ್ನು ಮರವನ್ನಾಗಿ ಬೆಳೆಸಿದ್ದಾರೆ. ರಂಗಾಯಣದ ಸಿಬ್ಬಂದಿಯಿಂದ ಹಿಡಿದು ಶಿಬಿರಾರ್ಥಿಗಳು, ರಂಗಾಸಕ್ತರು ಸಹ ಈ ಮರಗಳ ಹಣ್ಣನ್ನು ಪ್ರತಿ ವರ್ಷವೂ ತಪ್ಪದೇ ಸವಿಯುತ್ತಾರೆ. ರಂಗಾಯಣದ ಆವರಣ ಸದಾ ಹಸಿರಿನಿಂದ ಕಂಗೊಳಿಸಲು ಬ್ರಹ್ಮಲಿಂಗಪ್ಪ ಅವರ ಶ್ರಮವೇ ಕಾರಣ ಎನ್ನುತ್ತಾರೆರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.