ADVERTISEMENT

ಮೈಸೂರು | ‘ಜಿಎಸ್‌ಟಿ ಕುರಿತು ಅನಗತ್ಯ ಆತಂಕ ಬೇಡ’: ಪಿ.ಡಿ. ಶೋಭಾ

ಸಣ್ಣ ವರ್ತಕರು, ಉದ್ಯಮಿಗಳಿಗೆ ಅರಿವು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 3:57 IST
Last Updated 5 ಆಗಸ್ಟ್ 2025, 3:57 IST
   

ಮೈಸೂರು: ‘ಸಣ್ಣ ವರ್ತಕರು, ಉದ್ಯಮಿಗಳು ಜಿಎಸ್‌ಟಿಗೆ ಸಂಬಂಧಿಸಿದ ಯಾವುದೇ ಗೊಂದಲಗಳಿಗೆ ಇಲಾಖೆಯ ಕಚೇರಿ ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು’ ಎಂದು ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಪ್ರಭಾರ ಜಂಟಿ ಆಯುಕ್ತೆ ಪಿ.ಡಿ. ಶೋಭಾ ಹೇಳಿದರು.

ನಗರದ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಆವರಣದಲ್ಲಿ ಸೋಮವಾರ ಸರಕು ಮತು ಸೇವಾ ತೆರಿಗೆ ಕಾನೂನಿನ ಅಡಿಯಲ್ಲಿ ನೋಂದಣಿ ಪಡೆಯುವ ಅಗತ್ಯತೆ ಹಾಗೂ ತೆರಿಗೆ ಪಾವತಿ ಕುರಿತಾಗಿ ವರ್ತಕರು ಮತ್ತು ಉದ್ಯಮಿಗಳಿಗಾಗಿ ಆಯೋಜಿಸಿದ್ದ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಜಿಎಸ್‌ಟಿಗೆ ಸಂಬಂಧಿಸಿ ಇಲಾಖೆಯಿಂದ ನೋಟಿಸ್ ಬಂದ ತಕ್ಷಣ ಆತಂಕಕ್ಕೆ ಒಳಗಾಗಬೇಡಿ. ಯುಪಿಎ ವಹಿವಾಟು ಆಧರಿಸಿ ಕಳೆದ ತಿಂಗಳು ಕೆಲವರಿಗೆ ಇಲಾಖೆಯಿಂದ ಪತ್ರ ಹೋಗಿದೆ. ಆದರೆ ಅದು ನೋಟಿಸ್ ಅಲ್ಲ. ಅರಿವಿನ ಕೊರತೆಯಿಂದ ಸಾಕಷ್ಟು ಗೊಂದಲ ಸೃಷ್ಟಿಯಾಯಿತು’ ಎಂದರು.

ADVERTISEMENT

‘ಇಲಾಖೆ ಹಾಗೂ ವರ್ತಕರ ನಡುವಿನ ಸಂವಹನದ ಕೊರತೆಯಿಂದ ಹಲವು ಗೊಂದಲಗಳು ಉಂಟಾಗಿವೆ. ಅದನ್ನು ನಿವಾರಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಇಲಾಖೆಯ ಸಹಾಯಕ ಆಯುಕ್ತ ಸುಪ್ರೀತ್ ದೇವ್ ಜಿಎಸ್‌ಟಿ ನೋಂದಣಿ, ವಾರ್ಷಿಕ ವಹಿವಾಟು ಮಿತಿ, ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳ ಕುರಿತು ಮಾಹಿತಿ ನೀಡಿದರು.

‘ಸರಕುಗಳಲ್ಲಿ ವ್ಯವಹರಿಸುವವರಿಗೆ ವಾರ್ಷಿಕ ₹40 ಲಕ್ಷ ವಹಿವಾಟಿನ ಮಿತಿ ಹಾಗೂ ಸೇವೆ
ಒದಗಿಸುವವವರಿಗೆ ₹20 ಲಕ್ಷ ಮಿತಿ ಇದೆ. ಯುಪಿಎ ವಹಿವಾಟು ಮೇಲೆ ಜಿಎಸ್‌ಟಿ ವಿಧಿಸಲಾಗಿಲ್ಲ. ಯುಪಿಐ ವಹಿವಾಟು ನೋಂದಣಿ ಮಿತಿ ಮೀರಿದ ವ್ಯಾಪಾರ ಗುರುತಿಸಲು ಮಾತ್ರ ಬಳಸಲಾಗುತ್ತದೆ’ ಎಂದರು.

ಮಾಹಿತಿಗೆ ಇಲಾಖೆಯ ಸಹಾಯವಾಣಿ 0821–2420360 ಅಥವಾ 18004256300 ಸಂಪರ್ಕಿಸುವಂತೆ ಕೋರಿದರು.

ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ‘ಕಳೆದ ತಿಂಗಳು ವರ್ತಕರಿಗೆ ನೀಡಿದ ನೋಟಿಸ್‌ನಿಂದ ಬೆಂಗಳೂರಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಐದು ವರ್ಷದ ನಂತರ ಏಕಾಏಕಿ ನೋಟಿಸ್ ನೀಡಿದ್ದು ಸರಿಯಲ್ಲ. ಅದನ್ನು ಕಟ್ಟುವುದು ಕಷ್ಟಕರ. ಅದರ ಬದಲು ಪ್ರತಿ ವರ್ಷ ತೆರಿಗೆ ಸಂಗ್ರಹಿಸಿದರೆ ಎಲ್ಲರಿಗೂ ಅನುಕೂಲ’ ಎಂದು ಹೇಳಿದರು.

‘ಜಿಎಸ್‌ಟಿಯಲ್ಲಿ ಈಗಾಗಲೇ ಹಲವು ಉತ್ಪನ್ನ ಹಾಗೂ ಸೇವೆಗಳಿಗೆ ವಿನಾಯಿತಿ ನೀಡಿದೆ. ವರ್ತಕರು ತೆರಿಗೆ ಪಾವತಿಗೂ ಆದ್ಯತೆ ನೀಡಬೇಕು. ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.