ಮೈಸೂರು: ‘ಕೇಂದ್ರ ಸರ್ಕಾರವು ‘ಸರಕು ಮತ್ತು ಸೇವಾ ತೆರಿಗೆ’ (ಜಿಎಸ್‌ಟಿ) ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದರಿಂದ ರಾಜ್ಯಕ್ಕೆ ಪ್ರತಿ ವರ್ಷ ₹15ಸಾವಿರ ಕೋಟಿ ನಷ್ಟ ಉಂಟಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತರ್ಕಬದ್ಧಗೊಳಿಸುವುದನ್ನು ಸ್ವಾಗತಿಸುತ್ತೇವೆ. ಆದರೆ, ನಮ್ಮ ವರಮಾನ ಸಂರಕ್ಷಿಸಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕಾಗಿ ಎಂಟು ರಾಜ್ಯಗಳು ಸೇರಿ ಚರ್ಚಿಸಿದ್ದೇವೆ. ₹ 15ಸಾವಿರ ಕೋಟಿ ನಷ್ಟವೆಂದರೆ ಅದೇನೂ ಕಡಿಮೆಯಲ್ಲ. ದೊಡ್ಡ ಮೊತ್ತವೇ’ ಎಂದರು.
‘ಜಿಎಸ್‌ಟಿ ಆರಂಭವಾದ ಮೇಲೆ ಐದು ವರ್ಷ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಈಗ, ಶೇ 12ರಿಂದ 13ರಷ್ಟು ತೆರಿಗೆ ಬೆಳವಣಿಗೆಯಾಗಿದೆ. ಸಿಗರೇಟ್, ಗುಟ್ಕಾ ಮೊದಲಾದ ಐಷಾರಾಮಿ ಸರಕುಗಳು, ಬೆಂಜ್ ಕಾರ್ ಮೊದಲಾದವುಗಳ ಮೇಲೆ ಸೆಸ್ ವಿಧಿಸಿ ಅದರಲ್ಲಿ ನಮಗೆ ಕೊಡಿ ಎಂದು ಕೇಳಿದ್ದೇವೆ’ ಎಂದು ಹೇಳಿದರು.
‘ಜಿಎಸ್‌ಟಿ ಕೌನ್ಸಿಲ್ ಸಭೆ ಸೆ.3 ಹಾಗೂ 4ರಂದು ನಡೆಯಲಿದ್ದು, ನಾನು ಹೋಗುವುದಿಲ್ಲ. ನಮ್ಮ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪಾಲ್ಗೊಳ್ಳಲಿದ್ದು, ಗಂಭೀರವಾಗಿ ಪ್ರಸ್ತಾಪಿಸಲಿದ್ದಾರೆ’ ಎಂದರು.
‘ಸ್ಥಿರಾಸ್ತಿ ನೋಂದಣಿ ಶುಲ್ಕವನ್ನು ಶೇ 1ರಷ್ಟು ಹೆಚ್ಚಿಸಿದ್ದೇವೆ. ದಕ್ಷಿಣದ ರಾಜ್ಯಗಳಿಗೆ ಸಮನಾಗಿ ಏರಿಕೆ ಮಾಡಿದ್ದೇವೆ’ ಎಂದು ಹೇಳಿದರು.
‘ಕೇಂದ್ರದಲ್ಲಿ ಸಚಿವರಾಗಿರುವವರು, ಬಿಜೆಪಿ ಸಂಸದರು ರಾಜ್ಯದ ಪರವಾಗಿ ಎಂದಿಗೂ ಮಾತನಾಡಿಲ್ಲ. ನಮಗೆ ₹ 11,950 ಕೋಟಿ ನಷ್ಟ ಆಗಿದೆ. ಅದರ ಬಗ್ಗೆ ಮಾತನಾಡಿದ್ದಾರೆಯೇ? ಧರ್ಮಸ್ಥಳಕ್ಕೆ ಧರ್ಮಯಾತ್ರೆ ಮಾಡುತ್ತಿರುವ ಅವರು, ರಾಜ್ಯಕ್ಕೆ ಅನ್ಯಾಯ ಆಗಿರುವ ಬಗ್ಗೆ ಚಕಾರ ಎತ್ತುತ್ತಿಲ್ಲವೇಕೆ?’ ಎಂದು ಕೇಳಿದರು.
‘ದಸರಾ ವೈಮಾನಿಕ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಒಪ್ಪಿದ್ದು, ವಿಜಯದಶಮಿ ದಿನವೇ ನಡೆಯಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.