ADVERTISEMENT

ಪ್ರತಿಭೆ ತೋರಿ, ಉನ್ನತ ಹುದ್ದೇಗೇರಿ: ಜಿ.ಟಿ.ದೇವೇಗೌಡ

ಮೈಸೂರು– ಚಾಮರಾಜನಗರ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 7:02 IST
Last Updated 20 ಅಕ್ಟೋಬರ್ 2025, 7:02 IST
ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ಮೈಸೂರು– ಚಾಮರಾಜನಗರ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ– ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡ, ಸೋಮೇಶ್ವರನಾಥ ಸ್ವಾಮೀಜಿ, ಮುಖಂಡ ಡಿ.ಮಾದೇಗೌಡ ಉದ್ಘಾಟಿಸಿದರು
ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ಮೈಸೂರು– ಚಾಮರಾಜನಗರ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ– ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡ, ಸೋಮೇಶ್ವರನಾಥ ಸ್ವಾಮೀಜಿ, ಮುಖಂಡ ಡಿ.ಮಾದೇಗೌಡ ಉದ್ಘಾಟಿಸಿದರು   

ಮೈಸೂರು: ‘ಒಕ್ಕಲಿಗ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಪೋಷಕರು ಹಾಗೂ ಸಮಾಜದ ಗೌರವ ಹೆಚ್ಚಿಸುವ ಕೆಲಸ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳಿಗೇರಲು ಶ್ರಮಿಸಬೇಕು. ಪ್ರತಿಭೆ ತೋರಬೇಕು’ ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು. 

ವಿಜಯನಗರದ ಸಪ್ತಪದಿ ಕಲ್ಯಾಣಮಂಟಪದಲ್ಲಿ ‘ರಾಜ್ಯ ಒಕ್ಕಲಿಗರ ಸಂಘ’ವು ‘ಕೃಷ್ಣಮ್ಮ ರಂಗಮ್ಮ ಶಿಕ್ಷಣ ಟ್ರಸ್ಟ್’ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಮೈಸೂರು– ಚಾಮರಾಜನಗರ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ– ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

‘ಸಮುದಾಯದ ಪ್ರಗತಿಗೆ ಬಹಳಷ್ಟು ಮಹನೀಯರು ಶ್ರಮಿಸಿದ್ದಾರೆ. ಅವರನ್ನು ಮಾದರಿಯಾಗಿಟ್ಟುಕೊಂಡು ಅವರ ದಾರಿಯಲ್ಲಿಯೇ ಸಾಗಬೇಕು. ರಾಷ್ಟ್ರಕವಿ ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕು. ಸಮಾಜದ ಜೊತೆಗೆ ರಾಜ್ಯದ ಕೀರ್ತಿಯನ್ನು ಬೆಳಗಿಸಬೇಕು’ ಎಂದರು.

ADVERTISEMENT

‘ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ವೈದ್ಯಕೀಯ ಕ್ಷೇತ್ರವಲ್ಲದೇ ರಾಜಕೀಯ ಕ್ಷೇತ್ರಕ್ಕೂ ಸಮಾಜದ ಯುವಪೀಳಿಗೆ ಬರಬೇಕು. ಎಲ್ಲಕ್ಕೂ ಶಿಕ್ಷಣವೇ ಅಡಿಪಾಯ. ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು. ಜೊತೆಯಲ್ಲಿ ಸಮಾಜ ಹಾಗೂ ಕುಟುಂಬದ ಹಿರಿಮೆಯನ್ನು ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು. 

ಕಾಂಗ್ರೆಸ್‌ ಮುಖಂಡ ಮರಿತಿಬ್ಬೇಗೌಡ ಮಾತನಾಡಿ, ‘ಭವಿಷ್ಯದಲ್ಲಿ ಜವಾಬ್ದಾರಿ ಹೆಚ್ಚಿಸುವ ಕಾರ್ಯಕ್ಕಾಗಿ ಪುರಸ್ಕಾರ ನೀಡುತ್ತಿರುವುದು ಸ್ತುತ್ಯರ್ಹ. ಮುಂದಿನ ಪೀಳಿಗೆಯನ್ನು ಪ್ರೇರೇಪಿಸುವ ಕಾರ್ಯವಾಗಿದೆ’ ಎಂದು ಶ್ಲಾಘಿಸಿದರು. 

ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ನಂಜಾವಧೂತ ಮಹಾಸ್ವಾಮೀಜಿ, ಆದಿ ಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಕಾಮಗಾರಿ ಸಮಿತಿ ಅಧ್ಯಕ್ಷ ಸಿ.ಜಿ.ಗಂಗಾಧರ, ನಿರ್ದೇಶಕರಾದ ಕೆ.ವಿ.ಶ್ರೀಧರ, ಎಂ.ಬಿ.ಮಂಜೇಗೌಡ, ಜಿಲ್ಲಾಧ್ಯಕ್ಷ ಮರಿಸ್ವಾಮಿ, ಸಹಾಯಕ ಕಾರ್ಯದರ್ಶಿ ಆರ್.ಹನುಮಂತರಾಯಪ್ಪ, ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿ ಅಧ್ಯಕ್ಷ ವೆಂಕಟರಾಮೇಗೌಡ, ನೇಗಿಲಯೋಗಿ ರವಿ, ವೈದ್ಯ ಡಾ.ಎಚ್.ಆಂಜಿನಪ್ಪ, ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ ಅಧ್ಯಕ್ಷ ಎಸ್.ಡಿ.ಅಶೋಕ್ ಜಯರಾಂ, ಇಂದ್ರಮ್ಮ ಪಾಲ್ಗೊಂಡಿದ್ದರು. 

ಪುರಸ್ಕಾರ ನಗದು ಬಹುಮಾನ 

2024–25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ಕುಂಬಾರಕೊಪ್ಪಲಿನ ಕೆ.ಪ್ರಥಮ್‌ ಗೌಡ ಹೆಬ್ಬಾಳದ ಯು. ಪೃಥ್ವಿ ಬಿಳಿಕೆರೆಯ ಭವನ್‌ ರಮೇಶ್ ಹುಣಸೂರಿನ ಆರ್‌.ಕ್ಷಣ ಎಚ್.ಡಿ.ಕೋಟೆಯ ಜೀವನ್‌ ಎಲ್‌.ಗೌಡ ಸೇರಿದಂತೆ 90 ಮಂದಿಗೆ ₹ 5 ಸಾವಿರ ಚೆಕ್‌ ಜೊತೆಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.  ಪಿಯು ಪರೀಕ್ಷೆಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ಮೈಸೂರು ಜಿಲ್ಲೆಯ ಗಮಿಕಾ ವಿ.ಎ.ಭಾವೈಕ್ಯ ಲಿಖಿತಾ ಸಿ.ಚರಣ್‌ ಜೀವಿತಾಶ್ರೀ ಹಿಮಂತ್ ಚಾಮರಾಜನಗರದ ಬಿ.ಎನ್‌.ರಕ್ಷಿತ್ ಪಿ.ಸೃಜನ್‌ಗೌಡ ಸೇರಿದಂತೆ 71 ಮಂದಿಗೆ ‍ಪುರಸ್ಕಾರ ವಿತರಿಸಲಾಯಿತು.  ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಮಾದೇಗೌಡ ಡಿವೈಎಸ್‌ಪಿ ಶಾಂತಮಲ್ಲಪ್ಪ ಯುಪಿಎಸ್‌ಸಿ ಉತ್ತೀರ್ಣ ಶ್ರೇಯಸ್ ಪತ್ರಕರ್ತ ವಿನೋದ್ ಭೈರಪ್ಪ ಅವರನ್ನು ಸನ್ಮಾನಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.