ADVERTISEMENT

ಅರ್ಹರಿಗೆ ‘ಗ್ಯಾರಂಟಿ’ ಯೋಜನೆ ತಲುಪಿಸಿ: ಅರುಣ್ ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 4:41 IST
Last Updated 23 ಜನವರಿ 2026, 4:41 IST
ತಿ.ನರಸೀಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಗುರುವಾರ ನಡೆಯಿತು. ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪಾಲ್ಗೊಂಡಿದ್ದರು
ತಿ.ನರಸೀಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಗುರುವಾರ ನಡೆಯಿತು. ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪಾಲ್ಗೊಂಡಿದ್ದರು   

ತಿ.ನರಸೀಪುರ: ವರುಣಾ ಹಾಗೂ ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಮೈಸೂರು ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ರಾಜ್ಯದ ಜನರ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದೆ.‌ ಈ ಯೋಜನೆಗಳು ಅರ್ಹರಿಗೆ ತಲುಪಿಸುವಲ್ಲಿ ಯಾವುದೇ ವಿಳಂಬವಾಗಬಾರದು. ಪ್ರತಿ ಹಂತದಲ್ಲೂ ಅಧಿಕಾರಿಗಳು ಗಮನಿಸಿ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಹಾಗೂ ನಿಗದಿತ ಸಮಯದಲ್ಲಿ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಶೇ 100ರಷ್ಟು ಆಗಬೇಕು. ಯೋಜನೆಯ ಅನುಷ್ಠಾನದಲ್ಲಿ ಪ್ರಾಮಾಣಿಕವಾಗಿದ್ದು, ಅನರ್ಹರನ್ನು ಬಿಟ್ಟು ಅರ್ಹರಿಗೆ ಸೌಲಭ್ಯ ದೊರಕಿಸುವಂತಾಗಬೇಕು ಎಂದರು.

ADVERTISEMENT

ಅನುಷ್ಠಾನ ಸಮಿತಿ ಉಪಾಧ್ಯಕ್ಷ ಪ್ರೊ.ಕೆ.ಸಿ.ಶಿವಕುಮಾರ್ ಮಾತನಾಡಿ, ಸರ್ಕಾರ ಬಡತನ ನಿವಾರಣೆ ಮತ್ತು ಜನ ಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಪಂಚ ಗ್ಯಾರಂಟಿ ಯೋಜನೆ ಮೂಲಕ ಸವಲತ್ತುಗಳನ್ನು ನೀಡುತ್ತಿದೆ. ಸಾರ್ವಜನಿಕ ಸ್ಥಳಗಳು ಸೇರಿದಂತೆ ಕಚೇರಿಗಳಲ್ಲಿ ಯೋಜನೆಗಳ ಫಲಕ ಅಳವಡಿಸಿ. ಅಧಿಕಾರಿಗಳು ಕೇವಲ ಸಭೆಗಳಿಗೆ ಮಾತ್ರವಲ್ಲದೆ ಅನುಷ್ಠಾನಕ್ಕೂ ಹೆಚ್ಚು ಒತ್ತು ನೀಡಿ ಸೌಲಭ್ಯ ಫಲಾನುಭವಿಗಳಿಗೆ ತಲುಪಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಿತಿ ಸದಸ್ಯರನ್ನು ಒಳಗೊಂಡಂತೆ ಸಭೆಗಳನ್ನು ಮಾಡಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಮತ್ತೊಬ್ಬ ಉಪಾಧ್ಯಕ್ಷ ಹುಣಸೂರು ಬಸವಣ್ಣ ಮಾತನಾಡಿ, ರಾಜ್ಯ ಸರ್ಕಾರ ಸಮಾಜದ ಹಿಂದುಳಿದ ವರ್ಗದ ಜನರ ಆರ್ಥಿಕ ಸಬಲತೆ ಹಾಗೂ ಅವರ ಜೀವನ ಮಟ್ಟ ಸುಧಾರಣೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಬಲವಾಗಿ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಅಸಹಾಯಕ ಮತ್ತು ಬಡ ಕುಟುಂಬಗಳಿಗೆ ಸಹಕಾರಿಯಾಗಿದೆ. ಯೋಜನೆಗಳ ಸೌಲಭ್ಯ ಒದಗಿಸುವಲ್ಲಿ ಮೈಸೂರು ಜಿಲ್ಲೆ ಉತ್ತಮ ಸ್ಥಾನದಲ್ಲಿದೆ ಎಂದರು.

ಪಂಚ ಗ್ಯಾರಂಟಿ ಯೋಜನೆ ಸಂಬಂಧ ಅಧಿಕಾರಿಗಳು ಪ್ರತಿ ತಿಂಗಳು ಸಾರ್ವಜನಿಕರನ್ನೊಳಗೊಂಡ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ವಿವಿಧ ತಾಂತ್ರಿಕ ದೋಷಗಳಿಂದ ಪಂಚ ಗ್ಯಾರಂಟಿ ಯೋಜನೆಯಿಂದ ವಂಚಿತ ರಾಗಿರುವವರನ್ನು ಗುರುತಿಸಿ ಅರ್ಹರಿಗೆ ಯೋಜನೆ ಫಲ ದೊರಕಿಸುವಂತೆ ಅವರು ಸೂಚಿಸಿದರು.

ಕೌಶಲಾಭಿವೃದ್ಧಿ ನಿಗಮದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ತಾಲ್ಲೂಕಿನ ನಿರುದ್ಯೋಗಿಗಳು ಯೋಜನೆಯ ಪ್ರಯೋಜನ ಪಡೆಯುವಂತೆ ಹೇಳಿದರು.

ಶಿಕ್ಷಣ ಇಲಾಖೆಯ ರಾಹುಲ್ ಮಾತನಾಡಿ, ಯುವನಿಧಿ ಯೋಜನೆಯಡಿ 1308 ಫಲಾನುಭವಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ತಾಲೂಕಿನ ಇಬ್ಬರು ಪದವಿ ವಿದ್ಯಾರ್ಥಿಗಳು ಹಾಗು 17 ಮಂದಿ ಡಿಪ್ಲೊಮ ವಿದ್ಯಾರ್ಥಿಗಳಿದ್ದಾರೆ, ಯುವ ನಿಧಿ ಯೋಜನೆಯಡಿ 364 ಮಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸೆಸ್ಕ್‌ ಅಧಿಕಾರಿ ವೀರೇಶ್, ತಾಲ್ಲೂಕಿನಲ್ಲಿ ಗೃಹಜ್ಯೋತಿ ಯೋಜನೆಯಡಿ 79,177 ಮಂದಿ ಗ್ರಾಹಕರು ಯೋಜನೆಗೆ ಅರ್ಹರಾಗಿದ್ದು, ಈ ವರೆಗೆ ₹78.81 ಕೋಟಿ ಯೋಜನೆಯಡಿ ಖರ್ಚಾಗಿದೆ ಎಂದು ತಮ್ಮ ಇಲಾಖೆಯ ಪ್ರಗತಿ ವಿವರ ನೀಡಿದರು.

ಗೃಹಲಕ್ಷ್ಮಿ ಯೋಜನೆ ಮಾಹಿತಿ ನೀಡಿದ ತಾ.ಪಂ.ಇಒ ರಂಗಸ್ವಾಮಿ, ನವೆಂಬರ್ ತಿಂಗಳವರೆಗೆ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಹಣ ಡಿಬಿಟಿ ಮೂಲಕ ಜಮೆ ಆಗಿದೆ. ಯೋಜನೆಗಳಿಗೆ ಸೇರ್ಪಡೆಯಾಗದವರನ್ನು ಗುರುತಿಸಿ ಅವರಿಗೆ ಸೌಲಭ್ಯ ತಲುಪಿಸುವಂತೆ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದ ಫಲಾನುಭವಿಗಳು ಮರಣ ಹೊಂದಿದ್ದರೆ ಆ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು. ಅನ್ನಭಾಗ್ಯ, ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಭೆಯಲ್ಲಿ ಪ್ರಗತಿಯ ವರದಿ ನೀಡಿದರು.