ADVERTISEMENT

ಮಹಿಳಾ ದಸರಾ: ‘ಬದಲಾದ ಬದುಕು’ ಗ್ಯಾರಂಟಿ ಮೇಲೆ ಬೆಳಕು

ಪಂಚ ಗ್ಯಾರಂಟಿ ಯೋಜನೆಗಳ ಕುರಿತು ನಾಟಕ

ಎಂ.ಮಹೇಶ
Published 11 ಸೆಪ್ಟೆಂಬರ್ 2025, 5:33 IST
Last Updated 11 ಸೆಪ್ಟೆಂಬರ್ 2025, 5:33 IST
ಧಾನ್ಯಗಳಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸಿರುವುದು (ಸಾಂಕೇತಿಕ ಚಿತ್ರ)
ಧಾನ್ಯಗಳಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸಿರುವುದು (ಸಾಂಕೇತಿಕ ಚಿತ್ರ)   

ಮೈಸೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಪಂಚ ಗ್ಯಾರಂಟಿ’ ಯೋಜನೆಗಳಿಂದ ಜನರ ಜೀವನದ ಮೇಲೆ ಉಂಟಾಗಿರುವ ಸಕಾರಾತ್ಮಕ ಬದಲಾವಣೆ ಮೇಲೆ ಬೆಳಕು ಚೆಲ್ಲುವ ನಾಟಕವನ್ನು ‘ಮಹಿಳಾ ದಸರಾ’ ವೇದಿಕೆಯಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆದಿದೆ.

ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಹೇಗೆ ನೆರವಾಗಿವೆ ಎಂಬುದನ್ನು ಬಿಂಬಿಸಲು ತೀರ್ಮಾನಿಸಲಾಗಿದೆ. 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಒದಗಿಸುವ ‘ಗೃಹಜ್ಯೋತಿ’, ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ‘ಶಕ್ತಿ’, 10 ಕೆ.ಜಿ. ಅಕ್ಕಿ ದೊರೆಯುವ ‘ಅನ್ನಭಾಗ್ಯ’, ಮನೆಯ ಯಜಮಾನಿಗೆ ತಿಂಗಳಿಗೆ ₹ 2 ಲಕ್ಷ ಸಿಗುವ ‘ಗೃಹಲಕ್ಷ್ಮಿ’, ಪದವೀಧರರಿಗೆ ಇಂತಿಷ್ಟು ಆರ್ಥಿಕ ನೆರವು ನೀಡುವ ‘ಯುವನಿಧಿ’ ಯೋಜನೆಗಳ ಕುರಿತು ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ.

ಜೆ.ಕೆ. ಮೈದಾನದಲ್ಲಿರುವ ಎಂಎಂಸಿಆರ್‌ಐ ಸಭಾಂಗಣದಲ್ಲಿ ಮೈಸೂರು ರಂಗಾಯಣ ತಂಡದವರು ಸೆ.23ರಂದು ‘ಬದಲಾದ ಬದುಕು’ ಶೀರ್ಷಿಕೆಯ ನಾಟಕವನ್ನು ಪ್ರದರ್ಶಿಸಲಿದ್ದಾರೆ. ನಿತ್ಯವೂ ಸಂಜೆ ಮಹಿಳಾ ತಂಡಗಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮೀಳೆಯರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಲಾಗುತ್ತಿದೆ.

ADVERTISEMENT

ಏನೇನು ಕಾರ್ಯಕ್ರಮಗಳು?

ಈ ಬಾರಿ 5 ದಿನಗಳ ಬದಲಿಗೆ 4 ದಿನ ಮಾತ್ರ ಮಹಿಳಾ ದಸರಾ ನಡೆಯಲಿದೆ. 23ರಂದು ಬೆಳಿಗ್ಗೆ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 11ಕ್ಕೆ ಜೆ.ಕೆ. ಮೈದಾನದ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸುವರು. ಸಂಜೆ ಮೈಸೂರು ನಗರ, ಮೈಸೂರು ತಾಲ್ಲೂಕು ನಗರ ಹಾಗೂ ಹುಣಸೂರು ತಾಲ್ಲೂಕು ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸೆ.24ರಂದು ಲೇಖಕಿ ಕುಸುಮಾ ಆಯರಹಳ್ಳಿ ‘ನವಮಾಧ್ಯಮಗಳು ಮತ್ತು ಮಹಿಳೆಯರು’ ವಿಷಯ ಮಂಡಿಸುವರು. ರುಕ್ಮಿಣಿ ತಂಡದವರು ಶಾಸ್ತ್ರೀಯ ಸಂಗೀತ, ಸಮೂಹ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಟಿಬೆಟಿಯನ್‌ ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಮೆಮೋರಿ ಟೆಸ್ಟ್, ಲಗೋರಿ, ಹಬ್ಬಜಗ್ಗಾಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

‘ಸಾಮಾಜಿಕ ಜಾಲತಾಣ, ಸೈಬರ್‌ ಅಪರಾಧ’ ವಿಷಯ ಕುರಿತು ‘ಜಿ–ಸ್ಕ್ವಾಡ್’ ತಂಡದಿಂದ ನಾಟಕ ಪ್ರದರ್ಶನವಿದೆ. ಬುಡಕಟ್ಟು ಮಹಿಳೆಯರಿಂದ ನೃತ್ಯ, ನಂಜನಗೂಡು ತಾಲ್ಲೂಕು ಮಹಿಳೆಯರಿಂದ ಸಮೂಹ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. 

ಮಹಿಳಾ ದಸರೆಗಾಗಿ ₹ 55 ಲಕ್ಷ ಅನುದಾನ ಕೇಳಿದ್ದೇವೆ. ₹ 30 ಲಕ್ಷ ಖರ್ಚಿನೊಳಗೆ ಮುಗಿಸುವಂತೆ ಜಿಲ್ಲಾಡಳಿತ ತಿಳಿಸಿದೆ.
– ಸವಿತಾ, ಉಪ ವಿಶೇಷಾಧಿಕಾರಿ ಮಹಿಳಾ ದಸರಾ ಉಪ ಸಮಿತಿ

ಮೈಸೂರು ರೇಷ್ಮೆ ಸೀರೆಯುಟ್ಟು ಮೈಸೂರು ಮಲ್ಲಿಗೆ ಮುಡಿದು...

ಸೆ. 25ರಂದು ಮೈಸೂರು ಪರಂಪರೆ ಬಿಂಬಿಸುವ ಉದ್ದೇಶದಿಂದ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯ ದೇವಸ್ಥಾನ ಆವರಣದಿಂದ ಜೆ.ಕೆ. ಮೈದಾನದವರೆಗೆ ‘ವಾಕಥಾನ್‌’ (ಮೆರವಣಿಗೆ) ಹಮ್ಮಿಕೊಳ್ಳಲಾಗಿದೆ. 1500ಕ್ಕೂ ಹೆಚ್ಚು ಮಹಿಳೆಯರು ಮೈಸೂರು ರೇಷ್ಮೆ ಸೀರೆಯುಟ್ಟು ಮೈಸೂರು ಮಲ್ಲಿಗೆ ಹೂವು ಮುಡಿದು ಮೆರವಣಿಗೆಯಲ್ಲಿ ‘ಮೈಸೂರು ವಿಶೇಷದ ಕಂಪು’ ಚೆಲ್ಲಲಿದ್ದಾರೆ.

ಮೈಸೂರು ವೀಳ್ಯದೆಲೆ ಮೈಸೂರು ಪಾಕ್‌ ನಂಜನಗೂಡು ರಸಬಾಳೆ ಮೊದಲಾದ ಮೈಸೂರಿನ ವಿಶೇಷಗಳನ್ನು ವಾಹನದಲ್ಲಿ ಮೆರವಣಿಗೆಯುದ್ದಕ್ಕೂ ಪ್ರದರ್ಶಿಸಲಾಗುವುದು. ಕಂಸಾಳೆ ಕೋಲಾಟ ಪೂಜಾ ಕುಣಿತ ಕೀಲು ಕುಣಿತ ಕಾರ್ಯಕ್ರಮಕ್ಕೂ ಮಹಿಳೆಯರಿಗೆ ಅವಕಾಶ ನೀಡಲಾಗುತ್ತಿದೆ. ಸಂಜೆ ಕರಾಟೆ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕೆ.ಆರ್. ನಗರ ಹಾಗೂ ಎಚ್‌.ಡಿ. ಕೋಟೆ ತಾಲ್ಲೂಕಿನ ಮಹಿಳೆಯರು ಪ್ರತಿಭೆ ಪ್ರದರ್ಶಿಸುವರು.

ಮಹಿಳಾ ದಿನದ ನಿಮಿತ್ತ ಮೈಸೂರು ವಿ.ವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಅವರಿಂದ ಉಪನ್ಯಾಸ ಜಾನಪದ ಹಾಸ್ಯ ಜಾದೂಗಾರ ಕಡಬ ಶ್ರೀನಿವಾಸ್ ಅವರಿಂದ ಪ್ರದರ್ಶನ ಅಂಗವಿಕಲರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪ ಸಮಿತಿಯ ಉಪ ವಿಶೇಷಾಧಿಕಾರಿ ಸವಿತಾ ಹಾಗೂ ಕಾರ್ಯಾಧ್ಯಕ್ಷ ಬಸವರಾಜು ಬಿ. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ವೇದಿಕೆ

‘26ರಂದು ಲಿಂಗತ್ವ ಅಲ್ಪಸಂಖ್ಯಾತರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ವಿಶೇಷ. ಹಿರಿಯ ನಾಗರಿಕರಿಗೆ ಸಮೂಹ ನೃತ್ಯ ವಿವಿಧ ಸ್ಪರ್ಧೆ ಜರುಗಲಿದೆ. ಅಂದು ಸಂಜೆ ಪಿರಿಯಾಪಟ್ಟಣ ತಿ.ನರಸೀಪುರ ತಾಲ್ಲೂಕು ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೊಡವ ನೃತ್ಯ ಪ್ರದರ್ಶನ ರಂಜಿಸಲಿದೆ.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು. ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಒಟ್ಟು 60 ಮಳಿಗೆಗಳು ಇರಲಿವೆ’ ಎಂದು ಉಪ ಸಮಿತಿಯ ಕಾರ್ಯಾಧ್ಯಕ್ಷ ಬಸವರಾಜು ಬಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.