ADVERTISEMENT

ಬಂದೂಕು ಪರವಾನಗಿ: ಪರಿಶೀಲನೆಗೆ ಕಮಿಷನರ್‌ ಆದೇಶ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 17:42 IST
Last Updated 17 ಜುಲೈ 2018, 17:42 IST

ಮೈಸೂರು: ನಗರ ಮಿತಿಯಲ್ಲಿ ನೀಡಿರುವ ಬಂದೂಕು ಪರವಾನಗಿಗಳನ್ನು ಪರಿಶೀಲನೆಗೆ ಒಳಪಡಿಸಿ ನವೀಕರಣ ಮಾಡುವಂತೆ ಪೊಲೀಸ್ ಕಮಿಷನರ್‌ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ಆದೇಶ ನೀಡಿದ್ದಾರೆ.

ಜಯ ಕರ್ನಾಟಕ ಸಂಸ್ಥೆಯ ನಗರಾಧ್ಯಕ್ಷ ಸತೀಶ್ ಗೌಡ ಅವರು ಕೆ.ಆರ್.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಶೂಟ್‌ ಔಟ್‌ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈ ಸಂಬಂಧ ಅವರ ವಿರುದ್ಧ ಇದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಅವರನ್ನು ರೌಡಿ ಪಟ್ಟಿಗೆ ಸೇರಿಸಲಾಗಿತ್ತು.

ಹೀಗಿದ್ದೂ, ಸತೀಶ್ ಗೌಡ ಅವರಿಗೆ ಬಂದೂಕು ಪರವಾನಗಿ ನೀಡಿರುವ ಕುರಿತು ಅನುಮಾನಗೊಂಡ ಕಮಿಷನರ್‌, ತನಿಖೆಗೆ ಆದೇಶಿದ್ದರು. ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಸತೀಶ್‌ ಗೌಡ ಶೂಟ‌್ ಔಟ್‌ ಪ್ರಕರಣಕ್ಕೂ ಹಿಂದೆಯೇ ಬಂದೂಕು ಪರವಾನಗಿ ಪಡೆದಿದ್ದರು. ಆದರೆ, ಕೆ.ಆರ್‌.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕವೂ, ಸತೀಶ್‌ ಗೌಡ ಕುವೆಂಪುನಗರ ಪೊಲೀಸ್ ಠಾಣೆಗೆ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪರವಾನಗಿ ನವೀಕರಣಗೊಂಡಿರುವುದು ಪತ್ತೆಯಾಗಿದೆ.

ADVERTISEMENT

ಎರಡು ಪೊಲೀಸ್‌ ಠಾಣೆಗಳ ನಡುವಿನ ಸಂವಹನ ಗೊಂದಲದಿಂದ ಪರವಾನಗಿ ಲೈಸೆಲ್ಸ್ ನವೀಕರಣಗೊಂಡಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಕಮಿಷನರ್‌ ಆದೇಶಿಸಿದ್ದಾರೆ.

1,098 ಲೈಸೆನ್ಸ್‌ಗಳ ಪರಿಶೀಲನೆ:

ನಗರಮಿತಿಯಲ್ಲಿ ಒಟ್ಟು 1,098 ಮಂದಿಗೆ ಬಂದೂಕು ಪರವಾನಗಿ ನೀಡಲಾಗಿದೆ. ಸತೀಶ್‌ ಗೌಡ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪೊಲೀಸರು, ಕಮಿಷನರ್ ಆದೇಶದ ಮೇಲೆ ತನಿಖೆ ಆರಂಭಿಸಿದ್ದಾರೆ. ಪರವಾನಗಿ ಹೊಂದಿರುವವರ ಪೈಕಿ ಕ್ರಿಮಿನಲ್‌ ಹಿನ್ನೆಲೆ ಇರುವವರು ಇದ್ದಲ್ಲಿ, ಅಂಥವರ ಪರವಾನಗಿ ರದ್ದು ಪಡಿಸಲಾಗುವುದು. ಅಲ್ಲದೇ, ಪರವಾನಗಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಮಿಷನರ್‌ ಸುಬ್ರಹ್ಮಣ್ಯೇಶ್ವರ ರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.