
ಮೈಸೂರು: ‘ಸತ್ಯದ ಬೀಜ ಬಿತ್ತಿ, ನೀರೆರದು ಪೋಷಿಸಿ, ದೊಡ್ಡ ಮರವಾಗಿಸುವ ಕೆಲಸ ಸಂಶೋಧಕರದ್ದಾಗಿದೆ. ಸಂಶೋಧನೆಗಳು ಸತ್ಯದ ಹಾದಿಯಲ್ಲಿ ನಡೆಯಬೇಕಿದೆ’ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಪ್ರತಿಪಾದಿಸಿದರು.
ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ‘ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ’ವು ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಮತ್ತು 2025–26ನೇ ಸಾಲಿನ ಸಂಘ ಉದ್ಘಾಟಿಸಿ ಮಾತನಾಡಿ, ‘ಸತ್ಯದ ಮುಂದುವರಿಕೆಯನ್ನು ಸಂಶೋಧನಾ ರೂಪದಲ್ಲಿ ಶೈಕ್ಷಣಿಕ ಲೋಕಕ್ಕೆ ಸಂಶೋಧನಾ ವಿದ್ಯಾರ್ಥಿಗಳು ಅರ್ಪಿಸಬೇಕಿದೆ’ ಎಂದರು.
‘ವಿಶ್ವವಿದ್ಯಾಲಯಗಳ ವಾತಾವರಣ ಛಿದ್ರತೆಯಿಂದ ಕೂಡಿದೆ. ಸಂಘದ ಅಧ್ಯಕ್ಷರು ಗೆದ್ದ ಬಣದ ಅಧ್ಯಕ್ಷರಲ್ಲ. ಅವರು ಎಲ್ಲರಿಗೆ ಸೇರಿದವರು. ಪ್ರತಿಯೊಬ್ಬ ಸಂಶೋಧಕನೂ ದ್ವೀಪದಂತಾಗಿದ್ದಾನೆ ಎಂಬುದು ಕಳವಳ ಹುಟ್ಟಿಸುತ್ತದೆ. ಸಂಶೋಧನೆ ಏಕವಾದರೂ, ಸಂವಾದ ನಡೆಯುವ ವಾತಾವರಣ ನಿರ್ಮಾಣವಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘20 ವರ್ಷದ ಹಿಂದಿನಿಂದಲೂ ನಾನೂ ಸಂಶೋಧನಾ ವಿದ್ಯಾರ್ಥಿಯೇ ಆಗಿದ್ದೇನೆ. ಸಂಶೋಧಕರ ಸಂಘಕ್ಕೆ 25 ವರ್ಷದ ಇತಿಹಾಸವಿದ್ದು, ಅದಕ್ಕೆ ಚುನಾವಣೆ ನಡೆಯುತ್ತದೆ, ದೊಡ್ಡ ಆಡಳಿತ ವರ್ಷ ಅದರ ಬೆನ್ನ ಹಿಂದಿದೆ ಎಂಬುದನ್ನು ಕೇಳಿಯೇ ಕುತೂಹಲವಿತ್ತು. ನನಗೆ ನಾದಬ್ರಹ್ಮ ಎನ್ನುವ ಬದಲು ನಾನು ಸಂಶೋಧನೆ ಮಾಡಿದ ‘ಐದನಿ ಶಾಸ್ತ್ರ’ ಅನ್ನು ನನ್ನ ಹೆಸರಿನ ಪಕ್ಕದಲ್ಲೇ ಇಟ್ಟು ಕರೆದಿರುವುದು ಕಿವಿಗೆ ಸುಖ ಕೊಟ್ಟಿತು’ ಎಂದರು.
‘ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್, ಶ್ಯಾಮಶಾಸ್ತ್ರಿ ಹಾಗೂ ಪಾಶ್ಚಾತ್ಯ ಸಂಗೀತದಲ್ಲಿ ತ್ರಿಮೂರ್ತಿಗಳಾದ ಬಾಕ್, ಬಿತೊವೆನ್, ಬ್ರಾಮ್ಸ್ ಅವರು ನಾದಬ್ರಹ್ಮರಾಗಿದ್ದಾರೆ. ವಿಶ್ವವಿದ್ಯಾಲಯದವರು ಕೊಟ್ಟಿರುವ ಐದನಿ ಐಕಾನ್ ಹೆಸರು ನನ್ನ ತಲೆ ಮೇಲಿರಲಿ’ ಎಂದು ನಗೆಯುಕ್ಕಿಸಿದರು.
ಶಿಕ್ಷಣ ತಜ್ಞ ಶ್ರೀಪಾದ ಭಟ್, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಸಾಮಾಜಿಕ ಹೋರಾಟಗಾರರಾದ ಅಹಿಂದ ಜವರಪ್ಪ, ಸವಿತಾ ಪ.ಮಲ್ಲೇಶ, ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ್, ಎಂ.ಶಿವಪ್ರಸಾದ್, ಮರಿದೇವಯ್ಯ, ಪತ್ರಿಕೋದ್ಯಮಿ ರಶ್ಮಿ ಕೋಟಿ, ಸಿಂಡಿಕೇಟ್ ಸದಸ್ಯರಾದ ನಟರಾಜ್ ಶಿವಣ್ಣ, ಕ್ಯಾತನಹಳ್ಳಿ ನಾಗರಾಜು, ಸಂಘದ ಉಪಾಧ್ಯಕ್ಷ ಕೆ.ಮಲ್ಲೇಶ, ಪ್ರಧಾನ ಕಾರ್ಯದರ್ಶಿ ನವೀನ್ ಬೂದಿತಿಟ್ಟು, ಕಲ್ಲಹಳ್ಳಿ ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.