ADVERTISEMENT

ಮೈಸೂರು: ಹರಿಹರನ್‌ ಹರಿಸಿದ ಗಾನ ಲಹರಿ..

ಅರಮನೆ ಹೊಂಬೆಳಗಿನಲಿ ಗಝಲ್, ಭಜನ್‌, ಸಿನಿಮಾ ಗೀತೆಗಳ ಹೂರಣ

ಮೋಹನ್ ಕುಮಾರ ಸಿ.
Published 23 ಸೆಪ್ಟೆಂಬರ್ 2025, 5:48 IST
Last Updated 23 ಸೆಪ್ಟೆಂಬರ್ 2025, 5:48 IST
ಮೈಸೂರಿನ ಅರಮನೆ ವೇದಿಕೆಯಲ್ಲಿ ಸೋಮವಾರ ಗಾಯಕ ಹರಿಹರನ್ ಹರಿಸಿದ ಗಾನ ಲಹರಿ –ಪ್ರಜಾವಾಣಿ ಚಿತ್ರ
ಮೈಸೂರಿನ ಅರಮನೆ ವೇದಿಕೆಯಲ್ಲಿ ಸೋಮವಾರ ಗಾಯಕ ಹರಿಹರನ್ ಹರಿಸಿದ ಗಾನ ಲಹರಿ –ಪ್ರಜಾವಾಣಿ ಚಿತ್ರ   

ಮೈಸೂರು: ಅರಮನೆಯ ಹೊಂಬಣ್ಣದ ಮೆರುಗಿನಲ್ಲಿ ಗಾಯಕ ಹರಿಹರನ್ ಹರಿಸಿದ ಗಾನಸುಧೆಯಲ್ಲಿ ಮಿಂದ ಸಹೃದಯರು ಗಝಲ್, ಭಜನ್‌ ಹಾಗೂ ಸಿನಿಮಾ ಗೀತೆಗಳ ವೈವಿಧ್ಯದ ರಸಪಾಕವನ್ನು ಸವಿದರು. 

ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತವು ಅರಮನೆಯಲ್ಲಿ ಸೋಮವಾರ ಸಂದಿಸುವಂತೆ ಮಾಡಿದ ಹರಿಹರನ್‌, ಬಹು ಸಂಗೀತದ ಪ್ರತಿಭೆಯನ್ನು ಅನಾವರಣಗೊಳಿಸಿದರು. ಗೀತ ಮಿಳಿತದ ‘ಫ್ಯೂಶನ್’ ಹೊಮ್ಮಿಸಿದ ಭಾವದಲೆಗಳಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೈಭವದ ಮುನ್ನುಡಿಯನ್ನೂ ಬರೆದರು. ಕನ್ನಡ, ತಮಿಳು, ಹಿಂದಿ ಸೇರಿದಂತೆ ಬಹುಭಾಷಾ ಗೀತೆಗಳು ಹರಿದವು. 

‘ಜೈ ದುರ್ಗೆ’ ಭಜನ್‌ ಮೂಲಕ ಸಂಗೀತ ಕಛೇರಿ ಆರಂಭಿಸಿದ ಅವರು ‘ಶಂಕರಾಭರಣ’ ರಾಗದ ‘ಶ್ರೀ ರಾಧೆ ಗೋವಿಂದ್ ಗೋಪಾಲ ತೇರಾ ಪ್ಯಾರಾ ನಾಮ್‌ ಹೇ’ ಹಾಡಿ ತನ್ಮಯಗೊಳಿಸಿದರು. ‘ಯಮನ್ ಕಲ್ಯಾಣಿ’ ರಾಗದ ವ್ಯಾಸರಾಯರ ಕೀರ್ತನೆ ‘ಕೃಷ್ಣ ನೀ ಬೇಗನೆ ಬಾರೋ.. ಮುಖವನ್ನು ತೋರೊ’ ಭಕ್ತಿ ರಸ ಉಕ್ಕಿಸಿದರು.

ADVERTISEMENT

ಗಜಲ್ ಹಾಡುವೆನೆಂದು ಹೇಳುತ್ತಲೇ, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸಂಯೋಜನೆಯ ‘ಇಂದಿರಾ’ ಚಿತ್ರದ ‘ನೀಲಾ ಕಾಗಿರದು..’ ಎಂದು ಪುಳಕಗೊಳಿಸಿದರು.

‘ರೋಜಾ’ ಚಿತ್ರದ ‘ರೋಜಾ ಜಾನೇ ಮನ್..’, ‘ಭಾರತ್ ಹಮ್ ಕೋ’ ಎಂದು ದೇಶಭಕ್ತಿ ಸಿಂಚನ ಹೊಮ್ಮಿಸಿದರು. ‘ಯಾದೇ’ ಚಿತ್ರದ ‘ನಗುಮೆ ಹೇ.. ಶಿಖ್‌ವೇ ಹೇ.. ಯಾದ್‌ ಯಾದ್‌ ಆತಿ ಹೇ’, ‘ಬಾಂಬೆ’ ಚಿತ್ರದ ‘ಉಯಿರೇ’ ‘ತುಹೀರೇ’ ಎಂದು ಮಾಧುರ್ಯದಲ್ಲಿ ತೇಲಿಸಿದರು. ‘ಸಾರಂಗಿ’ ವಾದ್ಯಕಾರರ ನಾದನಡೆಯು ಭಾವುಕಗೊಳಿಸಿತು. 

‘ಕಾಶ್‌ ಆಯಾ ತೋ’ ಗಜಲ್ ಹೇಳಿದ ಅವರು, ‘ಪತ್ತ ಪತ್ತ ಬೂಟ ಬೂಟ’ ಸಿನಿಮಾ ಗೀತೆಯನ್ನು ಹಾಡಿದರು. ‘ಹಾರ್ಮೋನಿಯಂ’, ‘ಸಾರಂಗಿ’ ಹಾಗೂ ‘ತಬಲಾ’ ವಾದ್ಯಗಳ ಹಿಮ್ಮೇಳ ಮೋಡಿ ಮಾಡಿತು. ಆಗಾಗ ಕೇಳಿ ಬರುತ್ತಿದ್ದ ‘ಗಿಟಾರ್’ ಹಾಗೂ ‘ಸಾರಂಗಿ’ ವಾದ್ಯಗಳ ‘ಫ್ಯೂಶನ್‌’ ಭಾವಪರವಶಗೊಳಿಸುತ್ತಿತ್ತು. ‘ಲಲಿತ’ ರಾಗದಲ್ಲಿ ಗಾಲೀಬ್ ಅವರ ಶಾಯರಿ ‘ದಾಯಂ ಪಡಾ ಹುವಾ’ ಹಾಡಿ ಗಂಭೀರ ಲೋಕದಲ್ಲಿ ಮುಳುಗುವಂತೆ ಮಾಡಿದರು. ಪ್ರೇಕ್ಷಕರ ಕೋರಿಕೆಗೆ ‘ಚಂದಾರೇ.. ಚಂದಾರೇ’, ‘ವೆನ್ನಿಲವೇ.. ವೆನ್ನಿಲವೇ’ ಹಾಡಿ ತಣಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.