ADVERTISEMENT

ಪತ್ರಿಕೋದ್ಯಮಕ್ಕೆ ಮೈಸೂರು ಅನನ್ಯ ತಾಣ: ಪತ್ರಕರ್ತ ಕೃಷ್ಣಪ್ರಸಾದ್

‘ಹರೀಶ 60ರ ಹರುಷ’ ಕಾರ್ಯಕ್ರಮದಲ್ಲಿ ಕೃಷ್ಣಪ್ರಸಾದ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 16:18 IST
Last Updated 29 ಜೂನ್ 2020, 16:18 IST
ಹಿರಿಯ ಪತ್ರಕರ್ತ ಹರೀಶ್‌ ಬಂದಗದ್ದೆ ಅವರನ್ನು ಶಾಸಕ ಜಿ.ಟಿ.ದೇವೇಗೌಡ ಅಭಿನಂದಿಸಿದರು. ಅನುರಾಧಾ ಹರೀಶ್‌ ಇದ್ದಾರೆ
ಹಿರಿಯ ಪತ್ರಕರ್ತ ಹರೀಶ್‌ ಬಂದಗದ್ದೆ ಅವರನ್ನು ಶಾಸಕ ಜಿ.ಟಿ.ದೇವೇಗೌಡ ಅಭಿನಂದಿಸಿದರು. ಅನುರಾಧಾ ಹರೀಶ್‌ ಇದ್ದಾರೆ   

ಮೈಸೂರು: ‘ಭಾರತದ ಪ್ರಾದೇಶಿಕ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಅನನ್ಯವಾದ ಸ್ಥಳ ಮೈಸೂರು. ಇಲ್ಲಿ ಗಟ್ಟಿಯಾಗಿ ನೆಲೆಯೂರಿದ ಪ್ರಾದೇಶಿಕ ಪತ್ರಿಕೆಗಳೇ ಇದಕ್ಕೆ ಕಾರಣ. ಇಂತಹ ಪತ್ರಿಕೆಗಳನ್ನು ಕಟ್ಟುವಲ್ಲಿ ಪತ್ರಕರ್ತ ಹರೀಶ್‌ ಬಂದಗದ್ದೆ ಪಾತ್ರ ಪ್ರಮುಖವಾದದು’ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್‌ ಬಣ್ಣಿಸಿದರು.

ಹರೀಶ್‌ ಅವರು ಪತ್ರಿಕಾ ವೃತ್ತಿಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಹರೀಶ 60ರ ಹರುಷ’ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

‘ಪತ್ರಿಕೋದ್ಯಮದಲ್ಲಿ ಹರೀಶ್ ಅಜ್ಞಾತ ಹೀರೊ. ಅವರು ಎಲೆಮರೆಯ ಕಾಯಿಯಂತೆ ಕೆಲಸ ಮಾಡಿದವರು. ತಮ್ಮ ವೃತ್ತಿ ಅನುಭವಗಳ ಕುರಿತು ಪುಸ್ತಕ ಬರೆಯ ಬೇಕು’ ಎಂದರು.

ADVERTISEMENT

ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ‘ಇಂದು ಎಲ್ಲ ರಂಗದಲ್ಲೂ ಲಾಭ– ನಷ್ಟವೇ ಪ್ರಧಾನವಾಗಿದೆ. ಸೂಕ್ಷ್ಮ ಸಂವೇದನೆ ಹೊಂದಿರುವ ವ್ಯಕ್ತಿ ನಿವೃತ್ತಿಯಾಗುವ ಮೂಲಕ ಇವುಗಳಿಂದ ಸ್ವಾತಂತ್ರ್ಯ ಪಡೆಯಲು ಇಚ್ಛಿಸುತ್ತಾನೆ. ಹೀಗಾಗಿ, ನಿವೃತ್ತಿ ಬದುಕು ಸುಂದರ ಅನುಭವ ನೀಡುತ್ತದೆ’ ಎಂದರು.

ಸನ್ಮಾನ ಸ್ವೀಕರಿಸಿದ ಹರೀಶ್, ‘1977ರಲ್ಲಿ ಮೈಸೂರಿಗೆ ಬಂದೆ. 42 ವರ್ಷ ಪತ್ರಿಕಾ ವೃತ್ತಿ ಮಾಡಿದ್ದು ತೃಪ್ತಿ ತಂದಿದೆ. ಬದಲಾಗಿರುವ ಪತ್ರಿಕಾರಂಗದ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟಕರ. ಹೀಗಾಗಿ, ನಿವೃತ್ತಿ ಪಡೆಯಲು ಹಂಬಲಿಸಿದೆ’ ಎಂದು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ, ಮುಖಂಡ ಎಚ್.ವಿಶ್ವನಾಥ್, ವಾಸು, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಸಿ.ಕೆ.ಮಹೇಂದ್ರ, ಈಚನೂರು ಕುಮಾರ್ ಇತರರು ಹರೀಶ್‌ ಅವರ ಒಡನಾಟವನ್ನು ಸ್ಮರಿಸಿ, ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.