ADVERTISEMENT

ಹುಣಸೂರು | ಸಹಕಾರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ: ಶಾಸಕ ಜಿ.ಡಿ.ಹರೀಶ್‌ ಗೌಡ

‍ 72 ನೇ ಸಹಕಾರಿ ಸಪ್ತಾಹದ ಅಂಗವಾಗಿ ಬೃಹತ್‌ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:53 IST
Last Updated 20 ನವೆಂಬರ್ 2025, 4:53 IST
ಹುಣಸೂರು ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಬುಧವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಮತ್ತು ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಜಿ.ಡಿ.ಹರೀಶ್‌ ಗೌಡ ಮತ್ತು ಮೈಮುಲ್‌ ಅಧ್ಯಕ್ಷ ಈರೇಗೌಡ ಹಾಗೂ ಗಣ್ಯರು ಉದ್ಘಾಟಿಸಿದರು
ಹುಣಸೂರು ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಬುಧವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಮತ್ತು ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಜಿ.ಡಿ.ಹರೀಶ್‌ ಗೌಡ ಮತ್ತು ಮೈಮುಲ್‌ ಅಧ್ಯಕ್ಷ ಈರೇಗೌಡ ಹಾಗೂ ಗಣ್ಯರು ಉದ್ಘಾಟಿಸಿದರು   

ಹುಣಸೂರು: ಸಹಕಾರಿ ಸಂಸ್ಥೆಗಳ ಸ್ವಾಯತ್ತತೆಗೆ ಸರ್ಕಾರ ಅಡ್ಡಗಾಲು ಹಾಕಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದು ಸಹಕಾರಿ ಕ್ಷೇತ್ರದ ಮೂಲ ಆಶಯಗಳಿಗೆ ಕೊಡಲಿ ಹಾಕುತ್ತಿರುವುದು ವಿಷಾದನೀಯ ಎಂದು ಕ್ಷೇತ್ರದ ಶಾಸಕ ಹಾಗೂ ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಜಿ.ಡಿ.ಹರೀಶ್‌ ಗೌಡ ಹೇಳಿದರು.

ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ನಡೆದ 72ನೇ ಸಹಕಾರಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಕ್ಷೇತ್ರ ಆಳವಾಗಿ ಬೇರು ಬಿಟ್ಟು ತಳಮಟ್ಟದಲ್ಲಿ ತನ್ನದೇ ಕಾರ್ಯವೈಖರಿ ಹೆಣೆದುಕೊಂಡು ಆರ್ಥಿಕ ಚಟುವಟಿಕೆ ಹಮ್ಮಿಕೊಂಡಿದೆ. ಈ ಕ್ಷೇತ್ರಕ್ಕೆ ತನ್ನದೇ ಇತಿಹಾಸವಿದ್ದರೂ ಆಳುವ ಸರ್ಕಾರದಿಂದ ಸಹಕಾರಿ ಕ್ಷೇತ್ರಕ್ಕೆ ಯಾವುದೇ ರೀತಿಯ ಆರ್ಥಿಕ ಸಹಾಯವಿಲ್ಲದಿದ್ದರೂ ತನ್ನ ಅಧಿಕಾರದ ಗದಾಪ್ರಹಾರ ನಡೆಸಿ ಸಹಕಾರಿ ಕ್ಷೇತ್ರದ ಆಡಳಿತಕ್ಕೆ ಕಡಿವಾಣ ಹಾಕುವ ಕೆಲಸ ಮಾಡುತ್ತಿರುವುದು ಖಂಡನಾರ್ಹ ಎಂದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರಿ ಬ್ಯಾಂಕ್‌ ತನ್ನ 62 ವರ್ಷಗಳ ಇತಿಹಾಸದಲ್ಲಿ ₹350 ಕೋಟಿ ಠೇವಣಿ ಮತ್ತು ₹600 ಕೋಟಿ ಸಾಲ ನೀಡಿ 45 ಸಾವಿರ ಕುಟುಂಬಗಳಿಗೆ ಸಹಕಾರಿಯಾಗಿತ್ತು. ಆದರೆ ತಮ್ಮ 5 ವರ್ಷದ ಆಡಳಿತಾವಧಿ (2018-25 ವರಗೆ)ಯಲ್ಲಿ ₹11 ಸಾವಿರ ಕೋಟಿ ಠೇವಣಿ ₹1,600 ಕೋಟಿ ಸಾಲ ನೀಡಿ 1.50 ಲಕ್ಷ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಲಾಗಿದೆ. ಈ ಸಾಧನೆ ನಮ್ಮಿಂದ ಸಾಧ್ಯವಾಗುವುದಾಗಿದ್ದರೆ ಕಳೆದ 62 ವರ್ಷಗಳಿಂದ ಆಡಳಿತ ನಡೆಸಿದವರಿಂದ ಏಕೆ ಸಾಧ್ಯವಾಗಲಿಲ್ಲ? ಸಹಕಾರಿ ಸಂಘ ಕೇವಲ ಆಡಳಿತ ಮಂಡಳಿಗೆ ಸೀಮಿತವಾಗದೆ ಸಾರ್ವಜನಿಕರ ಸೇವೆಯಲ್ಲಿ ತೊಡಗಿದಲ್ಲಿ ಈ ಕ್ಷೇತ್ರ ಅಭಿವೃದ್ಧಿ ಹೊಂದಿ ಶ್ರೀಸಾಮಾನ್ಯರ ಧ್ವನಿಯಾಗಲು ಸಾಧ್ಯ. ಆ ಕೆಲಸ ನಮ್ಮ ಆಡಳಿತ ಅವಧಿಯಲ್ಲಿ ಮಾಡಿತೋರಿಸಿದ್ದೇವೆ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದರು.

ADVERTISEMENT

ಚುನಾವಣೆ: ಮೈಸೂರು ಮತ್ತು ಚಾ.ನಗರ ಜಿಲ್ಲಾ ಸಹಕಾರಿ ಬ್ಯಾಂಕ್‌ ಚುನಾವಣೆಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದ ಕಳೆದ 2 ವರ್ಷದಿಂದ ಚುನಾವಣೆ ನಡೆಯದೆ ಆಧಿಕಾರಿಗಳ ಆಡಳಿತ ನಡೆದಿತ್ತು. ಇತ್ತೀಚೆಗೆ ಚುನಾವಣೆ ನಡೆಸಿದರಾದರೂ ಪರಿಪೂರ್ಣವಾಗದೆ ಇಂದಿಗೂ ಅತಂತ್ರ ಸ್ಥಿತಿಯಲ್ಲಿದೆ. ಈ ಎಲ್ಲಾ ಕೆಟ್ಟ ಆಡಳಿತಕ್ಕೆ ಸರ್ಕಾರ ಉತ್ತರಿಸಬೇಕಾಗಿದೆ ಎಂದರು.

ಹುಣಸೂರು ತಾಲ್ಲೂಕಿನಲ್ಲಿ 29 ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 14 ಸಹಕಾರಿ ಸಂಘಕ್ಕೆ ಚುನಾವಣೆ ನಡೆಯದೆ ಈ ಸಂಘಗಳು ಅಧಿಕಾರಿಗಳ ಕೈಗೊಂಬೆಯಾಗಿವೆ. ಕೃಷಿಕರಿಗೆ ಸರಿಯಾಗಿ ಸಾಲ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಸಹಕಾರಿ ಸಂಘದ ಚುನಾವಣೆ ದಿನಾಂಕ ನಿಗದಿಯಾದ ಬಳಿಕ ಚುನಾವಣಾಧಿಕಾರಿಗೆ ಅನಾರೋಗ್ಯ ಕಾಡಿ ಮುಂದೂಡಿದ ಸಂಗತಿ ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ಮೀಸಲಾತಿ: ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸುವ ಸಂಬಂಧ ನಮ್ಮ ಆಕ್ಷೇಪವಿಲ್ಲ. ಈ ಸಂಬಂಧ ಈಗಾಗಲೇ ಹುಣಸೂರು ಟಿಎಪಿಸಿಎಂಎಸ್‌ ಸಹಕಾರಿ ಸಂಘದಲ್ಲಿ ಮೀಸಲಾತಿ ಜಾರಿಗೊಳಿಸಿ ಪರಿಶಿಷ್ಟ ಜಾತಿ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿಸಿ ರಾಜ್ಯಕ್ಕೆ ಮಾದರಿ ಆಗಿದ್ದೇವೆ ಎಂದರು.

ಮೈಮುಲ್‌ ನಿರ್ದೇಶಕ ಕೆ.ಎಸ್.ಕುಮಾರ್‌ ಮಾತನಾಡಿ, ಹೈನುಗಾರಿಕೆ ಕ್ಷೇತ್ರದಲ್ಲಿ ಸಹಕಾರಿ ಸಂಘ ಸ್ಥಾಪಿಸಿ ಕ್ರಾಂತಿ ಮಾಡಲಾಗಿದೆ. ಹುಣಸೂರು ತಾಲ್ಲೂಕಿನ 214 ಹಾಲು ಉತ್ಪಾದಕರ ಸಹಕಾರ ಸ್ಥಾಪಿಸಿ ದಿನಕ್ಕೆ 1.50 ಲಕ್ಷ ಲೀಟರ್‌ ಹಾಲು ಉತ್ಪತ್ತಿ ಮಾಡಲಾಗುತ್ತಿದೆ. ಶಾಸಕ ಜಿ.ಡಿ.ಹರೀಶ್‌ ಗೌಡ ಶಾಸಕರ ನಿಧಿಯಿಂದ  ಅನುದಾನ ಹೈನುಗಾರಿಕೆ ಸಹಕಾರಿ ಸಂಘದ ಕಟ್ಟಡ ನಿರ್ಮಿಸಲು ಸಹಕಾರ ನೀಡಿದ್ದಾರೆ ಎಂದರು.

ಮೆರವಣಿಗೆ: ನಗರದ ಮಂಜುನಾಥ ಬಡಾವಣೆಯಿಂದ ಮುನೇಶ್ವರ ಕಾವಲ್‌ ಮೈದಾನದವರಗೆ ಅದ್ದೂರಿ ಮೆರವಣಿಗೆಯಲ್ಲಿ ಸಹಕಾರಿಗಳು ಭಾಗವಹಿಸಿದ್ದರು.

ಮೈಮುಲ್‌ ಅಧ್ಯಕ್ಷ ಈರೇಗೌಡ, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಬಿ.ಎನ್.ಸದಾನಂದ ಮಾತನಾಡಿದರು. ವೇದಿಕೆಯಲ್ಲಿ ನಿರ್ದೇಶಕರಾದ ಸೋಮಶೇಖರ್‌, ಉಮಾಶಂಕರ್‌, ಶಿವಗಾಮಿ, ಮಹೇಶ್‌ ಕುರುಹಟ್ಟಿ, ಮಹದೇವಸ್ವಾಮಿ, ರಾಮಕೃಷ್ಣೇಗೌಡ, ಪ್ರೇಮಕುಮಾರ್‌, ಉದಯಕುಮಾರ್‌ ಸೇರಿದಂತೆ ಕ್ಷೇತ್ರದ ಸಹಕಾರಿಗಳು ಭಾಗವಹಿಸಿದ್ದರು.‌

ಹುಣಸೂರು ನಗರದಲ್ಲಿ ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್‌ ಮೆರವಣಿಗೆಯಲ್ಲಿ ಸಹಕಾರಿಗಳು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.