ಮೈಸೂರು: ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಡಿ.ಹರೀಶ್ ಗೌಡ ಹಾಗೂ ಉಪಾಧ್ಯಕ್ಷರಾಗಿ ಬಿ.ಎನ್.ಸದಾನಂದ ಅವಿರೋಧವಾಗಿ ಆಯ್ಕೆಯಾದರು.
ಇಲ್ಲಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಒಕ್ಕೂಟದ ಸಭಾಂಗಣದಲ್ಲಿ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು.
ಒಕ್ಕೂಟದ ಆಡಳಿತ ಮಂಡಳಿಯ 15 ಮಂದಿ ನಿರ್ದೇಶಕರ ಚುನಾವಣೆಯಲ್ಲಿ 13 ಮಂದಿ ಅವಿರೋಧ ಆಯ್ಕೆಯಾದರೆ, ಎರಡು ಸ್ಥಾನಗಳಿಗೆ ಮತದಾನ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಕ್ಷೇತ್ರ ಹಾಗೂ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ಗಳ ಕ್ಷೇತ್ರದಿಂದ ಪಿರಿಯಾಪಟ್ಟಣ ತಾಲ್ಲೂಕಿನಿಂದ ಕೆ.ಕುಮಾರ, ಮೈಸೂರು ತಾಲ್ಲೂಕಿನಿಂದ ಶಾಸಕ ಜಿ.ಟಿ.ದೇವೇಗೌಡ, ತಿ.ನರಸೀಪುರ ತಾಲ್ಲೂಕಿನಿಂದ ಮಲ್ಲಣ್ಣ, ನಂಜನಗೂಡು ತಾಲ್ಲೂಕಿನಿಂದ ಬಿ.ಎನ್.ಸದಾನಂದ, ಸಾಲಿಗ್ರಾಮ ತಾಲ್ಲೂಕಿನಿಂದ ಎ.ಟಿ.ಸೋಮಶೇಖರ್, ಹುಣಸೂರು ಪಟ್ಟಣದಿಂದ ಶಾಸಕ ಜಿ.ಡಿ.ಹರೀಶ್ ಗೌಡ ಆಯ್ಕೆಯಾದರು.
ಹುಣಸೂರು ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಎಸ್.ಕುಮಾರ, ಮೈಸೂರು ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಉಮಾಶಂಕರ್, ಪಟ್ಟಣ ಸಹಕಾರ ಬ್ಯಾಂಕ್‌ಗಳ ಕ್ಷೇತ್ರದಿಂದ ಕುವೆಂಪುನಗರದ ಆರ್.ಆನಂದ್, ಟಿಎಪಿಸಿಎಂಎಸ್ ಹಾಗೂ ಮಾರಾಟ ಸಹಕಾರ ಸಂಘಗಳು ಹಾಗೂ ಬಳಕೆದಾರರ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಜಿ.ಮಹೇಶ್, ಗೃಹ ನಿರ್ಮಾಣ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ವಿ.ರಾಜೀವ್, ಮಹಿಳಾ ಸಹಕಾರ ಸಂಘಗಳ
ಕ್ಷೇತ್ರದಿಂದ ಎ.ಶಿವಗಾಮಿ, ಎಸ್‌ಸಿ, ಎಸ್‌ಟಿ ಸಹಕಾರ ಸಂಘಗಳ ಕ್ಷೇತ್ರದಿಂದ ಜಿ.ವಿ.ಗುರುರಾಜು ಅವಿರೋಧವಾಗಿ ಆಯ್ಕೆಯಾದರು.
ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ಎಸ್.ಪ್ರಶಾಂತ್ ತಾತಾಚಾರ್ ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳು ಹಾಗೂ ಇತರ ಸಹಕಾರ ಸಂಘಗಳ ಕ್ಷೇತ್ರದ ಚುನಾವಣೆಯಲ್ಲಿ ತಿ.ನರಸೀಪುರ ತಾಲ್ಲೂಕಿನ ಸಿದ್ದೇಗೌಡ ವಿಜಯಿಯಾದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹರೀಶ್ ಗೌಡ, ‘ಸಹಕಾರ ಕ್ಷೇತ್ರ ಉಳಿದರೆ ರೈತರು ಉಳಿಯುತ್ತಾರೆ. ರೈತರು, ಸಹಕಾರಿಗಳ ಪರವಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.
ಒಕ್ಕೂಟದ ನಿರ್ದೇಶಕರಾದ ಜಿ.ಟಿ.ದೇವೇಗೌಡ ಮತ್ತು ಎಚ್.ವಿ. ರಾಜೀವ್ ಗೈರುಹಾಜರಿ ಎದ್ದುಕಂಡಿತು.
ತಹಶೀಲ್ದಾರ್ ಕೆ.ಎಂ. ಮಹೇಶ್‌ಕುಮಾರ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.