ಜಯಪುರ: ‘ವಿದ್ಯಾರ್ಥಿಗಳಿಗೆ ಶಿಕ್ಷಣ ದೊಡ್ಡ ಆಸ್ತಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಶಿಕ್ಷಣ ಪಡೆಯಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಜಯಪುರ ಹೋಬಳಿಯ ಹಾರೋಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಾಲೆಯ ಕೊಠಡಿಗಳು ಹಾಳಾಗಿರುವುದನ್ನು ಗುರುತಿಸಿ ಮಿತ್ಸುಭಿಷಿ ಹೆವಿ ಇಂಡ್ರಸ್ಟ್ರಿಸ್ ಯು ಅವರು ಸಿಎಸ್‌ಆರ್ ನಿಧಿಯಿಂದ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಬಾರ ಶುಲ್ಕ ಹಾಗೂ ವಿವೇಕ ಶಾಲೆ ಯೋಜನೆಯಡಿ 6 ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪೋಷಕರು ಹಾಗೂ ಗ್ರಾಮಸ್ಥರು ಶಾಲೆಯು ಮುರಿದು ಬೀಳುವ ಆತಂಕ ವ್ಯಕ್ತಪಡಿಸಿ ಕೊಠಡಿಗಳನ್ನು ನಿರ್ಮಿಸುವಂತೆ ಒತ್ತಡ ಹೇರಿದ್ದರು. ಗ್ರಾಮಸ್ಥರ ಐದು ವರ್ಷಗಳ ಸತತ ಪ್ರಯತ್ನದಿಂದಾಗಿ ಇಂದು ಉದ್ಘಾಟನೆ ನೆರವೇರಿಸಲಾಗಿದೆ’ ಎಂದರು.
‘ಕೊಠಡಿಗಳ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ದಾಸೋಹ ಭವನವನ್ನು ಕಟ್ಟಿರುವುದರಿಂದ ಪೋಷಕರು ಸಂತಸಗೊಂಡಿದ್ದಾರೆ. ಯಾವುದೇ ಕಾರ್ಯಕ್ರಮವಾದರೂ ಶಿಕ್ಷಕರು ಮಕ್ಕಳ ಪೋಷಕರನ್ನು ಕಡ್ಡಾಯವಾಗಿ ಕರೆತರಬೇಕು. ಶಾಲೆಯ ವಿಷಯಗಳು ಗೊತ್ತಾಗಬೇಕು. ಮುಂದಿನ ದಿನಗಳಲ್ಲಿ ಶಾಲಾ ಶಿಕ್ಷಕರು ಪೋಷಕರನ್ನು ಒಂದು ಕಡೆಗೆ ಸೇರಿಸಿ ಶಾಲೆ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು’ ಎಂದರು.
‘ಶಿಕ್ಷಣ ದೊಡ್ಡ ಆಸ್ತಿಯಾಗಿದ್ದು, ಏನೇ ಸಂಪಾದನೆ ಮಾಡಿದರೂ ಶಿಕ್ಷಣ ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಟ. ಎಂಬುದನ್ನು ಅರಿಯಬೇಕು’ ಎಂದರು.
ಮುಖಂಡರಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಹಾರೋಹಳ್ಳಿ ಸುರೇಶ್ ಕುಮಾರ್, ಅರ್ಜುನ್, ಕೀರ್ತಿ ಕುವಾರ್, ಕಾರ್ತಿಕ್, ಸಂಜೀವ್, ರಜನಿಕಾಂತ್, ಪದ್ಮಕುವಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಗಿರೀಶ್, ರವಿನಂದನ್, ಕೃಷ್ಣಮೂರ್ತಿ, ಮುಖ್ಯಶಿಕ್ಷಕ ಶಿವಣ್ಣ, ನಿವೃತ್ತ ಮುಖ್ಯ ಶಿಕ್ಷಕ ಗಿರೀಶ್ ಹಾಜರಿದ್ದರು.
ವಿದ್ಯಾರ್ಥಿಗಳು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನವನ್ನು ಗೆಲ್ಲಬೇಕುಜಿ.ಟಿ.ದೇವೇಗೌಡ ಶಾಸಕ
‘ಹಾರೋಹಳ್ಳಿ ಶಾಲೆಗೆ ಎಸ್‌ಎಸ್ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು ಮುಂದಿನ ವರ್ಷದಿಂದ ಗ್ರಾಮದ ಏಳು ಮತ್ತು ಹತ್ತನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ ಮೂರು ಬಹುಮಾನವನ್ನು ಸ್ವಂತ ಹಣದಿಂದ ಪ್ರಶಸ್ತಿ ಪ್ರೋತ್ಸಾಹಧನ ನೀಡಲಾಗುವುದು’ ಎಂದು ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.