ಪ್ರಾತಿನಿಧಿಕ ಚಿತ್ರ
ಎಚ್.ಡಿ.ಕೋಟೆ: ಮುಸುಕಿನ ಜೋಳ ಬೆಳೆಗೆ ಕೇದಿಗೆ (ಬೂಜು) ರೋಗ ಬಾಧೆ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ರೈತರು ಮುಂದಾಗಬೇಕು ಸಸ್ಯರೋಗ ಶಾಸ್ತ್ರಜ್ಞರಾದ ಆರ್.ಎನ್.ಪುಷ್ಪಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಮುಸುಕಿನ ಜೋಳ ಬೆಳೆ ಬಿತ್ತನೆಯಾಗಿ ಬೆಳವಣಿಗೆ ಹಂತದಲ್ಲಿದೆ. ಹವಾಮಾನ ವೈಪರೀತ್ಯ ಹಾಗೂ ಚಂಡಮಾರುತದ ಪರಿಣಾಮದಿಂದ ಮುಸುಕಿನ ಜೋಳದಲ್ಲಿ ಕೇದಿಗೆ ರೋಗ ಉಲ್ಬಣಗೊಳ್ಳುತ್ತಿದ್ದು, ಇದರಿಂದ ಇಳುವರಿ ನಷ್ಟವಾಗಬಹುದು. ಆದ್ದರಿಂದ ರೈತರು ತ್ವರಿತವಾಗಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ರೈತರು ರೋಗ ಲಕ್ಷಣ ಕಂಡಕೂಡಲೇ ಆಜಾಕ್ಸಿಸ್ಪೋಬಿನ್, ಡೈಫೆನ್ ಕೊನಜೋಲ್ ಸಂಯುಕ್ತ ಶಿಲೀಂಧ್ರ ನಾಶಕವನ್ನು ಪ್ರತಿ 1 ಲೀಟರ್ ನೀರಿಗೆ 1.5 ಮಿ.ಲೀನಂತೆ (ಎಕರೆಗೆ 200ಮಿ.ಲೀ) ಹಾಗೂ 15 ದಿನಗಳನಂತರ ಮೆಟಲಾಕ್ಸಿಲ್ 8, ಮ್ಯಾಕೋಜೆಬ್ 64 ಸಂಯುಕ್ತ ಶಿಲೀಂಧ್ರ ನಾಶಕವನ್ನು ಪ್ರತಿ 1 ಲೀಟರ್ ನೀರಿಗೆ 2 ಗ್ರಾಂ (ಎಕರೆಗೆ 600 ಗ್ರಾಂ) ಮಿಶ್ರಣ ಮಾಡಿ ಗರಿಗಳ ತಳಭಾಗ ಹಾಗೂ ಮೇಲ್ಭಾಗಕ್ಕೆ ಸಿಂಪಡಿಸಬೇಕು. ಪ್ರತಿ ಎಕರೆಗೆ 100 ಕಿ.ಗ್ರಾಂ. 10:26:26 ರಸಗೊಬ್ಬರವನ್ನು ಹಾಕುವುದರಿಂದ ಇಳುವರಿ ನಷ್ಟ ತಪ್ಪಿಸಬಹುದು ಎಂದು ತಿಳಿಸಿದ್ದಾರೆ.
ಬಿತ್ತನೆಗೆ ಮೊದಲು ಪ್ರತಿ 1 ಕಿ.ಗ್ರಾಂ ಬಿತ್ತನೆ ಬೀಜಕ್ಕೆ 3 ಗ್ರಾಂ 8 ಡಬ್ಲ್ಯುಪಿ, ಮ್ಯಾಕೋಜೆಬ್ 64 ಸಂಯುಕ್ತ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತುವುದರಿಂದ ಶೇ 30-40ರಷ್ಟು ರೋಗ ನಿರ್ವಹಣೆಯಾಗುತ್ತದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಕೇದಿಗೆ ರೋಗ ನಿರೋಧಕತೆ ಶಕ್ತಿ ಹೊಂದಿರುವ ಎಂ.ಎ.ಎಚ್ 14-5, 20.2.5-1137, 20.2.5-2049, 20.2.5 14-138. 20.2.15-84 ಬೆಳೆಯುವುದು ಸೂಕ್ತ. ಮಾಹಿತಿಗಾಗಿ ಮೊ. 9980366789 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕೇದಿಗೆ ರೋಗ ಲಕ್ಷಣಗಳು
ಎಲೆಗಳ ತಳಭಾಗದಲ್ಲಿ ಬಿಳಿಯ ಶಿಲೀಂಧ್ರದ ಬೆಳವಣಿಗೆ ಕಂಡುಬರುತ್ತದೆ. ಶಿಲೀಂಧ್ರ ಬೆಳೆದ ಭಾಗದ ಮೇಲ್ಬಾಗದಲ್ಲಿ ಗರಿ ಹಳದಿ ಬಣ್ಣಕ್ಕೆ ತಿರುಗಿ ಎಲ್ಲಾ ಗರಿಗಳಿಗೂ ಹರಡುತ್ತದೆ. ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ಉಲ್ಬಣಗೊಂಡರೆ ತೆನೆ ವಿಕಾರವಾಗಿ ಪರಾಗಸ್ಪರ್ಷ ಉತ್ಪತ್ತಿಯಾಗದೆ ತೆನೆಯಲ್ಲಿ ಚಿಕ್ಕ ಚಿಕ್ಕ ಎಲೆಯ ಆಕಾರದ ಬೆಳವಣಿಗೆ ಕಂಡುಬರುತ್ತದೆ. ಇದರಿಂದ ಕಾಳು ಕಟ್ಟದೆ ಇಳುವರಿ ನಷ್ಟವಾಗುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.