
ಎಚ್.ಡಿ. ಕೋಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ಜಾನುವಾರುಗಳನ್ನು ಆಗಾಗ್ಗೆ ಬೇಟೆಯಾಡುತ್ತಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಶುಕ್ರವಾರ ಬೋನು ಇರಿಸಿ ಕಾರ್ಯಾಚರಣೆ ಆರಂಭಿಸಿದೆ
ಎಚ್.ಡಿ ಕೋಟೆ: ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ಜಾನುವಾರುಗಳನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ಬೇಟೆಯಾಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಶುಕ್ರವಾರ ಮುಂದಾಗಿದೆ.
ಗ್ರಾಮದ ಬೈರೇಗೌಡ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆಯು ಬೋನು ಇರಿಸಿದ್ದು, ಹುಲಿ ಸೆರೆ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.
ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಹೊಸಹೊಳಲು ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಮೇಕೆ ಮತ್ತು ಎರಡು ಹಸುಗಳನ್ನು ಬಲಿಪಡೆದಿತ್ತು. ರೈತರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಮನವಿ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಹುಲಿಯ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ್ದರು. ಹುಲಿಯ ಚಲನ ವಲನದ ಹೆಜ್ಜೆ ಗುರುತುಗಳು ಕಂಡುಬಂದ ಹಿನ್ನೆಲೆ ಸಾರ್ವಜನಿಕರಿಗೆ ಮತ್ತು ರೈತರಿಗೆ ಜಮೀನಿಗೆ ತೆರಳುವ ವೇಳೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು.
ಗ್ರಾಮದ ಬೈರೇಗೌಡ ಅವರ ಜಮೀನಿನಲ್ಲಿ ದೊಡ್ಡ ಗಾತ್ರದ ಬೋನೊಂದನ್ನು ಇರಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಅಕ್ಕಪಕ್ಕದ ಜಮೀನಿನಲ್ಲಿ ಮೊಕ್ಕಾಂ ಹೂಡಿದ್ದಾರೆ.
ಗ್ರಾಮವು ಕಾಡಂಚಿನ ಗ್ರಾಮಗಳಲ್ಲೊಂದಾಗಿದೆ. ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ಮತ್ತು ಈ ಭಾಗದ ರೈತರಿಗೆ ಸೂಕ್ತ ರಕ್ಷಣೆ ಕೊಡಬೇಕು. ನಮ್ಮ ಮನವಿಗೆ ಸ್ಪಂದಿಸಿ ಬೋನು ಇರಿಸಿರುವುದು ಮತ್ತು ನಮ್ಮ ಗ್ರಾಮದ ಸುತ್ತಮುತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಿರುವುದು ಗ್ರಾಮಸ್ಥರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ ಎಂದು ಬೈರೇಗೌಡ ತಿಳಿಸಿದರು.
ಬೋನು ಇರಿಸುವಾಗ ಅರಣ್ಯ ಇಲಾಖೆಯ ಎಸಿಎಫ್ ಮಧು, ಅಂತರಸಂತೆ ವಲಯದ ಆರ್‌ಎಫ್‌ಒ ಎಸ್.ಎಸ್. ಸಿದ್ದರಾಜು, ಡಿಆರ್‌ಎಫ್‌ಒ ವಿನೋದ್, ಸಿಬ್ಬಂದಿ ದಿನೇಶ್, ವೇಣು, ನರಸಿಂಹ, ಪ್ರಮೋದ್, ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.