ADVERTISEMENT

ಎಚ್‌.ಡಿ.ಕೋಟೆ: ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ದೂರು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 14:37 IST
Last Updated 13 ಮಾರ್ಚ್ 2025, 14:37 IST
ಎಚ್‌.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ದೂರು ಸ್ವೀಕಾರ ಮಾಡಿದರು
ಎಚ್‌.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ದೂರು ಸ್ವೀಕಾರ ಮಾಡಿದರು   

ಎಚ್‌.ಡಿ.ಕೋಟೆ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಬುಧವಾರ ನಡೆದ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಿದರು.

ಸಾರ್ವಜನಿಕ ಕೆರೆ ಒತ್ತುವರಿ, ಭೂದಾಖಲೆ ಅಧಿಕಾರಿಗಳಿಂದ ಭೂಮಾಫಿಯಾದವರಿಗೆ ಸಹಕಾರ, ಜಲಜೀವನ್ ಮಿಷನ್ ಕಾಮಗಾರಿ ಕಳಪೆ ಸೇರಿದಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಸರ್ವೆ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರು ನೀಡಿದರು.

‘ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಅಧಿಕಾರಿಗಳು ಸಹ ಲೋಕಾಯುಕ್ತ ಎಂದರೆ ಭಯ ಬೀಳುವ ಸ್ಥಿತಿ ಇಲ್ಲವಾಗಿದೆ’ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ADVERTISEMENT

ಲೋಕಾಯುಕ್ತ ಡಿವೈಎಸ್ಪಿ ಮಾಲ್ತೇಶ್ ಮಾತನಾಡಿ, ‘ತಾಲ್ಲೂಕಿಗೆ ಮೂರು ತಿಂಗಳಿಗೆ ಒಮ್ಮೆ ಬೇಟಿ ಕೊಡುತ್ತೇವೆ, ಎಲ್ಲಾ ದೂರುಗಳನ್ನು ಸರಿ ಮಾಡಲು ಸಮಯ ಸಾಲುವುದಿಲ್ಲ, ದೂರುಗಳನ್ನು ನೀಡುವಾಗ ಸರಿಯಾದ ಕ್ರಮದಲ್ಲಿ ನೀಡದೇ ಇರುವುದು ಸಹ ಸಮಸ್ಯೆ ಬಗೆಯರಿಯದೆ ಉಳಿಯಲು ಕಾರಣವಾಗಿದೆ’ ಎಂದರು.

ಸಿದ್ದಪ್ಪಾಜಿ ರಸ್ತೆಯ ಚನ್ನ ಮಾತನಾಡಿ, ‘ಉಮೇಶ ಅವರಿಗೆ ಖಾತೆ ಆಗಬೇಕಿದ್ದ ಜಾಗವು ಅಕ್ರಮವಾಗಿ ಮಾದಯ್ಯ ಅವರಿಗೆ ಖಾತೆಯಾಗಿದ್ದು, ನಾಲ್ಕು ವರ್ಷದಿಂದ ಉಮೇಶ್ ಹೆಸರಿಗೆ ಖಾತೆ ಮಾಡಿಕೊಡಿ ಎಂದು ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿದ್ದರೂ ಸಹ ಪುರಸಭಾ ಮುಖ್ಯಾಧಿಕಾರಿ ಸತಾಯಿಸುತ್ತಿದ್ದಾರೆ’ ಎಂದು ದೂರಿದರು.

‘ನಾಲ್ಕು ವರ್ಷದಿಂದ ನಿಮ್ಮ ಬಳಿ ಬರುತ್ತಿದ್ದಾರೆ. ಇನ್ನು 10 ದಿನಗಳಲ್ಲಿ ಖಾತೆ ಮಾಡಿಕೊಡಿ’ ಎಂದು ಪುರಸಭೆ ಮುಖ್ಯಾಧಿಕಾರಿಗೆ ಲೋಕಾಯುಕ್ತ ಡಿವೈಎಸ್‌ಪಿ ಮಾಲತೇಶ್ ಸೂಚಿಸಿದರು.

ಹೆಗ್ಗಡಾಪುರ ಕೆಂಪಶೆಟ್ಟಿ ಮಡಿವಾಳ ಮಾತನಾಡಿ, ‘ನಾಗನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಾಪುರ ಕೆರೆಗೆ ಯಾವುದೇ ದಾಖಲಾತಿ ಇಲ್ಲ. ಧರ್ಮಸ್ಥಳ ಸಂಸ್ಥೆ ಈ ಕೆರೆಯನ್ನು ಅಭಿವೃದ್ಧಿ ಮಾಡಲು ಮುಂದೆ ಬಂದಿದ್ದು, ದಾಖಲಾತಿ ಇಲ್ಲವೆಂದು ಕೈಬಿಟ್ಟಿದ್ದಾರೆ, ಹಲವು ಜನರು ಒತ್ತುವರಿ ಮಾಡಿದ್ದು, ಕೆರೆಯ ಜಾಗದ ಗಡಿ ಗುರುತಿಸಿ ಒತ್ತುವರಿ ತೆರವುಗೊಳಿಸಿ’ ಎಂದು ಮನವಿ ಮಾಡಿದರು.

ತಹಶೀಲ್ದಾರ್ ಶ್ರೀನಿವಾಸ, ಧರಣೇಶ್, ಇನ್‌ಸ್ಟೆಕ್ಟರ್ ರವಿಕುಮಾರ್, ಉಮೇಶ್, ಗೋಪಿ, ವೀಣಾ, ಮೋಹನ್ ಇದ್ದರು.

Highlights - ಲೋಕಾಯುಕ್ತ ಎಂದರೆ ಅಧಿಕಾರಿಗಳಿಗೆ ಭಯವಿಲ್ಲ: ಬೇಸರ ಹಲವು ದೂರುಗಳು; ಪರಿಶೀಲನೆಯ ಭರವಸೆ

Cut-off box - ‘ಬಡವ ರೈತರಿಗೆ ನ್ಯಾಯ ಸಿಗುತ್ತಿಲ್ಲ’ ‘ಕಳೆದ ಬಾರಿ ದೂರು ಸ್ವೀಕರಿಸಿ ಯಾವ ಅಧಿಕಾರಿ ವಿರುದ್ಧವೂ ಕ್ರಮ‌ ಕೈಗೊಂಡಿಲ್ಲ. ಕೇವಲ ಜನರ ಕಣ್ಣೊರೆಸಲು ಈ ರೀತಿ ಕಾರ್ಯಕ್ರಮ ನಡೆಸುತ್ತಿದ್ದೀರಿ. 2017ರಲ್ಲಿ ‌ಲೋಕಾಯುಕ್ತಕ್ಕೆ ದೂರು ನೀಡಿದ್ದು ಯಾವುದೇ ಕ್ರಮ ಆಗಿಲ್ಲ. ಲೋಕಾಯುಕ್ತ ಅಧಿಕಾರಿಗಳಿಂದ ಬಡವರಿಗಾಗಲಿ ರೈತರಿಗಾಗಲಿ ನ್ಯಾಯ ಸಿಗುತ್ತಿಲ್ಲ’ ಎಂದು ರೈತ ಮುಖಂಡ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ವಡ್ಡರಗುಡಿ ನಾಗರಾಜ್ ಮಾತನಾಡಿ ‘ತಾಲ್ಲೂಕಿನಲ್ಲಿ ಅನೇಕ ಲೋಕಾಯುಕ್ತ ಸಭೆಗಳನ್ನು ನಡೆಸಿದ್ದು ಅಧಿಕಾರಿಗಳು ಸಮಯ ತೆಗೆದುಕೊಂಡು ರೈತರಿಗೆ ಯಾವುದೇ ಕೆಲಸ ಮಾಡಿಕೊಟ್ಟಿಲ್ಲ. ಜಿಲ್ಲಾಧಿಕಾರಿ ಸಭೆಯಲ್ಲಿ ನೀಡಿದ ದೂರಿಗೂ ನ್ಯಾಯ ಸಿಕ್ಕಿಲ್ಲ. ರಾಜಕಾರಣಿಗಳ ಕೈಗೊಂಬೆಯಾಗಿ ವರ್ತಿಸುತ್ತಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.