ADVERTISEMENT

ಆರ್‌ಎಸ್‌ಎಸ್‌ ಅಲ್ಲ, ಕಾಂಗ್ರೆಸ್‌ ಬಂದ್ ಆಗದಂತೆ ನೋಡಿಕೊಳ್ಳಿ: ಎಚ್‌ಡಿಕೆ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 21:08 IST
Last Updated 5 ಜುಲೈ 2025, 21:08 IST
ಎಚ್‌ಡಿಕೆ
ಎಚ್‌ಡಿಕೆ   

ಮೈಸೂರು: ‘ಆರ್‌ಎಸ್ಎಸ್ ಬಂದ್ ಮಾಡುವುದಿರಲಿ, ಈಗ ಕಾಂಗ್ರೆಸ್ ಎಲ್ಲಾ ಕಡೆಯೂ ಬಂದ್ ಆಗುತ್ತಿದೆ. ಮೊದಲು ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ ನಿಷೇಧಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಆರ್‌ಎಸ್ಎಸ್ ವಿಚಾರ ಇರಲಿ. 40 ವರ್ಷದಿಂದ ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೀರಾ ಎಂಬುದನ್ನು ಮೊದಲು ಹೇಳಿ. ಪ್ರಿಯಾಂಕ್ ಬಾಯಿ ಚಪಲಕ್ಕೆ ಮೂಲ ವಿಚಾರಗಳನ್ನು ಮರೆ ಮಾಚಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರಷ್ಟೆ’ ಎಂದರು.

‘ಕಾಂಗ್ರೆಸ್‌ನವರಿಗೆ ನನ್ನನ್ನು ಕಂಡರೆ ಅತಿಯಾದ ಭಯವಿದೆ. ಹೀಗಾಗಿ ಪದೇ ಪದೇ ನನ್ನ ಹೆಸರನ್ನು ಜಪಿಸುತ್ತಾರೆ. ಬಿಜೆಪಿ-ಜೆಡಿಎಸ್ ಜೊತೆಯಾದ ಮೇಲಂತೂ ಅವರಿಗೆ ನಿದ್ದೆ ಬರುತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಮುಂದಿನ ಬಾರಿಯೂ ನಮ್ಮದೇ ಸರ್ಕಾರ’ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ, ‘ಇನ್ನೂ ಇಪ್ಪತ್ತು ವರ್ಷವೂ ನಿಮ್ಮದೇ ಸರ್ಕಾರ ಇರಲಿ. ಮೊದಲು ಹೇಳಿದ ಕೆಲಸ ಮಾಡಿ. 20 ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದರು ಎಂಬುದು ನಮಗೂ ಗೊತ್ತಿದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಗಲಾಟೆಗಳೇ ನಡೆಯುತ್ತಿವೆ. ಇವರನ್ನು ಜನ ಹೇಗೆ ಒಪ್ಪುತ್ತಾರೆ’ ಎಂದು ಪ್ರಶ್ನಿಸಿದರು.

‘ಮೇಕೆದಾಟು ವಿಚಾರದಲ್ಲಿ ನನ್ನ ಹೇಳಿಕೆಗೆ ಈಗಲೂ ಬದ್ಧ. ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರವನ್ನು ಒಪ್ಪಿಸಿದ್ದೇ ಆದಲ್ಲಿ ಐದು ನಿಮಿಷದಲ್ಲಿ ಪ್ರಧಾನಿಯಿಂದ ಅನುಮತಿ ಕೊಡಿಸುತ್ತೇನೆ. ಅದನ್ನು ಮಾಡದೆ ಮೇಕೆದಾಟು ಯೋಜನೆ ಕಚೇರಿ ತೆರೆದರೆ ಏನು ಪ್ರಯೋಜನ?’ ಎಂದು ಕೇಳಿದರು.

‘ಮಂಡ್ಯಕ್ಕೆ ಸಂಸದರ ಅನುದಾನ ಮಾತ್ರವಲ್ಲ, ವಿಶೇಷ ಅನುದಾನವನ್ನೂ ತಂದಿದ್ದೇನೆ. ದೇಶದ ಯಾವ ಭಾಗದಿಂದ ಎಷ್ಟು ಅನುದಾನ ತಂದಿದ್ದೇನೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ’ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.