ADVERTISEMENT

‘ನನಗಾಗಿದ್ದರೆ, ಇಷ್ಟೊತ್ತಿಗೆ ಎಲ್ಲಿದ್ದೀಯೋ ಕುಮಾರ ಅನ್ನೋರು!’

ಮೋದಿ ಕಾಲ್ಗುಣ ಸರಿಯಿಲ್ಲ; ಚಂದ್ರಯಾನ–2ಕ್ಕೆ ಅಪಶಕುನವಾಯ್ತು–ಎಚ್‌.ಡಿ.ಕುಮಾರಸ್ವಾಮಿ ಲೇವಡಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 19:45 IST
Last Updated 12 ಸೆಪ್ಟೆಂಬರ್ 2019, 19:45 IST
ಮೈಸೂರಿನಲ್ಲಿ ಗುರುವಾರ ನಡೆದ ಜೆಡಿಎಸ್‌ ಮುಖಂಡರ ಚಿಂತನ–ಮಂಥನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು. ಮುಖಂಡ ಅಬ್ದುಲ್ಲಾ, ಶಾಸಕರಾದ ಅಶ್ವಿನ್‌ಕುಮಾರ್‌, ಸಾ.ರಾ.ಮಹೇಶ್‌, ಮುಖಂಡ ಚಂದ್ರೇಗೌಡ, ಪಾಲಿಕೆ ಸದಸ್ಯೆ ಪ್ರೇಮಾ ಇದ್ದಾರೆ
ಮೈಸೂರಿನಲ್ಲಿ ಗುರುವಾರ ನಡೆದ ಜೆಡಿಎಸ್‌ ಮುಖಂಡರ ಚಿಂತನ–ಮಂಥನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು. ಮುಖಂಡ ಅಬ್ದುಲ್ಲಾ, ಶಾಸಕರಾದ ಅಶ್ವಿನ್‌ಕುಮಾರ್‌, ಸಾ.ರಾ.ಮಹೇಶ್‌, ಮುಖಂಡ ಚಂದ್ರೇಗೌಡ, ಪಾಲಿಕೆ ಸದಸ್ಯೆ ಪ್ರೇಮಾ ಇದ್ದಾರೆ   

ಮೈಸೂರು: ‘ನೆರೆ ಸಂತ್ರಸ್ತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವನ್ನೇ ಕಳೆದುಕೊಂಡಿದ್ದು, ಬಹುಶಃ ಜಾತಿಯ ವ್ಯಾಮೋಹಕ್ಕೆ ಸಿಲುಕಿ ಸುಮ್ಮನಾಗಿರಬಹುದು’ ಎಂದು ಜೆಡಿಎಸ್‌ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಪ್ರವಾಹಪೀಡಿತರಿಗೆ, ಇದುವರೆಗೂ ಕೇಂದ್ರ ಸರ್ಕಾರದಿಂದ ಬಿಡಿಗಾಸೂ ಸಿಕ್ಕಿಲ್ಲ. ಅದೇ ಒಂದು ವೇಳೆ ನಾನು ಅಧಿಕಾರದಲ್ಲಿ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ‘ಎಲ್ಲಿದ್ದೀಯೋ ಕುಮಾರ?’ ಅನ್ನೋರು!’ ಎಂದು ಕುಟುಕಿದರು.

‘ಕಷ್ಟಪಟ್ಟು ಕುತಂತ್ರ ಮಾಡಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೇರಿದ ಯಡಿಯೂರಪ್ಪ ಅವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ಅವಕಾಶವೇ ಇಲ್ಲವಾಗಿದೆ. ಸಚಿವರೊಂದಿಗೆ ಅವರಿಗೆ ಹೊಂದಾಣಿಕೆಯೂ ಇಲ್ಲ. ಹೀಗಾಗಿ, ಸರ್ಕಾರವನ್ನು ನಾವ್ಯಾರೂ ಬೀಳಿಸುವ ಯತ್ನ ಮಾಡುವುದಿಲ್ಲ. ಬಿಜೆಪಿಯ ವರಿಷ್ಠರೇ ಆ ಕೆಲಸ ಮಾಡಿ, ಚುನಾವಣೆಗೆ ಹೋಗುತ್ತಾರೆ’ ಎಂದರು.

ADVERTISEMENT

‘ಸಾಲಮನ್ನಾಕ್ಕಾಗಿ ಮೀಸಲಿಟ್ಟಿದ್ದ ಅನುದಾನದಲ್ಲೇ ಉಳಿದಿರುವ ₹ 4000 ಕೋಟಿ–₹ 5000 ಕೋಟಿ ಹಣವನ್ನೇ ತಾತ್ಕಾಲಿಕವಾಗಿ ನೆರೆ ಸಂತ್ರಸ್ತರ ನೆರವಿಗಾಗಿ ಬಳಸಿಕೊಳ್ಳಬಹುದು. ಈ ಸರ್ಕಾರ ಅದನ್ನೂ ಮಾಡುತ್ತಿಲ್ಲ’ ಎಂದು ಟೀಕಿಸಿದರು.

ನೆರೆ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿಯಾಗಿರುವ ವಸತಿ ಸಚಿವ ವಿ. ಸೋಮಣ್ಣ ಅವರ ಕಾರ್ಯವೈಖರಿಯನ್ನೂ ಟೀಕಿಸಿದ ಅವರು, ‘ಮೈಸೂರಿನಲ್ಲೇ ಠಿಕಾಣಿ ಹೂಡಿ, ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಹೋಳಿಗೆ ಊಟ ಬಡಿಸುವುದರಲ್ಲೇ ಬ್ಯುಸಿಯಾಗಿದ್ದಾರೆ’ ಎಂದು ಛೇಡಿಸಿದರು.

‘ಚಂದ್ರಯಾನ–2: ಮೋದಿ ಕಾಲ್ಗುಣದಿಂದಲೇ ಅಪಶಕುನ’

‘ಚಂದ್ರಯಾನ–2 ಯೋಜನೆ ತಮ್ಮದೇ ಎಂದು ಬಿಂಬಿಸಿಕೊಂಡು ಪ್ರಚಾರ ಗಿಟ್ಟಿಸಲು ಪ್ರಧಾನಿ ಹವಣಿಸಿದ್ದರು. ಇದಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದರು. ಇಸ್ರೊ ಅಂಗಳಕ್ಕೆ ಕಾಲಿಟ್ಟ ಕ್ಷಣವೇ ಅವರ ಕಾಲ್ಗುಣದಿಂದ ಅಪಶಕುನವಾಯ್ತು’ ಎಂದು ಕುಮಾರಸ್ವಾಮಿ ಹೇಳಿದರು.

‘ರಷ್ಯಾಗೆ ₹ 7000 ಕೋಟಿ ನೆರವು ನೀಡಲು ಅವರ ಬಳಿ ಹಣವಿದೆ. ನೆರೆ ಸಂತ್ರಸ್ತರಿಗೆ ಬಿಡಿಗಾಸು ನೀಡುವ ಔದಾರ್ಯವಿಲ್ಲ’ ಎಂದು ಕಿಡಿ ಕಾರಿದ ಅವರು, ‘ಅಮಿತ್‌ ಶಾ ಸೇರಿದಂತೆ ಬೆರಳೆಣಿಕೆಯ ಒಂದಿಬ್ಬರನ್ನು ಬಿಟ್ಟು ಬಿಜೆಪಿಯ ಯಾವೊಬ್ಬ ಮುಖಂಡರೂ ಮಾತನಾಡುವ ಧೈರ್ಯ ತೋರಲ್ಲ. ಪಕ್ಷದವರಿಗೇ ಈ ಗತಿ ಇದ್ದು, ಇನ್ನು ನಮ್ಮನ್ನು ಮಾತನಾಡಿಸುತ್ತಾರಾ?’ ಎಂದು ವ್ಯಂಗ್ಯವಾಡಿದರು.

ಅಧಿಕಾರವಿದ್ದಾಗ ಕಡೆಗಣಿಸುತ್ತೀರಿ; ಬಲಿಪಶುಗಳನ್ನಾಗಿಸಬೇಡಿ

ಮೈಸೂರು: ‘ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಎದುರಾಗಬಹುದು. ಧೈರ್ಯಗುಂದಬೇಡಿ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸೋಣ’ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ, ಮುಖಂಡರು ತಮ್ಮದೇ ಮಾತುಗಳ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡರು ಎಂಬುದು ತಿಳಿದು ಬಂದಿದೆ.

ನಗರದಲ್ಲಿ ಗುರುವಾರ ನಡೆದ ಜೆಡಿಎಸ್‌ನ ಚಿಂತನ–ಮಂಥನ ಗೋಪ್ಯ ಸಭೆಯಲ್ಲಿ ಹಲವು ಮುಖಂಡರು ತಮ್ಮೊಳಗಿನ ಅಸಮಾಧಾನದ ಕುದಿಯನ್ನು ಹೊರಹಾಕಿದರು. ಬರೋಬ್ಬರಿ ಮೂರು ತಾಸು ನಡೆದ ಸಭೆಯುದ್ದಕ್ಕೂ ಆಕ್ರೋಶ ಆಸ್ಫೋಟಗೊಂಡಿತು. ಸಲಹೆಗಳು ಪುಂಖಾನುಪುಂಖವಾಗಿ ಹೊರಹೊಮ್ಮಿದವು ಎನ್ನಲಾಗಿದೆ.

‘ಅಧಿಕಾರದಲ್ಲಿದ್ದಾಗ ಎರಡನೇ ಹಂತದ ಮುಖಂಡರನ್ನು ಸನಿಹಕ್ಕೆ ಬಿಟ್ಟುಕೊಳ್ಳಲ್ಲ. ಭೇಟಿಯಾಗಲು ಬಂದರೂ ಹೋಟೆಲ್‌ನಲ್ಲಿರುತ್ತೀರಿ. ಮೂರ್ನಾಲ್ಕು ಮಂದಿಗೆ ಸೀಮಿತವಾಗಿ ಕೆಲಸ ಮಾಡುತ್ತೀರಿ. ಕಾರ್ಯಕರ್ತರನ್ನಂತೂ ಕಿರುಗಣ್ಣಿನಿಂದಲೂ ನೋಡಲ್ಲ. ನಿಮ್ಮ ಸುತ್ತಲೂ ಪಕ್ಷಕ್ಕೆ ಸಂಬಂಧವಿಲ್ಲದವರೇ ಹೆಚ್ಚಿರುತ್ತಾರೆ. ಇನ್ನಾದರೂ ಬೆರಳೆಣಿಕೆ ಜನಕ್ಕೆ ಸೀಮಿತರಾಗೋದನ್ನು ಬಿಡಿ. ಕಾರ್ಯಕರ್ತರ ಜತೆ ಬೆರೆಯಿರಿ’ ಎಂದು ಬಹುತೇಕರು ನೇರವಾಗಿಯೇ ಕುಮಾರಸ್ವಾಮಿಗೆ ಹೇಳಿದರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹೆಸರು ಬಹಿರಂಗಗೊಳಿಸಲಿಚ್ಚಿಸದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾ.ರಾ.ಮಹೇಶ್‌–ಜಿ.ಟಿ.ದೇವೇಗೌಡರ ನಡುವಿನ ಮುನಿಸನ್ನು ಶಮನಗೊಳಿಸಿ. ಇಬ್ಬರನ್ನೂ ಒಟ್ಟಿಗೆ ಕೂರಿಸಿ ಮಾತನಾಡಿಸಿ. ಇಬ್ಬರ ನಡುವೆ ಕಾರ್ಯಕರ್ತರು ಬಲಿಪಶುಗಳಾಗೋದು ಬೇಡ’ ಎಂದು ಹಲವು ಮುಖಂಡರು ಹೇಳಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.