ADVERTISEMENT

ಮೈಸೂರು: ನಗರದಲ್ಲಿ ದಿನವಿಡೀ ಮಳೆಯ ಮಜ್ಜನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:22 IST
Last Updated 16 ಜುಲೈ 2024, 4:22 IST
ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಮಳೆ ನೀರಿನಲ್ಲಿ ವಾಹನವೊಂದು ಸಾಗಿದ ರೀತಿ -ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಮಳೆ ನೀರಿನಲ್ಲಿ ವಾಹನವೊಂದು ಸಾಗಿದ ರೀತಿ -ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.   

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ದಿನವಿಡೀ ಮಳೆಯ ಮಜ್ಜನವಾಗಿದ್ದು, ಆಷಾಢದ ಕುಳಿರ್ಗಾಳಿಯೂ ಜೊತೆಗೂಡಿ ಜನರು ನಡುಗುವಂತಾಯಿತು. ಚಾಮುಂಡಿ ಬೆಟ್ಟವನ್ನು ಮಳೆ ಮೋಡಗಳು ತಬ್ಬಿದ್ದು, ಇಡೀ ಬೆಟ್ಟಕ್ಕೆ ಮೋಡದ ಹೊದಿಕೆ ಹೊದಿಸಿದಂತೆ ಕಂಡುಬಂದಿತು.

ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಆರಂಭ ಆಗಿದ್ದು, ಮಧ್ಯಾಹ್ನ ಜೋರಾಗಿ ಸುರಿಯಿತು. ನಂತರ ಒಂದಿಷ್ಟು ಬಿಡುವು ಕೊಟ್ಟು ಸಂಜೆ ಮತ್ತೆ ಆರಂಭಗೊಂಡಿದ್ದು, ರಾತ್ರಿವರೆಗೂ ಹನಿಯುತ್ತಲೇ ಇತ್ತು. ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿದಿದ್ದು, ಜನ ಈ ನಡುವೆಯೇ ಓಡಾಡಲು ತೊಂದರೆ ಪಟ್ಟರು. ಶಾಲೆ–ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳಿಗೂ ಮಳೆ ಕಾಡಿತು. ಬೀದಿ ಬದಿಯ ವ್ಯಾಪಾರವು ಥಂಡ ಹೊಡೆಯಿತು. ಜನರು ರಾತ್ರಿ ಹೊರಗೆ ಕಾಲಿಡದೇ ಮನೆಗಳಲ್ಲೇ  ಉಳಿಯುವಂತೆ ಆಯಿತು.

ಜೂನ್ 1ರಿಂದ ಜುಲೈ 15ರವರೆಗೆ ಜಿಲ್ಲೆಯಲ್ಲಿ 155 ಮಿಲಿಮೀಟರ್ ವಾಡಿಕೆಗೆ ಪ್ರತಿಯಾಗಿ 169 ಮಿಲಿಮೀಟರ್‌ನಷ್ಟು ಮಳೆ ಸುರಿದಿದೆ. ಮುಂದಿನ ಕೆಲವು ದಿನಗಳ ಕಾಲ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ. ಮುಂಗಾರಿನ ವರ್ಷಧಾರೆ ಫಲಪ್ರದವಾಗಿದ್ದು, ನಾಲೆಗಳಿಗೆ ನೀರು ಹರಿಯುವುದರಿಂದ ಜಿಲ್ಲೆಯಲ್ಲಿ ಭತ್ತದ ಕೃಷಿ ಚುರುಕಾಗುವ ನಿರೀಕ್ಷೆ ಇದೆ.

ADVERTISEMENT
ಮೈಸೂರಿನಲ್ಲಿ ಸೋಮವಾರ ಮಳೆಯಲ್ಲಿ ವಾಹನ ಸವಾರರು ಸಾಗಿದ ಪರಿ -ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.