ADVERTISEMENT

ಮೈಸೂರು: ಧಾರಾಕಾರ ಮಳೆಗೆ ತಂಪಾದ ಇಳೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 7:16 IST
Last Updated 2 ಸೆಪ್ಟೆಂಬರ್ 2020, 7:16 IST

ಮೈಸೂರು: ಜಿಲ್ಲೆಯಲ್ಲಿ ಗುಡುಗು ಮತ್ತು ಸಿಡಿಲಿನಿಂದ ಕೂಡಿದ ಮಳೆಯು ಮಂಗಳವಾರ ನಸುಕಿನಲ್ಲಿ ಧಾರಾಕಾರವಾಗಿ ಸುರಿಯಿತು. ಭಾರಿ ಶಬ್ದದೊಂದಿಗೆ ಸಿಡಿಲು ಆರ್ಭಟಿಸಿತು. ಕಳೆದ ಹಲವು ದಿನಗಳಿಂದ ಮಳೆ ಇಲ್ಲದೇ ಬಿಸಿಲಿನ ಝಳ ಹೆಚ್ಚಾಗಿತ್ತು. ಬೆಳಿಗ್ಗೆವರೆಗೂ ಸುರಿದ ಮಳೆ ಭೂಮಿಯನ್ನು ತಂಪಾಗಿಸಿತು.

ಜಿಲ್ಲೆಯಾದ್ಯಂತ ಬಹುತೇಕ ಕಡೆ ಸಾಧಾರಣದಿಂದ ಭಾರಿ ಮಳೆ ಸುರಿದಿದೆ. ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಸೆಂ.ಮೀ.ನಷ್ಟು ಮಳೆಯಾಗಿದ್ದರೆ, ತಿ.ನರಸೀಪುರ ತಾಲ್ಲೂಕಿನ ಯಲಚೇನಹಳ್ಳಿ ಭಾಗದಲ್ಲಿ 7 ಸೆಂ.ಮೀ.ನಷ್ಟು ಭಾರಿ ಮಳೆ ಸುರಿದಿದೆ. ಎಚ್.ಡಿ.ಕೋಟೆಯ ಸಾಗರೆಯಲ್ಲಿ 4, ಕೆ.ಆರ್.ನಗರ ಹೆಬ್ಬಾಳ ಹಾಗೂ ಪಿರಿಯಾಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ತಲಾ 2 ಸೆಂ.ಮಿ.ನಷ್ಟು ಆಗಿದೆ.

ಮೈಸೂರು ತಾಲ್ಲೂಕಿನಲ್ಲಿಯೂ ಉತ್ತಮ ಮಳೆ ಸುರಿದಿದೆ. ನಗರದಲ್ಲಿ 5 ಸೆಂ.ಮೀ.ನಷ್ಟು ಮಳೆಯಾಗಿದೆ. ಬೆಳಿಗ್ಗೆವರೆಗೂ ಸೋನೆ ಮಳೆ ಬೀಳುತ್ತಲೇ ಇತ್ತು. ತಗ್ಗು ಪ್ರದೇಶಗಳಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ.

ADVERTISEMENT

ಕಳೆದ 15 ದಿನಗಳಿಂದಲೂ ಮಳೆಯ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗಿತ್ತು. ಕಪಿಲಾ ನದಿಯಲ್ಲಿ ಪ್ರವಾಹ ಪರಿಸ್ಥಿತಿಯ ನಂತರ ಈ ಭಾಗದಲ್ಲಿ ಮಳೆ ಮರೀಚಿಕೆಯಾಗಿತ್ತು. ಪ್ರಖರ ಬಿಸಿಲಿನಿಂದಾಗಿ ತಾ‍ಪಮಾನ ಏರಿಕೆ ಕಂಡಿತ್ತು.

ಇದರಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬಹುತೇಕ ಬೆಳೆಗಳು ಒಣಗುವ ಸ್ಥಿತಿ ತಲುಪಿತ್ತು. ಕೆಲವು ಕಡೆ ಮಳೆ ಇಲ್ಲದೇ ಇಳುವರಿ ಕಡಿಮೆಯಾಗುವ ಆತಂಕ ಮೂಡಿತ್ತು. ಹೀಗಾಗಿ, ಮಳೆಯ ನಿರೀಕ್ಷೆಯಲ್ಲಿ ರೈತರಿದ್ದರು. ಸದ್ಯ, ಬಿದ್ದಿರುವ ಮಳೆಯು ಬಹುತೇಕ ಎಲ್ಲ ಬೆಳೆಗಳಿಗೂ ಸಹಕಾರಿಯಾಗಿದೆ.

ತರಕಾರಿ, ಹೂವು ಸೇರಿದಂತೆ ತೋಟಗಾರಿಕಾ ಬೆಳೆಗಳೂ ಮಳೆಯಿಂದ ನಳನಳಿಸುವಂತಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ, ಗುಡ್ಡೆಹೂಸೂರು, ದುಬಾರೆ, ಭಾಗಮಂಡಲ, ನಾಪೋಕ್ಲು ಹಾಗೂ ತಲಕಾವೇರಿ ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.