ADVERTISEMENT

ಮೈಸೂರು ಭಾಗದಲ್ಲಿ ಮಳೆ, ಉರುಳಿದ ಮರ‌, ವಿದ್ಯುತ್‌ ಕಂಬ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 20:08 IST
Last Updated 14 ಜೂನ್ 2022, 20:08 IST
ಭಾರತೀನಗರ ಸಮೀಪದ ಅರೆಚಾಕನಹಳ್ಳಿಯಲ್ಲಿ ಶಾಲಾ ಕಟ್ಟಡದ ಮೇಲೆ ಮರ ಉರುಳಿದೆ
ಭಾರತೀನಗರ ಸಮೀಪದ ಅರೆಚಾಕನಹಳ್ಳಿಯಲ್ಲಿ ಶಾಲಾ ಕಟ್ಟಡದ ಮೇಲೆ ಮರ ಉರುಳಿದೆ   

ಮೈಸೂರು: ಮೈಸೂರು ಭಾಗದ ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಬಿರುಗಾಳಿ, ಗುಡುಗು–ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿದಿದೆ.

ಮಂಡ್ಯ ಜಿಲ್ಲೆಯಭಾರತೀನಗರ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿದವು. ಅರೆಚಾಕನಹಳ್ಳಿಯಲ್ಲಿ ಮರ ಬಿದ್ದು ಶಾಲಾ ಕಟ್ಟಡದ ಹೆಂಚುಗಳು ಒಡೆದವು. ಗೋಡೆಯಲ್ಲೂ ಬಿರುಕು ಕಾಣಿಸಿಕೊಂಡಿತು. ಬಿರುಗಾಳಿ ಶುರು
ವಾದ ಕೂಡಲೇ ಶಿಕ್ಷಕರು ಮಕ್ಕಳನ್ನು ಬೇರೊಂದು ಕಟ್ಟಡಕ್ಕೆ ಕರೆದೊಯ್ದಿದ್ದರಿಂದ ಅಪಾಯ ಸಂಭವಿಸಿಲ್ಲ. ಶಂಭುಲಿಂಗೇಶ್ವರ ದೇವಾಲಯದ ಚಾವಣಿಗೆ ಹೊದಿಸಿದ್ದ ಶೀಟುಗಳು ಹಾರಿ ಹೋಗಿವೆ.

ಮೈಸೂರು ಜಿಲ್ಲೆಯ ಹುಣಸೂರು, ಕೃಷ್ಣರಾಜನಗರ ತಾಲ್ಲೂಕಿನಲ್ಲಿ ಗುಡುಗು–ಸಿಡಿಲಿನ ಮಳೆ
ಯಾದರೆ, ನಂಜನಗೂಡು ಹಾಗೂ ತಿ.ನರಸೀಪುರದ ಕೆಲಭಾಗ ತುಂತುರು ಮಳೆಯಾಯಿತು. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಮಧ್ಯಾಹ್ನ ಬಿರುಸಿನ ಮಳೆ ಸುರಿಯಿತು. ನೆಲಜಿ, ಕಕ್ಕಬ್ಬೆ, ಬಲಮುರಿ, ಪಾರಾಣೆ, ಕೈಕಾಡು ಭಾಗದಲ್ಲೂ ಮಳೆಯಾಗಿದೆ.

ADVERTISEMENT

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆ ಸುರಿಯಿತು.

ಸಿಡಿಲು ಬಡಿದು ಯುವತಿ ಸಾವು

ಕಲಬುರಗಿ: ಯಾದಗಿರಿ ಜಿಲ್ಲೆಯ ಕೆಂಭಾವಿ ಸಮೀಪದ ಮಲ್ಲಾ ಗ್ರಾಮದಲ್ಲಿ ಮಂಗಳವಾರ ಸಂಜೆ ಹೊಲದಲ್ಲಿ ಕಳೆ ತೆಗೆಯುತ್ತಿದ್ದ ವೇಳೆ ಸಿಡಿಲು ಬಡಿದು ವಿದ್ಯಾ ಸಂಗಪ್ಪ ಕುಂಬಾರ (19) ಎಂಬ ಯುವತಿ ಸಾವನ್ನಪ್ಪಿದ್ದಾರೆ.

ಬೀದರ್ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಂಜೆ ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.