ADVERTISEMENT

ಮೈಸೂರು: ಪೀಠೋಪಕರಣ ಖರೀದಿಯಲ್ಲಿ ‘ಪರಂಪರೆ’ ನಿರ್ಲಕ್ಷ?

ಮಹಾರಾಜ ಕಾಲೇಜು: ಖರೀದಿ ಸಮಿತಿ ಸಲಹೆ ಇಲ್ಲದೇ ಏಕಪಕ್ಷೀಯ ನಡೆ– ಆರೋ‍ಪ

ಮೋಹನ್‌ ಕುಮಾರ್‌ ಸಿ.
Published 3 ಜನವರಿ 2026, 8:32 IST
Last Updated 3 ಜನವರಿ 2026, 8:32 IST
ಮಹಾರಾಜ ಕಾಲೇಜಿನಲ್ಲಿ ಹೊಸದಾಗಿ ಖರೀದಿಸಿರುವ ಪೀಠೋಪಕರಣಗಳು
ಮಹಾರಾಜ ಕಾಲೇಜಿನಲ್ಲಿ ಹೊಸದಾಗಿ ಖರೀದಿಸಿರುವ ಪೀಠೋಪಕರಣಗಳು   

ಮೈಸೂರು: ಒಂದೂವರೆ ಶತಮಾನದಷ್ಟು ಇತಿಹಾಸದ ‘ಪಾರಂಪರಿಕ’ ಕಟ್ಟಡಗಳಲ್ಲಿ ಒಂದಾಗಿರುವ ಮಹಾರಾಜ ಕಾಲೇಜು, ತನ್ನ ಐತಿಹಾಸಿಕ ಕುರುಹುಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತಿದೆ. ಇದೀಗ ಅಲ್ಲಿನ ಪೀಠೋಪಕರಣ ಖರೀದಿಯಲ್ಲಿ ‘ಪಾರಂಪರಿಕ’ ಅಸ್ಮಿತೆಯನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. 

‘ತೇಗ, ಬೀಟೆ ಮರದಿಂದ ಮಾಡಿದ್ದ ಬೆಲೆಬಾಳುವ ಪೀಠೋಪಕರಣಗಳು ಐತಿಹಾಸಿಕ ಕಟ್ಟಡ ದಿವ್ಯಸ್ಮೃತಿಯಾಗಿದ್ದವು. ಅವನ್ನು ದುರಸ್ತಿಗೆ ಒಳಪಡಿಸದೇ ವಿಸ್ಮೃತಿಗೆ ತಳ್ಳಲಾಗುತ್ತಿದೆ. ಹೊಸ ಪರಿಕರಗಳು ಆವರಿಸಿ, ಬೆಲೆಬಾಳುವ ಮುರಿದ ಮೇಜು, ಕುರ್ಚಿಗಳು ಹರಾಜಿನಲ್ಲಿ ಬೇರೆಯವರ ಪಾಲಾಗುತ್ತಿವೆ’ ಎಂಬ ಆತಂಕ ಇಲ್ಲಿನ ಅಧ್ಯಾಪಕರದ್ದು. 

139 ವರ್ಷ ಇತಿಹಾಸ: ‘1889ರಲ್ಲಿ ಚಾಮರಾಜೇಂದ್ರ ಒಡೆಯರ್‌ ಅವರಿಂದ ಸ್ಥಾಪನೆಯಾದ ಮಹಾರಾಜ ಕಾಲೇಜು ನಾಡನ್ನು ರೂಪಿಸಿದ ಜ್ಞಾನ ದೇಗುಲ. ಮೇಜು, ಕುರ್ಚಿ, ಬೆಂಚುಗಳು ಕಟ್ಟಡದಷ್ಟೇ ಅಮೂಲ್ಯ. ಇಲ್ಲಿನ ಕಂಬಗಳು ಕನ್ನಡದ ಆಧಾರಸ್ತಂಭಗಳಾದರೆ, ಕೊಠಡಿಗಳ ಗೋಡೆಗಳು ಮೇರು ಕವಿಗಳ, ವಿಮರ್ಶಕರ, ಚಿಂತಕರ ದನಿಯನ್ನು ಶತಮಾನದಿಂದ ಆಲಿಸಿವೆ.

ADVERTISEMENT

‘ಯಾವುದೇ ಹೊಸದಾದ ಪೀಠೋಪಕರಣ  ಖರೀದಿಸಬೇಕಾದರೆ ಕಾಲೇಜಿನ ಖರೀದಿ ಸಮಿತಿಯ ಅನುಮೋದನೆ ಪಡೆಯಬೇಕು. ಆದರಿಲ್ಲಿ, ಯಾವ ನಿಯಮವೂ ಪಾಲನೆಯಾಗಿಲ್ಲ’ ಎಂದು ಅಧ್ಯಾಪಕರೊಬ್ಬರು ತಿಳಿಸಿದರು.

‘ಎಲ್ಲ ವಿಭಾಗಗಳ ಮುಖ್ಯಸ್ಥರನ್ನು ಒಳಗೊಂಡ ಖರೀದಿ ಸಮಿತಿ ಇದು. ಯಾವುದೇ ಪೀಠೋಪಕರಣ ಅಗತ್ಯವಾದರೆ, ಪಟ್ಟಿ ತಯಾರಿಸಿ ಕೊಡಬೇಕು. ಅವರು ಬೇಡಿಕೆಯನ್ನೇ ಕೊಟ್ಟಿಲ್ಲ. ಪ್ರಾಂಶುಪಾಲರೇ ಏಕಪಕ್ಷೀಯವಾಗಿ ನಿರ್ಧರಿಸಿದ್ದಾರೆ. ಎಲ್ಲವೂ ಏಕಮುಖವಾಗಿ ನಡೆದಿದೆ. ಈಗ ಆ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿಗಳ ವರ್ಗಾವಣೆಯೂ ಆಗಿ ಹೋಗಿದೆ’ ಎಂದರು. 

‘ಕಾರ್ಡ್‌ಬೋರ್ಡ್‌ ಶೀಟಿನಂಥ ಪರಿಕರದಿಂದ ಮಾಡಿದ ಕಂಪ್ಯೂಟರ್ ಟೇಬಲ್‌ಗಳ ಮಾದರಿಯ ಪೀಠೋಪಕರಣ ತರಲಾಗಿದೆ. ಅವುಗಳಿಗೆ ಗುಣಮಟ್ಟವಿಲ್ಲ. ಮೇಜಿನ ನೀಲಿ ಬಣ್ಣವು ಉದುರಿ ಹೋಗುತ್ತದೆ. ಕೆರೆದರೆ ಕಿತ್ತು ಬರುತ್ತದೆ’ ಎಂದು ಹೇಳಿದರು.

ಗುಜರಿಗೆ: ‘ಬೆಲೆ ಬಾಳುವ ಮೇಜು ಕುರ್ಚಿಗಳನ್ನು ಪ್ರತಿವರ್ಷವೂ ಗುಜರಿಗೆ ಕೊಡಲು ಬಿಸಾಡಲಾಗಿದೆ. ಜ್ಯೂನಿಯರ್, ಸೀನಿಯರ್ ಬಿ.ಎ ಹಾಲ್‌ನ ಪಕ್ಕದಲ್ಲಿರುವ ಜಾಗದಲ್ಲಿ ಬಿಸಾಡಲಾಗುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದನ್ನು ಮಾರಾಟ ಮಾಡಿದರೆ, ಹೆಚ್ಚು ಲಾಭವೂ ಸಿಗುತ್ತದೆ. ಎಷ್ಟು ಕೊಟ್ಟರೂ ವಿಶ್ವವಿದ್ಯಾಲಯಕ್ಕೂ ಅದರ ಲೆಕ್ಕ ಬೇಕಿಲ್ಲ’ ಎಂದರು. 

‘ಪಿಂಚಣಿಗೆ ಹಣವಿಲ್ಲ.. ಪೀಠೋಪಕರಣಕ್ಕೆಲ್ಲಿಂದ ಬಂತು’

‘ಮಹಾರಾಜ ಕಾಲೇಜಿನ ಪೀಠೋಪಕರಣಗಳನ್ನು ಗಟ್ಟಿಮುಟ್ಟಾದ ಸಾಗುವನಿ ಮರದಿಂದ ಮಾಡಲಾಗಿದೆ. ದಪ್ಪ ಮರಗಳನ್ನು ಬಳಸಲಾಗಿದೆ. ಅರಮನೆ ಕಟ್ಟುವಾಗ ಬಳಕೆಯಾದ ಮರಗಳೇ ಇಲ್ಲಿಗೂ ಬಂದಿವೆ. ಹೀಗಾಗಿ ಅದನ್ನು ಉಳಿಸಿಕೊಳ್ಳಬೇಕು’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್‌.ರಂಗರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

‘ವಿಶ್ವವಿದ್ಯಾಲಯದಲ್ಲಿ ಹೊಸ ಕಟ್ಟಡ ಕಟ್ಟಲು ಹುಣಸೂರು ರಸ್ತೆಯ ಎಂಜಿನಿಯರಿಂಗ್‌ ಕಾಲೇಜಿನ ಪ್ರವೇಶಕ್ಕೆ ದ್ವಾರ ನಿರ್ಮಿಸಲು ಹಣವಿದೆ. ಆದರೆ ಪಿಂಚಣಿ ನೀಡಲು ಹಳೆ ಕಟ್ಟಡ ಸಂರಕ್ಷಿಸಲು ಹಣವಿಲ್ಲ. ಮಹಾರಾಜ ಕಾಲೇಜು ಹಾಗೂ ಅದಕ್ಕೆ ಹೊಂದಿಕೊಂಡಿರುವ ಯೂನಿಯನ್ ಬಿಲ್ಡಿಂಗ್‌ ಸೇರಿದಂತೆ ವಿವಿಧ ಪಾರಂಪರಿಕ ಕಟ್ಟಡಗಳಿಗೆ ಕಾಯಕಲ್ಪ ಬೇಕು. ಕಳೆಗಿಡಗಳು ಗೋಡೆಗಳಲ್ಲಿ ಬೆಳೆದು ಬಿರುಕು ಮೂಡಿಸುತ್ತಿವೆ. ಬಾಗಿಲು ಕಿಟಕಿಗಳ ಬಣ್ಣ ಮಾಸುತ್ತಿದ್ದು ಬಾಗಿಲಿನ ಕೆಳ ಭಾಗಗಳನ್ನು ಗೆದ್ದಲುಗಳು ತಿನ್ನುತ್ತಿವೆ. ನಿರ್ವಹಣೆಯತ್ತ ತ್ವರಿತವಾಗಿ ಕ್ರಮವಹಿಸಲಿ’ ಎಂದು ಅವರು ಒತ್ತಾಯಿಸಿದರು.

‘ಪ್ರಯೋಗಾಲಯದ ಮೇಜುಗಳು’
ಆಡಳಿತಾಧಿಕಾರಿಯಾಗಿದ್ದ ಇದೀಗ ಮಹಾರಾಜ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿ ನಿಯೋಜನೆಗೊಂಡಿರುವ ಪ್ರೊ.ತಿಮ್ಮಯ್ಯ ‘ಲ್ಯಾಬ್‌ಗಳಿಗೆ ಬಂದಿರುವ ಟೇಬಲ್‌ಗಳಿವು. ಹಳೆಯ ಪಾರಂಪರಿಕ ಮೇಜುಗಳು ಗಟ್ಟಿಮುಟ್ಟಾಗಿದ್ದು ಅಲ್ಲಿಯೇ ಇರಿಸಲಾಗಿದೆ. ಹೆಚ್ಚುವರಿ ಮೇಜುಗಳನ್ನು ಭೂಗೋಳವಿಜ್ಞಾನ ವಿಭಾಗಕ್ಕೂ ಕೊಡಲು ನಿರ್ಧರಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.