
ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ಮಂಗಳವಾರ ‘ಸವಿತಾ ವಿವಿಧೋದ್ದೇಶ ಸಹಕಾರ ಸಂಘ’ದ ಕಚೇರಿಯನ್ನು ಶಾಸಕ ಟಿ.ಎಸ್.ಶ್ರೀವತ್ಸ, ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಮುತ್ತುರಾಜ್ ಉದ್ಘಾಟಿಸಿದರು.
ಮೈಸೂರು: ‘ಸವಿತಾ ಸಮಾಜವು ತಬ್ಬಲಿ ಸಮುದಾಯವಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು’ ಎಂದು ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಮುತ್ತುರಾಜ್ ಹೇಳಿದರು.
ಟಿ.ಕೆ.ಬಡಾವಣೆಯಲ್ಲಿ ‘ರಾಜ್ಯ ಸವಿತಾ ನಾದಬ್ರಹ್ಮ ಸಂಗೀತ ಕಲಾ ಸಂಘ’ವು ಮಂಗಳವಾರ ಆಯೋಜಿಸಿದ್ದ ‘ಸವಿತಾ ವಿವಿಧೋದ್ದೇಶ ಸಹಕಾರ ಸಂಘ’ದ ಕಚೇರಿಯ ಉದ್ಘಾಟನೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘5 ಸಾವಿರ ವರ್ಷಗಳಲ್ಲಿ ಸಮಾಜವು ಮೊದಲು ರಾಜಕೀಯ ಅಧಿಕಾರ ಕಂಡಿದ್ದು, 12ನೇ ಶತಮಾನದಲ್ಲಿ. ಕಲ್ಯಾಣವನ್ನು ಆಳಿದ ಕಳಚೂರಿಗಳು ಬಸವಾದಿ ಶರಣರ ಸಾಮಾಜಿಕ ಕ್ರಾಂತಿಗೆ ಪ್ರೋತ್ಸಾಹ ನೀಡಿದರು. ಆದರೆ, ಬಿಜ್ಜಳನನ್ನು ಖಳನಾಯಕನನ್ನಾಗಿ ಮಾಡಲಾಗಿದೆ. ವಚನಕಾರರ ಸಮಾಜ ಸುಧಾರಣೆಗೆ ಆತ ಪ್ರೋತ್ಸಾಹ ನೀಡಿದ್ದನು’ ಎಂದು ತಿಳಿಸಿದರು.
‘ಬಸವಣ್ಣ ಅವರು ಪ್ರಧಾನಿಯಾಗಿದ್ದಾಗ ಅನುಭವ ಮಂಟಪದಲ್ಲಿ ಹಡಪದ ಅಪ್ಪಣ್ಣ ಅವರ ಕಾರ್ಯದರ್ಶಿ ಆಗಿದ್ದರು’ ಎಂದು ಸ್ಮರಿಸಿದ ಅವರು, ‘ಸಮುದಾಯವು ಅಭಿವೃದ್ಧಿ ಸಾಧಿಸಬೇಕೆಂದರೆ ಶಿಕ್ಷಣ, ಸಂಘಟನೆ, ಹೋರಾಟ ಮಾರ್ಗವನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದರು.
‘ಹಡಪದ ಅಪ್ಪಣ್ಣ, ಸವಿತಾ ಮಹರ್ಷಿ ಜಯಂತಿಯನ್ನು ಸರ್ಕಾರವು ಆಚರಿಸುತ್ತಿದೆ. ನಿಗಮದ ಮೂಲಕ ಸಮಾಜದ ಅಭಿವೃದ್ಧಿಗೆ ಸರ್ಕಾರವು ಅನುದಾನ ನೀಡುತ್ತಿದೆ. ಮಕ್ಕಳು ಎಸ್‌ಎಸ್‌ಎಲ್‌ಸಿ ಮುಗಿಸುತ್ತಿದ್ದಂತೆ ಕುಲಕಸುಬಿನ ಕಿಟ್ ಕೊಡುವ ಬದಲು, ಉನ್ನತ ಶಿಕ್ಷಣವನ್ನು ನೀಡಿದರೆ, ಸಮುದಾಯವು ಅಭಿವೃದ್ಧಿ ಆಗಲಿದೆ. ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲಿದೆ’ ಎಂದು ಅಭಿಪ್ರಾಯಪಟ್ಟರು.
₹ 10 ಕೋಟಿ ಭರವಸೆ: ‘ಟಿ.ಕೆ.ಬಡಾವಣೆಯಲ್ಲಿನ ಸಮುದಾಯದ ಈ ವಿಶಾಲವಾದ ಜಾಗದಲ್ಲಿ ಸಮುದಾಯ ಭವನ ಸೇರಿದಂತೆ ಶಿಕ್ಷಣ ಸಂಸ್ಥೆ ಆರಂಭಿಸುವುದಕ್ಕೆ ₹ 10 ಕೋಟಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು. ಅದಕ್ಕಾಗಿ ಕಾಮಗಾರಿ ಯೋಜನೆ ಸಿದ್ಧಪಡಿಸಿ, ಮುಖ್ಯಮಂತ್ರಿ ಅವರಿಗೆ ಸಲ್ಲಿಸೋಣ’ ಎಂದು ಮುತ್ತುರಾಜ್ ಹೇಳಿದರು.
ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಮುಖಂಡ ಡಾ.ಶುಶ್ರೂತ್ ಗೌಡ, ಸವಿತಾ ಸುರೇಶ್, ಆರ್.ಆನಂದ್, ಎಸ್.ನರೇಶ್ ಕುಮಾರ್, ಸವಿತಾ ಸಮಾಜದ ರಾಜ್ಯ ನಿರ್ದೇಶಕ ಎ.ಎಂ.ನಾಗರಾಜು, ರಘುನಾಥ್, ಸಂಘದ ಅಧ್ಯಕ್ಷ ಎನ್.ತ್ಯಾಗರಾಜು, ಉಪಾಧ್ಯಕ್ಷ ಪಿ.ಶ್ರೀನಿವಾಸ್, ಕೋಶಾಧ್ಯಕ್ಷ ಎಂ.ಡಿ.ರಾಜೇಶ, ಕಾರ್ಯದರ್ಶಿ ಎಂ.ರಮೇಶ್, ಪ್ರಧಾನ ಕಾರ್ಯದರ್ಶಿ ವಿ.ಧನರಾಜ್ ಪಾಲ್ಗೊಂಡಿದ್ದರು.
ಕಟ್ಟಡಕ್ಕೆ ಅನುದಾನ: ಶ್ರೀವತ್ಸ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ ‘ಯಾವುದೇ ಶುಭಕಾರ್ಯವೂ ಸಮಾಜದ ನಾದಸ್ವರ ಇಲ್ಲದೆ ಆಗದು. ಸಂಗೀತದ ಜೊತೆಗೆ ಕುಲಕುಸುಬಿನಿಂದ ಸಮಾಜ ಸೇವೆ ಮಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹ 20 ಲಕ್ಷ ನೀಡುವ ಜೊತೆಗೆ ಇನ್ನಷ್ಟು ಅನುದಾನಕ್ಕೆ ಸಂಸದರಿಗೆ ಮನವಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.