ADVERTISEMENT

ಊಟ–ಉಪಾಹಾರ ಸವಿದ ಗ್ರಾಹಕರು

ಹೋಟೆಲ್, ಮಾಲ್, ರೆಸ್ಟೋರೆಂಟ್ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 16:17 IST
Last Updated 8 ಜೂನ್ 2020, 16:17 IST
ಮೈಸೂರಿನ ಹೋಟೆಲ್ ಒಂದರಲ್ಲಿ ಬಜಿ ಸವಿದ ಗ್ರಾಹಕರು
ಮೈಸೂರಿನ ಹೋಟೆಲ್ ಒಂದರಲ್ಲಿ ಬಜಿ ಸವಿದ ಗ್ರಾಹಕರು   

ಮೈಸೂರು: ಎರಡೂವರೆ ತಿಂಗಳ ಬಳಿಕ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಹೋಟೆಲ್, ರೆಸ್ಟೋರೆಂಟ್, ಡಾಬಾ, ಬೃಹತ್ ಮಾಲ್‌ಗಳು ಬಾಗಿಲು ತೆರೆದು, ಗ್ರಾಹಕರಿಗೆ ಸೇವೆ ಒದಗಿಸಿದವು.

ಹಲವು ದಿನಗಳಿಂದ ಪಾರ್ಸೆಲ್‌ ನೀಡುತ್ತಿದ್ದ ಹೋಟೆಲ್‌ಗಳು, ಬೇಕರಿ ಹಾಗೂ ಸಿಹಿ ತಿನಿಸಿನ ಅಂಗಡಿಗಳು ಪೂರ್ಣ ಪ್ರಮಾಣದಲ್ಲಿ ವಹಿವಾಟು ಆರಂಭಿಸಿದವು. ಆರಂಭದ ದಿನ ಹಲವು ಹೋಟೆಲ್‌ಗಳಿಗೆ ಬೆರಳೆಣಿಕೆಯ ಜನರು ಭೇಟಿ ನೀಡಿ, ತಮಗಿಷ್ಟದ ತಿನಿಸು ಕೇಳಿ ಸವಿದರು.

ಕೆಲವು ಹೋಟೆಲ್‌ಗಳು ತರಹೇವಾರಿ ತಿನಿಸು ತಯಾರಿಸಿರಲಿಲ್ಲ. ನಿರ್ದಿಷ್ಟ ತಿನಿಸನ್ನಷ್ಟೇ ತಮ್ಮಲ್ಲಿಗೆ ಬಂದ ಗ್ರಾಹಕರಿಗೆ ನೀಡಿದವು. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಹೊತ್ತಲ್ಲೂ ಹಲವು ಹೋಟೆಲ್‌ ಕಾರ್ಯಾಚರಿಸಿದವು. ಗ್ರಾಹಕರು ಮೂರು ಹೊತ್ತು ಭೇಟಿ ನೀಡಿದ್ದು ಗೋಚರಿಸಿತು.

ADVERTISEMENT

ನಗರದ ಕೆಲವೊಂದು ಖ್ಯಾತನಾಮ ಹೋಟೆಲ್‌ಗಳಲ್ಲಿ ಎಂದಿನ ಜನಸಂದಣಿ ಗೋಚರಿಸಿತು. ಮನೆಗೆ ಪಾರ್ಸೆಲ್‌ ಕೊಂಡೊಯ್ದವರು ಹಲವರಿದ್ದರು. ಬಾಗಿಲು ತೆರೆದ ಎಲ್ಲ ಹೋಟೆಲ್‌ಗಳು ಸರ್ಕಾರ ಸೂಚಿಸಿರುವ ಕೋವಿಡ್–19 ಮಾರ್ಗಸೂಚಿಗಳನ್ನು ಪಾಲಿಸಿದವು.

ಕೆಲಸವಿಲ್ಲದೆ ಕಂಗೆಟ್ಟಿದ್ದ ಹೋಟೆಲ್ ಕಾರ್ಮಿಕರು ಖುಷಿಯಿಂದ ತಮ್ಮ ವೃತ್ತಿಗೆ ಮರಳಿದರೆ, ವಹಿವಾಟು ನಡೆಯದೇ ಕಂಗಾಲಾಗಿದ್ದ ಹೋಟೆಲ್ ಮಾಲೀಕರು ಮುಂದಿನ ದಿನಗಳಲ್ಲಿ ಎಂದಿನ ವಹಿವಾಟು ನಡೆಯಬಹುದು ಎಂಬ ನಿರೀಕ್ಷೆಯಿಂದ ತಮ್ಮ ತಮ್ಮ ಹೋಟೆಲ್‌ಗಳ ಬಾಗಿಲು ತೆರೆದಿದ್ದ ದೃಶ್ಯಾವಳಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗೋಚರಿಸಿತು.

ಹೋಟೆಲ್ ಬಾಗಿಲು ತೆರೆಯುವುದಕ್ಕಾಗಿಯೇ ಭಾನುವಾರವೇ ಎಲ್ಲರೂ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಹಲವೆಡೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಒಳಗಡೆ ಕುಳಿತುಕೊಳ್ಳಲು ಸ್ವರೂಪ ಬದಲಿಸಿದ್ದು ಬಹುತೇಕ ಕಡೆ ಕಂಡು ಬಂದಿತು.

ಮೈಸೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ನಗರದಲ್ಲಿನ ವಿವಿಧ ಹೋಟೆಲ್‌ಗಳಿಗೆ ಭೇಟಿ ನೀಡಿ, ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯಾ ಎಂಬುದನ್ನು ಪರಿಶೀಲಿಸಿದರು. ಇದರ ಜೊತೆಗೆ ಮಾರ್ಗಸೂಚಿಯ ಆದೇಶವನ್ನು ನೀಡಿ ಜಾಗೃತಿ ಮೂಡಿಸಿದರು.

ಆಹಾರ ಸಾಮಗ್ರಿ ಮಾರಾಟಕ್ಕೆ ಮೀಸಲಾಗಿದ್ದ ಮಾಲ್‌ಗಳಲ್ಲಿ ಸೋಮವಾರದಿಂದ ಇನ್ನಿತರ ಚಟುವಟಿಕೆ ಆರಂಭಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.