
ಮೈಸೂರು: ಕಲಬುರಗಿಯ ಸಾಹಿತಿ ನೀಲಾಂಬಿಕಾ ಪೊಲೀಸ್ ಪಾಟೀಲ ಹಾಗೂ ಇಲ್ಲಿನ ಚಿಂತಕ ಶಂಕರ ದೇವನೂರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಗರ ಘಟಕದಿಂದ ಶನಿವಾರ ಶಕುಂತಲ ಜಯದೇವ ಶರಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಲ್ಲಿನ ಜೆಎಸ್ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರಿಗೂ ಸ್ಮರಣಿಕೆ, ತಲಾ ₹25ಸಾವಿರ ಒಳಗೊಂಡ ಪುರಸ್ಕಾರವನ್ನು ಗಣ್ಯರು ನೀಡಿದರು.
ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ ನಿವೃತ್ತ ಕುಲಪತಿ ಪ್ರೊ.ಪದ್ಮಾ ಶೇಖರ್, ‘ಮನುಷ್ಯನು ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳುವುದರಿಂದ ಜೀವನಕ್ಕೆ ಅರ್ಥ ದೊರಕುತ್ತದೆ. ಬದಲಾಗುವ ಕಾಲವು ನಮ್ಮನ್ನು ಉತ್ತಮ ಮನಸ್ಥಿತಿಯ ಮನುಷ್ಯರನ್ನಾಗಿ ರೂಪಿಸಬೇಕು. ಸಮಾಜಪರವಾಗಿ ಬದುಕಲು ಪ್ರೇರೇಪಿಸಬೇಕು. ಈ ಇಬ್ಬರೂ ಸಾಧಕರು ಅಂತಹ ಜೀವನ ನಡೆಸುತ್ತಾ ನಮಗೆ ಆದರ್ಶಪ್ರಾಯರಾಗಿದ್ದಾರೆ’ ಎಂದು ಶ್ಲಾಘಿಸಿದರು.
ರಾಜರಾಜೇಶ್ವರಿ ಅಕ್ಕನ ಬಳಗದಿಂದ ವಚನ ಗಾಯನ ನಡೆಯಿತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಶಿ.ಗಾಂಜಿ, ನಗರ ಘಟಕ ಅಧ್ಯಕ್ಷ ಜಯಪ್ಪ ಹೊನ್ನಾಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ದತ್ತಿ ದಾಸೋಹಿ ಶಕುಂತಲಾ ಜಯದೇವ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.