ಹುಣಸೂರು: ನ್ಯಾಯವನ್ನು ಕಾಪಾಡುವ ಹಾಗೂ ಅದರ ಆಧಾರದಲ್ಲಿ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಪ್ರವಚನ ನೀಡಿದ ಲಾಲ್ ಹುಸೇನ್ ಕಂದಗಲ್ ಹೇಳಿದರು.
ನಗರದಲ್ಲಿ ಜಮಾಆತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ಸೀರತ್ ಸಮಾವೇಶದಲ್ಲಿ ಮಾತನಾಡಿ, ನ್ಯಾಯ ಒಂದು ಅತ್ಯಮೂಲ್ಯ ಹಾಗೂ ಮೂಲಭೂತ ಹಕ್ಕು. ಇದರಿಂದಲೇ ಸಮಾಜದಲ್ಲಿ ಶಾಂತಿ ನೆಲೆಸುವುದು, ಇಲ್ಲಿ ಬಸವಣ್ಣ ಸಾರಿದ ಸಂದೇಶವನ್ನು ಪ್ರವಾದಿ 6 ನೇ ಶತಮಾನದಲ್ಲಿ ಏಕದೇವತ್ವ ಹಾಗೂ ಮರಣೋತ್ತರ ಜೀವನದ ಸತ್ಯವನ್ನು ಮರು ಪರಿಚಯಿಸಿದರು.
ಹೆಣ್ಣು, ಗಂಡು ಎರಡೂ ಒಂದೇ ಎಂದು ಪರಿಗಣಿಸುವುದರಿಂದ ಭ್ರೂಣಹತ್ಯೆ ನಿಯಂತ್ರಿಸಲು ಸಾಧ್ಯ. ಇತ್ತೀಚಿನ ದಿನದಲ್ಲಿ ಹೆಣ್ಣು ಮಗುವಿನ ಹತ್ಯೆ ಹೆಚ್ಚಾಗಿ ಗಂಡು ಹೆಣ್ಣುಗಳ ಪ್ರಮಾಣ ಗಣನೀಯವಾಗಿ ಏರುಪೇರಾಗುತ್ತಿದೆ. ಪ್ರತಿಯೊಬ್ಬರು ಎಚ್ಚರವಹಿಸಬೇಕು ಎಂದು ಕರೆ ನೀಡಿದರು.
ಸಮಾಜವನ್ನು ಮೌಢ್ಯ ಮುಕ್ತವನ್ನಾಗಿಸುವ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕಿದೆ. ಶಿಕ್ಷಣ ಇಲ್ಲದಿದ್ದಾಗ ಮೌಡ್ಯ ಆವರಿಸಲಿದೆ. ಪ್ರತಿಯೊಬ್ಬರು ಸುಶಿಕ್ಷಿತರಾದಲ್ಲಿ ಇವುಗಳಿಂದ ಹೊರ ಬಂದು ವೈಜ್ಞಾನಿಕವಾಗಿ ಯುವ ಸಮುದಾಯ ದುಷ್ಚಟಕ್ಕೆ ಬಲಿಯಾಗುತ್ತಿದ್ದು, ಪೋಷಕರು ಎಚ್ಚರವಹಿಸಬೇಕಾಗಿದೆ ಎಂದರು.
ಉಪ ವಿಭಾಗಾಧಿಕಾರಿ ವಿಜಯಕುಮಾರ್ ಮಾತನಾಡಿ, ಎಲ್ಲಾ ಧರ್ಮಗಳು ಒಳಿತನ್ನು ಹೇಳುತ್ತವೆ. ನಾವು ಅನುಸರಿಸುವ ಮಾರ್ಗ ಸರಿಯಾಗಿರಬೇಕು ಎಂದರು. ಭಾರತದಲ್ಲಿ ಹಲವು ಜಾತಿ,ಧರ್ಮಗಳಿಂದ ಕೂಡಿದ್ದು ವಿವಿಧತೆಯಲ್ಲಿ ಏಕತೆ ಕಾದುಕೊಳ್ಳಲು ನಾವು ಹೊಂದಿರುವ ಸಂವಿಧಾನ ಕಾರಣ ಎಂದರು. ಶಾಂತಿ ಪ್ರಕಾಶನದ ಕೆಲವು ಧಾರ್ಮಿಕ ಗ್ರಂಥ ಲೋಕಾರ್ಪಣೆಗೊಂಡಿತು.
ರಮ್ಯನಹಳ್ಳಿ ಭಾವೈಕ್ಯ ಕೇಂದ್ರ ಶ್ರೀಬಸವ ಧ್ಯಾನ ಮಂದಿರದ ಬಸವಲಿಂಗಮೂರ್ತಿ ಸ್ವಾಮೀಜಿ,ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನಾಗಶ್ರೀ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕ್ ಪಾಶಾ, ಸದಸ್ಯರಾದ ಕೃಷ್ಣರಾಜಗುಪ್ತ, ಜಮಾಆತೆ ಇಸ್ಲಾಂ ಹಿಂದ್ ವಲಯ ಸಂಚಾಲಕ ಯು.ಅಬುಸಲಾಮ್, ಝೈನುಲ್ ಅಬಿದಿನ್, ಮುಸ್ತಾಫ್, ಅಬ್ದುಲ್ ಖಾದಿರ್, ಮಹಮ್ಮದ್ ರಫೀಕ್, ಮಹಮ್ಮದ್ ಅಜೀಜುಲ್ಲಾ, ಧರ್ಮಗುರುಗಳಾದ ಅಜುಂ ಹುಸೇನ್, ಅಬ್ದುಲ್ ಮುದಬ್ಬಿರ್ ಖಾಸ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.