ಹುಣಸೂರು: ‘ರಾಷ್ಟ್ರೀಯ ಏಕತೆ ಮತ್ತು ರಾಷ್ಟ್ರ ಪ್ರೇಮ ಉಳಿಸಿ, ಬೆಳೆಸುವ ದಿಕ್ಕಿನಲ್ಲಿ ನಗರದಲ್ಲಿ ಗುರುವಾರ (ಜ.22) ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸರ್ವ ಧರ್ಮಿಯರು ಭಾಗವಹಿಸಬೇಕು’ ಎಂದು ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಗೊಂಡ ಎರಡನೇ ವಾರ್ಷಿಕೋತ್ಸವ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಅಂಗವಾಗಿ ಅಂದು ನಗರದ ಮಂಜುನಾಥ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ತೆರಳಿ ಮುನೇಶ್ವರಕಾವಲ್ ಮೈದಾನದಲ್ಲಿ ಅಂತ್ಯಗೊಳ್ಳಲಿದೆ. ನಂತರದ ಮುನೇಶ್ವರ ಕಾವಲ್ ಮೈದಾನದಲ್ಲಿ ಹಿಂದೂ ಧರ್ಮಿಯರನ್ನು ಉದ್ದೇಶಿಸಿ ವಿದ್ಯಾಭಾರತಿ ಪ್ರಾಂತ ಸಂಯೋಜಕ ಉಮೇಶ್ ಮಾತನಾಡಲಿದ್ದಾರೆ’ ಎಂದರು.
ವಿಶ್ವ ಹಿಂದೂ ಪರಿಷತ್ ಮುಖಂಡ ವಿ.ಎನ್.ದಾಸ್ ಮಾತನಾಡಿ, ‘ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ. ಕುಟುಂಬ ಪ್ರಭೋಧನ್, ಸ್ವಆಧಾರಿತ ಜೀವನ ಮತ್ತು ನಾಗರಿಕ ಶಿಷ್ಟಾಚಾರ ವಿಷಯ ಕುರಿತು ಸಂವಾದ ನಡೆಯಲಿದೆ. ಕಾರ್ಯಕ್ರಮದಲ್ಲಿ ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಮಾದಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಭಾಗವಹಿಸಲಿದ್ದಾರೆ’ ಎಂದರು.
ಆರ್.ಎಸ್.ಎಸ್ ಮುಖಂಡ ರಘುವೀರ್ ಮಾತನಾಡಿ, ‘ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಗಿರಿಜನರನ್ನು ಘರ್ ವಾಪಸಿ ಕಾರ್ಯಕ್ರಮದಲ್ಲಿ ಗಿರಿಜನ ಸಂಪ್ರದಾಯಕ್ಕೆ ಕರೆ ತರಲಾಗಿದೆ. ಆ ಸಮುದಾಯಕ್ಕೆ ಗಿರಿಜನ ಸಂಸ್ಕೃತಿ, ಸಂಪ್ರದಾಯ ಉಳಿಸುವ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಅದೇ ರೀತಿ ಪಕ್ಷಿರಾಜಪುರ ಅಲೆಮಾರಿ ಸಮುದಾಯದಲ್ಲಿ ಬಹುತೇಕ ಕುಟುಂಬಗಳು ಮತಾಂತರಗೊಂಡಿದ್ದರು, ಈಗ ಹಿಂದೂ ಧರ್ಮಕ್ಕೆ ಹಿಂದಿರುಗಿದ್ದಾರೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಸಂಚಾಲಕ ಮಹದೇವ್ ಬಾದಲ್, ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.