ಮೈಸೂರು: ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಮೇ 1ರಿಂದ ಕಾಯಂ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನೀಡಿರುವ ಭರವಸೆಯು, ನಗರವೂ ಸೇರಿದಂತೆ ಜಿಲ್ಲೆಯ ‘ಸ್ವಚ್ಛತಾ ಸೇನಾನಿ’ಗಳಲ್ಲೂ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.
ಮುಖ್ಯಮಂತ್ರಿ ಹೇಳಿಕೆಯು ಬೆಂಗಳೂರಿಗಷ್ಟೆ ಸೀಮಿತವೇ ಅಥವಾ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದೇ ಎಂಬ ಪ್ರಶ್ನೆಯೂ ಮೂಡಿದೆ. ಏಕೆಂದರೆ, ಪೌರಬಂಧುಗಳನ್ನು ಕಾಯಂಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕೃತವಾಗಿ ಯಾವುದೇ ಆದೇಶ ಬಾರದಿರುವುದು ಹಾಗೂ ಮಾರ್ಗಸೂಚಿಯನ್ನೂ ನೀಡದಿರುವುದು ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಮೈಸೂರು ಮಹಾನಗರಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ನೂರಾರು ಮಂದಿ ಪೌರಕಾರ್ಮಿಕರು ಇಂದಿಗೂ ಕಾಯಂ ಆಗಿಲ್ಲ. ನಗರ–ಪಟ್ಟಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆ ಹಾಗೂ ನಿರ್ವಹಣೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ಪೌರಕಾರ್ಮಿಕರು ಕೆಲಸ ಕಾಯಂ ಆದೀತೆಂಬ ನಿರೀಕ್ಷೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ತವರಿನವರೇ ಆಗಿರುವ ಮುಖ್ಯಮಂತ್ರಿಯ ಭರವಸೆಯು ಯಾವಾಗ ಈಡೇರಲಿದೆ ಎಂದು ಕಾಯುತ್ತಿದ್ದಾರೆ. ಮುಖ್ಯಮಂತ್ರಿ ಹೇಳಿಕೆ ಪ್ರಕಾರ, ‘ನೇರಪಾವತಿಯ’ ಪೌರಕಾರ್ಮಿಕರನ್ನು ಕಾಯಂ ಮಾಡುವ ಪ್ರಕ್ರಿಯೆಯು ಹಂತ ಹಂತವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕೃತ ಆದೇಶ ಬಂದಿಲ್ಲ:
‘ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 1,954 ಮಂದಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈಚೆಗೆ ಎರಡು ಹಂತದಲ್ಲಿ ಕ್ರಮವಾಗಿ 254 ಹಾಗೂ 170 ಮಂದಿಯನ್ನು ಕಾಯಂ ಮಾಡಲಾಗಿದೆ. ಉಳಿದಂತೆ, 1,300 ಮಂದಿ ಕಾಯಂ ಆಗಬೇಕಾಗಿದೆ. ಇವರನ್ನು ಕಾಯಂ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಕಾಯಂಗೊಳಿಸುವುದಾದರೆ ಹಾಲಿ ಕೆಲಸ ಮಾಡುತ್ತಿರುವವರನ್ನೇ ಪರಿಗಣಿಸಲಾಗುತ್ತದೆ. ಹೊಸಬರಿಗೆ ಅವಕಾಶ ಇರುವುದಿಲ್ಲ’ ಎಂದು ಪಾಲಿಕೆಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ನಗರಪಾಲಿಕೆ ಕಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ ಎನ್.ಮಾರ, ‘ಮೈಸೂರು ನಗರಪಾಲಿಕೆಯಲ್ಲಿ ಸೇವಾ ಅವಧಿಯಲ್ಲಿ ಮರಣ ಹೊಂದಿದ ಕುಟುಂಬದ ಅವಲಂಬಿತರಿಗೆ ಮಾನವೀಯತೆಯ ಆಧಾರದ ಮೇಲೆ ಉದ್ಯೋಗ ನೀಡಬೇಕು. ಒಳಚರಂಡಿ ಸಹಾಯಕ ಕಾರ್ಮಿಕರು, ಕಸ ವಿಲೇವಾರಿ, ಕಸ ಸಂಗ್ರಹಣೆ ಮಾಡುವ ಆಟೊಟಿಪ್ಪರ್ ಚಾಲಕರನ್ನು ನೇರವಾಗಿ ನೇಮಕ ಮಾಡಿಕೊಳ್ಳಬೇಕು. ಪಾಲಿಕೆಯಲ್ಲಿ ಖಾಲಿ ಇರುವ 156 ಪೌರಕಾರ್ಮಿಕ ಹುದ್ದೆಗಳನ್ನು ಕೂಡಲೇ ತುಂಬಬೇಕು. ಎಲ್ಲರನ್ನೂ ಕಾಯಂಗೊಳಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.
‘ಈಚೆಗೆ ನಗರದಲ್ಲಿ ಕಾಯಂಗೊಳಿಸಲಾದ ಪೌರಕಾರ್ಮಿಕರಿಗೆ ಅಧಿಕೃತ ಆದೇಶ ನೀಡುವ ಪ್ರಕ್ರಿಯೆಯೂ ಇನ್ನಷ್ಟೆ ನಡೆಯಬೇಕಾಗಿದೆ. ಈ ಬಗ್ಗೆ, ಹೊಸದಾಗಿ ಬಂದಿರುವ ಪಾಲಿಕೆ ಆಯುಕ್ತರ ಗಮನವನ್ನು ಸೆಳೆಯಲಾಗಿದೆ’ ಎನ್ನುತ್ತಾರೆ ಅವರು.
ಮುಖ್ಯಮಂತ್ರಿ ಹೇಳಿಕೆಗೆಯು ಆಶಾಭಾವ ಮೂಡಿಸಿದೆ. ಆದರೆ ಮೈಸೂರಿನಲ್ಲಿ ಪೌರಕಾರ್ಮಿಕರನ್ನು ಯಾವಾಗ ಕಾಯಂ ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲ. ನಾವೂ ಕಾಯುತ್ತಿದ್ದೇವೆಮಾರ, ಅಧ್ಯಕ್ಷ, ಜಿಲ್ಲಾ ನಗರಪಾಲಿಕೆ ಕಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘ
ಬಿಬಿಎಂಪಿಯ ಪೌರಕಾರ್ಮಿಕರನ್ನು ಕಾಯಂಗೊಳಿಸಿ ಮೇ 1ರಂದು ಆದೇಶಪತ್ರ ನೀಡಲಾಗುತ್ತದೆ. ಉಳಿದ ನಗರಪಾಲಿಕೆಗಳ 9 ಸಾವಿರ ಮಂದಿಯನ್ನು ಹಂತಹಂತವಾಗಿ ಕಾಯಂ ಮಾಡಲಾಗುವುದು ಎಂದು ಸಿ.ಎಂ ಹೇಳಿದ್ದಾರೆ.ನಾರಾಯಣ, ಅಧ್ಯಕ್ಷ, ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆಗಳ ಪೌರಸಭೆಗಳ ಪೌರಕಾರ್ಮಿಕರ ಮಹಾಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.