ADVERTISEMENT

ಹುಣಸೂರು: ಚುರುಕುಗೊಂಡ ತಂಬಾಕು ಕೃಷಿ

ಎಚ್.ಎಸ್.ಸಚ್ಚಿತ್
Published 19 ಮಾರ್ಚ್ 2025, 6:35 IST
Last Updated 19 ಮಾರ್ಚ್ 2025, 6:35 IST
ಹುಣಸೂರು ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಮಡಿಯಲ್ಲಿ ಬೆಳೆಸಿರುವ ತಂಬಾಕು ಸಸಿಯ ನಿರ್ವಹಣೆಯಲ್ಲಿ ತೊಡಗಿರುವ ರೈತ
ಹುಣಸೂರು ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಮಡಿಯಲ್ಲಿ ಬೆಳೆಸಿರುವ ತಂಬಾಕು ಸಸಿಯ ನಿರ್ವಹಣೆಯಲ್ಲಿ ತೊಡಗಿರುವ ರೈತ   

ಹುಣಸೂರು: ವರ್ಷದ ಮೊದಲ ಮಳೆ ಅನ್ನದಾತರಲ್ಲಿ ಬೇಸಾಯದ ಹುರುಪು ಮೂಡಿಸಿದ್ದು, ಭೂಮಿ ಹದಗೊಳಿಸಿ ವಾಣಿಜ್ಯ ಬೆಳೆ ತಂಬಾಕು ಸಸಿ ನಾಟಿಗೆ ಭರದ ಸಿದ್ಧತೆ ನಡೆಸಿದ್ದಾರೆ.

ಸೋಮವಾರ 1.8 ಸೆಂ.ಮೀ ಮಳೆಯಾಗಿದ್ದು, ತಂಬಾಕು ಬೆಳೆಗಾರರು ತಂಬಾಕು ಸಸಿ ನರ್ಸರಿ ಮಡಿಯಲ್ಲಿ ಆರೋಗ್ಯ ಸಸಿ ಬೆಳೆಸುವಲ್ಲಿ ತೊಡಗಿದ್ದಾರೆ. ಈ ಸಾಲಿನಲ್ಲಿ 1,200 ಕೆ.ಜಿ. ಬಿತ್ತನೆ ಬೀಜ ಹುಣಸೂರು ತಂಬಾಕು ಸಂಶೋಧನ ಕೇಂದ್ರದಿಂದ ರೈತರು ಖರೀದಿಸಿದ್ದು, ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಶೇ 25ರಷ್ಟು ಹೆಚ್ಚುವರಿ ಬಿತ್ತನ ಬೀಜ ಮಾರಾಟವಾಗಿದೆ ಎಂದು ಹುಣಸೂರು ತಂಬಾಕು ಸಂಶೋಧನ ಕೇಂದ್ರದ ಮುಖ್ಯ ವಿಜ್ಞಾನಿ ರಾಮಕೃಷ್ಣ ತಿಳಿಸಿದರು.

ತಳಿ: ತಂಬಾಕು ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿರುವ ಹೈಬ್ರೀಡ್ ತಳಿಗಳಾದ ಸಿ.ಎಚ್. 3, ಎಫ್.ಸಿ.ಎಚ್. 222, ಎಫ್.ಸಿ.ಎಚ್. 248 ತಳಿಯಲ್ಲಿ ಹೊಸ ತಳಿ 1345ರ ಬಿತ್ತನೆ ಬೀಜಯನ್ನು ಈಗಾಗಲೇ 5 ಸಾವಿರ ರೈತರು ಖರೀದಿಸಿದ್ದಾರೆ. ಇದರ ನಂತರದಲ್ಲಿ ಎಫ್.ಸಿ.ಎಚ್. 248 ತಳಿ 2 ಸಾವಿರ ರೈತರು ಬೆಳೆಯಲು ಮುಂದಾಗಿದ್ದಾರೆ. ನಂತರದಲ್ಲಿ ಎಫ್.ಸಿ.ಎಚ್. 222, ಸಿ.ಎಚ್. 3 ತಳಿ ಬೆಳೆಯಲು ಆಸಕ್ತಿ ತೋರಿದ್ದಾರೆ.

ADVERTISEMENT

ಹೊಸ ತಳಿ: ಹೊಸದಾಗಿ ಅಭಿವೃದ್ಧಿಪಡಿಸಿರುವ 1345 ತಳಿ ತಂಬಾಕಿನಲ್ಲಿ ಪ್ರತಿ ಗಿಡದಲ್ಲಿ ಕನಿಷ್ಠ 30 ಎಲೆ ಬರಲಿದ್ದು ಪ್ರತಿಯೊಂದು ಎಲೆಯೂ ಗೋಲ್ಡ್ ಬಣ್ಣ ಹೊಂದಿರಲಿದೆ. ಸಾಮಾನ್ಯ ಗುಣಮಟ್ಟದಿಂದ ಕೂಡಿರುವುದರಿಂದ ಮಾರುಕಟ್ಟೆಯಲ್ಲಿ ರೈತನಿಗೆ ನಷ್ಟ ಇರುವುದಿಲ್ಲ ಎನ್ನುವರು ಕೇಂದ್ರದ ವಿಜ್ಞಾನಿ.

ರೋಗಬಾಧೆ: ರೈತ ಬೆಳೆಸಿರುವ ನರ್ಸರಿಯಲ್ಲಿ ರೋಗ ಕಾಣಿಸಿಕೊಂಡಿದ್ದು, ನಿರ್ವಹಣೆಗೆ ರೈಡೋಮಿಲ್ ಗೋಲ್ಡ್ ಅಥವಾ ಮಟ್ಕೋ 30 ಗ್ರಾಂ ಪ್ರತಿ 15 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಸಿ ಮಡಿಗೆ ಸಿಂಪಡಿಸಬೇಕು.

ಟ್ರೇ ಪದ್ಧತಿಯಲ್ಲಿ ಸಸಿ ಬೆಳೆಸುವ ಮುನ್ನ ಮಡಿಯಲ್ಲಿ ಆರೋಗ್ಯ ಸಸಿ ಆಯ್ಕೆ ಅತಿಮುಖ್ಯ. ಬಿಸಿಲಿನ ಝಳದಲ್ಲಿ ಸಸಿ ಟ್ರೇಗೆ ವರ್ಗಾಯಿಸುವುದರಿಂದ ಗಂಟು ರೋಗ ಕಾಣಿಸಿಕೊಳ್ಳಲಿದೆ. ನಿಯಂತ್ರಿಸಲು ಕೋಕೊ ಪಿಟ್ ಸಾವಯವ ಗೊಬ್ಬರಕ್ಕೆ ವ್ಯಾಲಂ ಪ್ರೈಂ ಔಷಧಿ 5 ಎಂ.ಎಲ್. 10 ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದು ಅಗತ್ಯವಾಗಿದೆ. ಕಾಂಡ ಕೊರೆಯುವ ಮತ್ತು ಹಸಿರು ಹುಳ ರೋಗ ಕಾಣಿಸಿದಲ್ಲಿ ಕೊರಾಜಿನ್ ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ 5 ಗ್ರಾಂ ಅನ್ನು ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಟ್ರೇ ಪದ್ಧತಿಯಲ್ಲಿ ಬೆಳೆದಿರುವ ಆರೋಗ್ಯವಂತ ತಂಬಾಕು ಸಸಿ ಖಾತ್ರಿ ಪಡಿಸಿಕೊಳ್ಳುವ ವಿಧಾನ
ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ಗ್ರಾಮದ ಪ್ರಗತಿಪರ ರೈತ ರಾಜು ಟ್ರೇ ಪದ್ಧತಿಯಲ್ಲಿ ಬೆಳೆದ ಸಸಿಗೆ ರೋಗ ಕಾಣಿಸಿಕೊಂಡಿದ್ದ ತೋರಿಸಿದರು
ಕೃಷಿ ವಿಜ್ಞಾನಿಗಳ ಸಲಹೆ ಮುಖ್ಯ 25 ವರ್ಷಗಳಿಂದ ತಂಬಾಕು ಬೇಸಾಯ ಮಾಡುತ್ತಿದ್ದು ಟ್ರೇ ಪದ್ಧತಿ ಸಸಿ ನರ್ಸರಿಯಲ್ಲಿ ಪ್ರಥಮ ಬಾರಿಗೆ ಗಂಟು ರೋಗ ಕಾಣಿಸಿಕೊಂಡಿದೆ. ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ವಿಜ್ಞಾನಿಗಳ ಸಲಹೆ ಪಡೆದಿದ್ದೇನೆ. ರೈತರು ರಸಗೊಬ್ಬರ ಅಂಗಡಿಯವರನ್ನು ಕೇಳಿ ಔಷಧಿ ಬಳಸದೆ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಔಷಧಿ ಬಳಸಬೇಡಿ.
ರಾಜು ಪ್ರಗತಿಪರ ರೈತ ಕಗ್ಗುಂಡಿ ಗ್ರಾಮ
ತಂಬಾಕು ನಾಟಿ ಹಂತದಲ್ಲಿ ಸಿಸಿ ಕಾಂಡ ಪೆನ್ಸಿಲ್ ಗಾತ್ರಕ್ಕೆ ಬಂದಿರುವ ಹಾಗೂ ಅತಿ ದೊಡ್ಡ ಸಸಿಗಳ ಎಲೆ ಟ್ರಿಂ ಮಾಡಿ ನಾಟಿ ಮಾಡುವುದರಿಂದ ಕರಿಕಡ್ಡಿ ಹಾಗೂ ಕಪ್ಪು ಚುಕ್ಕಿ ರೋಗಬಾಧೆ ಕಾಡುವುದಿಲ್ಲ
ರಾಮಕೃಷ್ಣ ಹಿರಿಯ ವಿಜ್ಞಾನಿ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರ ಹುಣಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.