
ಹುಣಸೂರು: ನಾಗರಹೊಳೆ ಅರಣ್ಯದಂಚಿನ ಪ್ರದೇಶದ ಕೃಷಿ ಪಂಪ್ ಸೆಟ್‌ಗಳಿಗೆ ರಾತ್ರಿ ವಿದ್ಯುತ್ ನೀಡುತ್ತಿದ್ದು, ಈ ಪದ್ಧತಿಯಿಂದ ರೈತರು ವನ್ಯಪ್ರಾಣಿಗಳ ಆತಂಕದಲ್ಲಿ ಬೇಸಾಯ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘದ ಸದಸ್ಯರು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಮಹೇಶ್ ಕುಮಾರ್ ಅವರಿಗೆ ಮನವಿ ಪತ್ರ ನೀಡಿದರು.
ನಗರದ ಉಪವಿಭಾಗದ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ರೈತ ಸಂಘದವರು ಭೇಟಿ ನೀಡಿ ಹುಣಸೂರು ಉಪವಿಭಾಗದ ಹುಣಸೂರು, ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಲ್ಲಿ ಅರಣ್ಯದಂಚಿನ ಪ್ರದೇಶದ ಹೊಲ ಗದ್ದೆ ಪಂಪ್‌ಸೆಟ್‌ಗೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಿದ್ದು, ರಾತ್ರಿ ಬೆಳೆಗೆ ನೀರು ಹಾಯಿಸಲು ವನ್ಯಪ್ರಾಣಿಗಳ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ಈ ಪರಿಸ್ಥಿತಿಯನ್ನು ಸೆಸ್ಕ್ ಅರ್ಥ ಮಾಡಿಕೊಂಡು ರಾತ್ರಿ ಪಾಳಿ ವಿದ್ಯುತ್ ರದ್ದುಗೊಳಿಸಿ ಹಗಲು ನೀಡುವ ಮಾರ್ಪಾಡು ಮಾಡಬೇಕು. ಈ ಬದಲಾವಣೆಯಿಂದ ವನ್ಯಪ್ರಾಣಿ ಆತಂಕ ಮುಕ್ತಗೊಂಡು ರೈತ ಸ್ನೇಹಿ ಸೆಸ್ಕ್ ಆಗಬೇಕಾಗಿ ಮನವಿ ಮಾಡಿದರು.
ರಾಜ್ಯದಲ್ಲಿ ವಿದ್ಯುತ್ ಉತ್ಪತ್ತಿ ಸಮಾಧಾನಕರವಾಗಿದ್ದು, ಈಗಲೂ ವಿದ್ಯುತ್ ಅಡಚಣೆ ಯಾವ ಕಾರಣದಿಂದ ಆಗುತ್ತಿದೆ ಎಂಬ ಯಕ್ಷ ಪ್ರಶ್ನೆ ಕಾಡಿದೆ. ರೈತರ ಕೃಷಿ ಪಂಪ್ ಸೆಟ್‌ಗೆ ಸಂಪರ್ಕ ನೀಡಿದ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಕಾಲಮಿತಿ ಅಳವಡಿಸಬೇಕು. ವೋಲ್ಟೇಜ್ ಇಲ್ಲದ ಸ್ಥಳದಲ್ಲಿ ಇಲಾಖೆ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸಿ ರೈತರ ಪಂಪ್‌ಸೆಟ್‌ಗೆ ಗುಣಮಟ್ಟದ ವಿದ್ಯುತ್ ನೀಡಬೇಕು. ಹೊಸ ವಿದ್ಯುತ್ ಸಂಪರ್ಕ ಪಡೆಯುವ ರೈತರಿಗೆ ಇಲಾಖೆ ವಿಧಿಸಿರುವ ಹೆಚ್ಚುವರಿ ಶುಲ್ಕ ಹೊರೆಯಾಗಿದ್ದು, ರೈತ ವಿರೋಧಿ ನೀತಿಯನ್ನು ಕೈಬಿಟ್ಟು ರೈತ ಸ್ನೇಹಿ ಸೆಸ್ಕ್ ಆಗಬೇಕು ಎಂದು ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಹೇಳಿದರು.
ಮನವಿ ಪತ್ರ ಸ್ವೀಕರಿಸಿದ ಸೆಸ್ಕ್ ಅಧಿಕಾರಿ ಮಹೇಶ್ ಕುಮಾರ್, ಅರಣ್ಯದಂಚಿನ ಪ್ರದೇಶಗಳಿಗೆ ವಿದ್ಯುತ್ ಹಗಲು ವೇಳೆ ನೀಡುವ ಬಗ್ಗೆ ಈಗಾಗಲೇ ಇಲಾಖೆ ಗಮನಕ್ಕೆ ತರಲಾಗಿದೆ. ವಿದ್ಯುತ್ ಸಂಪರ್ಕ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಶುಲ್ಕ ಪರಿಷ್ಕರಣೆ ಆಗಬೇಕಾಗಿದೆ ಎಂದರು. ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಇಲಾಖೆ ಸದಾ ರೈತರೊಂದಿಗೆ ಇರಲಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ,ಧನಂಜಯ, ಅಲಿಜಾನ್, ಈಶ್ವರ್, ರಾಮಕೃಷ್ಣೇಗೌಡ, ವಿಷಕಂಠಪ್ಪ, ಸೋಮಶೇಖರ್, ಮಹದೇವ್, ಈಶ್ವರೇಗೌಡ ಸೇರಿದಂತೆ ರೈತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.