ADVERTISEMENT

ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ: ನಟರಾಜ ಸ್ವಾಮೀಜಿ

ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ನಟರಾಜ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 4:51 IST
Last Updated 27 ಡಿಸೆಂಬರ್ 2025, 4:51 IST
ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದ ಗುರುಲಿಂಗ ಜಂಗಮ ಮಠದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ನಟರಾಜಸ್ವಾಮೀಜಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಸ್ಯರು ಭಾಗವಹಿಸಿದ್ದರು.
ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದ ಗುರುಲಿಂಗ ಜಂಗಮ ಮಠದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ನಟರಾಜಸ್ವಾಮೀಜಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಸ್ಯರು ಭಾಗವಹಿಸಿದ್ದರು.   

ಹುಣಸೂರು: ‘ಹೆಣ್ಣು ಮಕ್ಕಳು ಶಿಕ್ಷಣ ಪಡೆದಲ್ಲಿ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರವಾಗಲಿದೆ’ ಎಂದು ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗಾವಡಗೆರೆ ಹೋಬಳಿಯ ಗುರುಲಿಂಗ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಡೆದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹೆಣ್ಣು ಮಕ್ಕಳನ್ನು ಮನೆಯ ಕೆಲಸಕ್ಕೆ ಸೀಮಿತಗೊಳಿಸುವ ಕಾಲ ಮುಗಿದಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕವಿದೆ. ಆ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವು ವರ್ಷಗಳಿಂದ ನಡೆಸಿ, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರನ್ನು ಜಾಗೃತಗೊಳಿಸಿ ಆರ್ಥಿಕ ಶಕ್ತಿ ಮತ್ತು ಗುಡಿ ಕೈಗಾರಿಕೆ ಹಮ್ಮಿಕೊಳ್ಳುವ ಮೂಲಕ ಸದೃಢಗೊಳಿಸುವ ಪ್ರಯತ್ನ ನಡೆದಿದೆ’ ಎಂದರು.

ADVERTISEMENT

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಕಾರಿ ಸಂಘ, ಸ್ತ್ರೀ ಶಕ್ತಿ ಚಟುವಟಿಕೆ ಒಳಗೊಂಡಂತೆ ಅನೇಕ ಗುಡಿ ಕೈಗಾರಿಕೆಗೆ ಒತ್ತು ನೀಡಿ ಆರ್ಥಿಕ ಸ್ವಾವಲಂಬಿಯಾಗಲು ಊರುಗೋಲಾಗಿದೆ. ಮಹಿಳೆಯರನ್ನು ಅಧಿಕಾರ ವಿಕೇಂದ್ರೀಕರಣದಲ್ಲಿ ಪಾಲುದಾರರನ್ನಾಗಿಸಿ ಸಮರ್ಪಕವಾಗಿ ತೊಡಗಿಸಿಕೊಳ್ಳುವುದರೊಂದಿಗೆ ಕೌಟುಂಬಿಕ ಜೀವನ ಉತ್ತಮಗೊಳಿಸುವ ಕೆಲಸ ನಡೆಸಿದೆ’ ಎಂದು ತಿಳಿಸಿದರು.

ಟಿಎಪಿಸಿಎಂಎಸ್‌ ಉಪಾಧ್ಯಕ್ಷ ಹೊನ್ನಪ್ಪರಾವ್‌ ಕಾಳಿಂಗೆ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇದರೊಂದಿಗೆ ಧಾರ್ಮಿಕವಾಗಿಯೂ ಹಿಂದು ಸಂಸ್ಕೃತಿ ಸಂಪ್ರದಾಯವನ್ನು ಮೈಗೂಡಿಸಿಕೊಳ್ಳುವ ದಿಕ್ಕಿನಲ್ಲಿ ಸಂಸ್ಥೆ ಕಾರ್ಯೋನ್ಮುಖವಾಗಿದೆ ಎಂದರು.

ಗ್ರಾ.ಪಂ ಅಧ್ಯಕ್ಷ ಲೋಕೇಶ್‌, ತಾ.ಪಂ ಮಾಜಿ ಸದಸ್ಯ ಗಣಪತಿ ಇಂಡೋಳ್ಕರ್‌, ಕೃಷ್ಣೋಜಿ ರಾವ್‌ ಕದಂ ಮಾತನಾಡಿದರು. ಲಕ್ಷ್ಮೀಪೂಜಾ ಸಮಿತಿ ಅದ್ಯಕ್ಷೆ ಶೋಭಾ ಬಾಯಿ, ನಾರಾಯಣಶೆಟ್ಟಿ, ಭೂಮಿಕಾ, ಶಶಿಕಲಾ, ಲಕ್ಷ್ಮಿ, ಮಣಿ, ನೇತ್ರಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.