
ಹುಣಸೂರು: ಸಾಲಿಗ್ರಾಮ ತಾಲ್ಲೂಕಿನಲ್ಲಿ ರಾಂಪುರ ಬಡಾವಣೆಯಲ್ಲಿ ವಾಸಿಸುತ್ತಿರುವ ಹಂದಿ ಜೋಗಿ ನಿವಾಸಿಗರಿಗೆ ಮೂಲ ಸವಲತ್ತು ಇಲ್ಲ. ಈ ಬಗ್ಗೆ ಈ ಹಿಂದಿನ ಸಭೆಯಲ್ಲೂ ಚರ್ಚಿಸಲಾಗಿದ್ದು, ತಹಶೀಲ್ದಾರ್ ಕ್ರಮ ವಹಿಸಬೇಕು ಎಂದು ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಜಾಗೃತಿ ಸಮಿತಿಯಲ್ಲಿ ಚರ್ಚೆಗೆ ಎದುರಾಯಿತು.
ಈ ಸಂಬಂಧ ಪ್ರತಿಕ್ರಿಯಿಸಿದ ತಹಶೀಲ್ದಾರ್ ರುಖಿಯಾ ಬೇಗಂ, ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಸಂಗ್ರಹಿಸಲಾಗಿದೆ. ಹಂದಿ ಜೋಗಿ, ಜೇನುಕುರುಬ ಮತ್ತು ಅಲೆಮಾರಿ ನಿವಾಸಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಈ ಸಂಬಂಧ ಉಪವಿಭಾಗಾಧಿಕಾರಿ ಕಾವ್ಯರಾಣಿ ಉತ್ತರಿಸಿ, ಸ್ಥಳ ಪರಿಶೀಲನೆಗೆ ಭೇಟಿ ನೀಡಿದ ಬಳಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
ಹುಣಸೂರು ತಾಲ್ಲೂಕಿನ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ಬಾಚಹಳ್ಳಿ ರಸ್ತೆಯಲ್ಲಿ ವಾಸಿಸುತ್ತಿರುವ 13 ಪರಿಶಿಷ್ಟ ಪಂಗಡ, ಸೋಲಿಗ ಜನಾಂಗದವರಿಗೆ ಮೂಲ ಸವಲತ್ತು ಕಲ್ಪಿಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಗಂಗಾಧರ್ ಉತ್ತರಿಸಿ, ‘13 ಕುಟುಂಬಗಳಲ್ಲಿ ಕೇವಲ 4 ಕುಟುಂಬಗಳು ಈಗ ವಾಸಿಸುತ್ತಿದ್ದು, ಇವರ ಬಳಿ ದಾಖಲೆ ಪಡೆಯಲು ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಆದರೆ ಕಾಲೊನಿಯಲ್ಲಿ ಇಲ್ಲ ಎಂಬ ಉತ್ತರ ಎದುರಾಗಿದೆ’ ಎಂದು ಸಭೆಗೆ ತಿಳಿಸಿದರು.
ಉಪವಿಭಾಗಾಧಿಕಾರಿ ಉತ್ತರಿಸಿ ಪಂಚನಾಮೆ ಮಾಡಿ ಸಮಸ್ಯೆಗೆ ಅಂತ್ಯ ಹಾಡಿ ಇಲ್ಲವೆ ಮುಂದಿನ ಸಭೆಯೊಳಗೆ ಸಮಸ್ಯೆಗೆ ಪರಿಹಾರ ನೀಡಬೇಕು ಎಂದರು.
ಬಿಳಿಗೆರೆ ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿಗೆ ಸೇರಿದ 65 ಕುಟುಂಬಗಳಲ್ಲಿ 56 ಕುಟುಂಬಗಳಿಗೆ ವಸತಿ ಹಕ್ಕು ಪತ್ರ ನೀಡಲಾಗಿದ್ದು, ಉಳಿದ ಕುಟುಂಬಕ್ಕೆ ನಿವೇಶನ ಹಕ್ಕು ಪತ್ರ ನೀಡಬೇಕಾಗಿದೆ. ಈ ಬಗ್ಗೆ ಈ ಹಿಂದಿನ ಸಭೆಯಲ್ಲಿ ಚರ್ಚಿಸಿದ್ದರೂ ಈವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಸದಸ್ಯ ಅಶೋಕ್ ಹೇಳಿದರು.
ಸಮಾಜ ಕಲ್ಯಾಣ ಅಧಿಕಾರಿ ಪ್ರತಿಕ್ರಿಯಿಸಿ, ಈಗಾಗಲೇ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಉಳಿದ 4 ಜನರಿಗೆ ನಿವೇಶನ ಮಂಜೂರಾಗದ ಕಾರಣ ವಿಳಂಬವಾಗಿದೆ. ಈ ಸಾಲಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ನಿವೇಶನ ನೀಡಲಾಗುವುದು ಎಂದರು.
ಉಪವಿಭಾಗಾಧಿಕಾರಿ ಮಾತನಾಡಿ, ಮುಂದಿನ ಸಭೆಗೆ ಬಿಳಿಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಾಖಲೆಯೊಂದಿಗೆ ಹಾಜರಾಗಲು ಸೂಚಿಸಿದರು.
ಗ್ರಾಮ ಪಂಚಾಯಿತಿಗೆ ಮಂಜೂರಾಗುವ ಎಸ್‌ಸಿಪಿ, ಟಿಎಸ್‌ಪಿ ಅನುದಾನಗಳು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಈ ಸಂಬಂಧ ಉಪವಿಭಾಗಾಧಿಕಾರಿಗಳ ತಂಡ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸದಸ್ಯ ಅಣ್ಣಯ್ಯ ನಾಯಕ ಮನವಿ ಮಾಡಿದರು.
ಈ ಸಂಬಂಧ ಉಪವಿಭಾಗಾಧಿಕಾರಿ ಉತ್ತರಿಸಿ, ನಿಖರವಾಗಿ ಯಾವ ಪಂಚಾಯಿತಿ ಎಂದು ತಿಳಿಸಿದಲ್ಲಿ ತನಿಖೆ ನಡೆಸಬಹುದು. ಇಲ್ಲವಾದಲ್ಲಿ ಯಾವುದಾದರು ಒಂದು ಪಂಚಾಯಿತಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಲು ಸಿದ್ಧ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಮಂಜುನಾಥ್, ನಿಸರ್ಗ ಪ್ರಿಯ, ಶ್ರೀನಿವಾಸ್ ಡಿವೈಎಸ್‌ಪಿ ರವಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭರತ್ ಕುಮಾರ್, ಶಂಕರ್ ಮೂರ್ತಿ, ರಮೇಶ್ ಕುಮಾರ್ ಇದ್ದರು.
ಗ್ರಾಮೀಣ ಭಾಗದಲ್ಲಿನ ಜಾತ್ರೆಗಳಲ್ಲಿ ಫ್ಲೆಕ್ಸ್ ಹಾವಳಿ ಹೆಚ್ಚಾಗಿ ಪರ ವಿರೋಧ ಘರ್ಷಣೆ ಎದುರಾಗುತ್ತಿದೆ. ಇದರಿಂದ ಶಾಂತಿ ಸುವ್ಯವಸ್ಥೆಗೆ ಭಂಗವಾಗಿದೆ. ಅಧಿಕಾರಿಗಳು ಫ್ಲೆಕ್ಸ್ ನಿಯಂತ್ರಣಕ್ಕೆ ಕ್ರಮವಹಿಸಿ
– ಅಣ್ಣಯ್ಯ ನಾಯಕ ಎಸ್‌ಸಿ ಎಸ್‌ಟಿ ಸಮಿತಿ ಸದಸ್ಯ
‘ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲು ಬೇಡಿಕೆ’
ನಗರ ವ್ಯಾಪ್ತಿಯಲ್ಲಿ ನಿರ್ಗತಿಕ ವ್ಯಕ್ತಿಗಳು ಜೋಪಡಿಯಲ್ಲಿ ರಾತ್ರಿ ಮಲಗುತ್ತಿದ್ದು ಇವರಿಗೆ ನಗರಸಭೆ ವತಿಯಿಂದ ಪುನರ್ವಸತಿ ಕಲ್ಪಿಸಬೇಕು ಎಂಬ ಬೇಡಿಕೆ ಕೇಳಿಬಂತು. ಈ ಸಂಬಂಧ ನಗರಸಭೆ ಆಯುಕ್ತೆ ಮಾನಸ ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿನ ಭಿಕ್ಷುಕರು ಅನಾಥರನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಇಲ್ಲ. ಆ ರೀತಿ ಇದ್ದಲ್ಲಿ ಅಂತಹವರನ್ನು ಕಾನೂನಾತ್ಮಕವಾಗಿ ರಕ್ಷಿಸಿ ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧ ಎಂದರು. ಉಪವಿಭಾಗಾಧಿಕಾರಿ ಪ್ರತಿಕ್ರಿಯಿಸಿ ಮೈಸೂರು ಕೇಂದ್ರಕ್ಕೆ ಸ್ಥಳಾಂತರಿಸುವುದರಿಂದ ಮತ್ತಷ್ಟು ರಕ್ಷಣೆ ಸಿಗಲಿದ್ದು ಸಮಿತಿ ಸದಸ್ಯರು ಭಿಕ್ಷುಕರು ಅನಾಥರು ಕಂಡುಬಂದಲ್ಲಿ ನಗರಸಭೆ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.