ADVERTISEMENT

ಹುಣಸೂರು | ಓಂಕಾರೇಶ್ವರ ರಥೋತ್ಸವದಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:17 IST
Last Updated 17 ಫೆಬ್ರುವರಿ 2026, 4:17 IST
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ರಾಮೇನಹಳ್ಳಿ ಗ್ರಾಮದಲ್ಲಿ ಸೋಮವಾರ ರಾಮೇನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಓಂಕಾರೇಶ್ವರ ಸ್ವಾಮಿ ದೇವರ ರಥೋತ್ಸವ ಅದ್ಧೂರಿಯಿಂದ ಜರುಗಿತು.
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ರಾಮೇನಹಳ್ಳಿ ಗ್ರಾಮದಲ್ಲಿ ಸೋಮವಾರ ರಾಮೇನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಓಂಕಾರೇಶ್ವರ ಸ್ವಾಮಿ ದೇವರ ರಥೋತ್ಸವ ಅದ್ಧೂರಿಯಿಂದ ಜರುಗಿತು.   

ಹುಣಸೂರು: ತಾಲ್ಲೂಕಿನ ರಾಮೇನಹಳ್ಳಿಯ ಓಂಕಾರೇಶ್ವರ ರಥೋತ್ಸವ ಸೋಮವಾರ ಬೆಳಿಗ್ಗೆ ಮೇಷ ಲಗ್ನದಲ್ಲಿ ಜರುಗಿತು.

ಭಕ್ತರು ರಥ ಎಳೆಯುತ್ತಿದ್ದಂತೆ ಹಣ್ಣು ಜವನ ಅರ್ಪಿಸಿ ‘ಓಂ ನಮ ಶಿವಾಯ’ ಘೋಷಣೆ ಹಾಕಿದರು. ಬೆಟ್ಟದ ಮೇಲಿನ ಓಂಕಾರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ದಿನದಂದು ವಿವಿಧ ಪೂಜಾ ಕೈಂಕರ್ಯ ನಡೆದು ಅಹೋರಾತ್ರಿ ಜಾಗರಣೆ ನಡೆಸಲಾಯಿತು. ಸೋಮವಾರ ಬೆಳಿಗ್ಗೆಯಿಂದಲೇ ಭಕ್ತರು ದೇವರ ದರ್ಶನ ಪಡೆದು ಹರಕೆ ಅರ್ಪಿಸಿದರು.

ನೂತನ ರಥ: ‘ರಾಮೇನಹಳ್ಳಿ ಓಂಕಾರೇಶ್ವರ ದೇವರ ರಥ ಕಳೆದ 4 ದಶಕದಿಂದ ಬಳಕೆಯಾಗುತ್ತಿದ್ದು, ಇದೀಗ ಸಂಪೂರ್ಣ ಶಿಥಿಲವಾಗಿದೆ. ನೂತನ ರಥವನ್ನು ದೇವಸ್ಥಾನದ ಆಡಳಿತ ಮಂಡಳಿ ನಿರ್ಮಿಸಲು ಮುಂದಾಗಿದೆ’ ಎಂದು ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ತಿಳಿಸಿದರು.

ADVERTISEMENT

‘ರಥವನ್ನು ಹೊನ್ನೆ, ತೇಗ ಮತ್ತು ಬಿಲ್ವಾರ ಮರದಿಂದ ಸಿದ್ಧಗೊಳಿಸುತ್ತಿದ್ದು, ಈ ಕೆಲಸ ಉಡುಪಿಯ ಗಣೇಶಾಚಾರ್‌ ನೇತೃತ್ವದಲ್ಲಿ ನಡೆದಿದೆ. ಅಂದಾಜು ₹ 1 ಕೋಟಿ ವೆಚ್ಚದಲ್ಲಿ ಸಿದ್ಧಗೊಳ್ಳುತ್ತಿದ್ದು, ನಿರ್ಮಾಣಕ್ಕೆ ಭಕ್ತರಿಂದ ಪಡೆದ ದೇಣಿಗೆ ಬಳಸಲಾಗಿದೆ. ಈಗಲೂ ದೇಣಿಗೆ ನೀಡುವವರು ದೇವಸ್ಥಾನದ ಬ್ಯಾಂಕ್‌ ಖಾತೆಗೆ ಹಣ ಸಂದಾಯ ಮಾಡಬಹುದು’ ಎಂದರು.

ರಥೋತ್ಸವದಲ್ಲಿ ಶಾಸಕ ಜಿ.ಡಿ.ಹರೀಶ್‌ ಗೌಡ ಭಾಗವಹಿಸಿದ್ದರು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಅವರು ₹ 5 ಲಕ್ಷ ನೀಡುವುದಾಗಿ ಪ್ರಕಟಿಸಿದರು. 

ದಾಸೋಹ: ರಥೋತ್ಸವಕ್ಕೆ ಬರುವ ಭಕ್ತರಿಗೆ ದೇವಸ್ಥಾನ ವತಿಯಿಂದ 20 ಸಾವಿರ ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಹುಣಸೂರಿನ ಬಾಣಸಿಗರಾದ ಚೇತನ್‌ ಮತ್ತು ತಂಡದವರು ಅಡುಗೆ ಸಿದ್ಧಪಡಿಸಿದ್ದರು. ಎರಡು ಬಗೆಯ ಪಲ್ಯ, ತುಪ್ಪದನ್ನ, ಅನ್ನ, ಸಾಂಬಾರ್‌, ಸಹಿ ವಿತರಿಸಲಾಯಿತು’ ಎಂದು ದೇವಸ್ಥಾನ ಆಡಳಿತ ಮಂಡಳಿಯ ಉಮೇಶ್‌, ಲಿಂಗರಾಜು ತಿಳಿಸಿದರು.

ಮಜ್ಜಿಗೆ ವಿತರಣೆ: ಗಾಡಿ ಕಾರ್ಖಾನೆ ನಾರಾಯಪ್ಪ ಕುಟುಂಬದ 200 ಸದಸ್ಯರು ಒಗ್ಗೂಡಿ ಜಾತ್ರೆಗೆ ಆಗಮಿಸುವ ಭಕ್ತರಿಗೆ 5 ಸಾವಿರ ಲೀಟರ್‌ ಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ಮಕ್ಕಳಿಗೆ ಹಾಲು ವಿತರಿಸಿದರು’ ಎಂದು ಕುಟುಂಬದ ಗಣೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾತ್ರೆಯಲ್ಲಿ ಯುವಕ, ಯುವತಿಯರು ಗುಂಪು ಗುಂಪಾಗಿ ಆಗಮಿಸಿ ಬೆಟ್ಟ ಹತ್ತಿದರು. ಬೆಟ್ಟದ ತಪ್ಪಲಿನಲ್ಲಿ ಸಿಹಿ ತಿನಿಸು, ಆಟಿಕೆ ಮಾರಾಟ ಮಳಿಗೆಗಳು ವಹಿವಾಟು ನಡೆಸಿದವು. ಜೋಡೆತ್ತುಗಳ ಪ್ರದರ್ಶನ ಜಾತ್ರೆಯಲ್ಲಿ ಗಮನ ಸೆಳೆಯಿತು. 

ಮಂಗಳವಾರ (ಫೆ.17) ಮಹಾಪೂಜೆ ಮತ್ತು ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಬುಧವಾರ (ಫೆ.18) ಸಂಜೆ 5 ರಿಂದ 7 ರವರಗೆ ರಾಮೇನಹಳ್ಳಿ ಗ್ರಾಮದಲ್ಲಿ ಮೆರವಣಿಗೆ ಹಾಗೂ ಲಕ್ಷ್ಮಣತೀರ್ಥ ನದಿಯಲ್ಲಿ ಓಂಕಾರೇಶ್ವರ ಸ್ವಾಮಿ ತೆಪ್ಪೋತ್ಸವದೊಂದಿಗೆ ಜಾತ್ರೆ ಸಂಪನ್ನವಾಗಲಿದೆ.

ಜಾತ್ರೆಗೆ ಬಂದಿದ್ದ ಯುವಕರು ಮನೆಗೆ ಸಿಹಿ ಖರೀದಿಸುವಲ್ಲಿ ನಿರತರಾಗಿದ್ದರು.
ರಾಮೇನಹಳ್ಳಿ ಓಂಕಾರೇಶ್ವರ ಸ್ವಾಮಿ ಜಾತ್ರೆಗೆ ಆಗಮಿಸಿದ್ದ ಹಳ್ಳಿಕಾರ್‌ ತಳಿ ಜಾನುವಾರು ಗಮನ ಸೆಳೆಯಿತು

20 ಸಾವಿರ ಭಕ್ತರಿಗೆ ದಾಸೋಹ ವ್ಯವಸ್ಥೆ ಗಮನ ಸೆಳೆದ ಜೋಡೆತ್ತುಗಳ ಪ್ರದರ್ಶನ