ADVERTISEMENT

ಹುಣಸೂರು | ರಸ್ತೆಗಳ ದುರಸ್ತಿಗೆ ಕ್ರಮ: ಶಾಸಕ ಜಿ.ಡಿ.ಹರೀಶ್‌ ಗೌಡ

ನಗರಸಭೆ ವ್ಯಾಪ್ತಿಯ 15 ಕಿ.ಮಿ. ರಸ್ತೆ ಅಭಿವೃದ್ಧಿಗೆ ₹ 13.50 ಕೋಟಿ ಬಳಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 2:44 IST
Last Updated 17 ಅಕ್ಟೋಬರ್ 2025, 2:44 IST
ಹುಣಸೂರು ನಗರಸಭೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ ಗೌಡ ಅವರು ನಗರಸಭೆ ಅಧ್ಯಕ್ಷ ಮಲ್ಲಿಕ್‌ ಪಾಶಾ ನಗರಸಭೆ ಸದಸ್ಯರೊಂದಿಗೆ ಗುರುವಾರ ಸಭೆ ನಡೆಸಿದರು 
ಹುಣಸೂರು ನಗರಸಭೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ ಗೌಡ ಅವರು ನಗರಸಭೆ ಅಧ್ಯಕ್ಷ ಮಲ್ಲಿಕ್‌ ಪಾಶಾ ನಗರಸಭೆ ಸದಸ್ಯರೊಂದಿಗೆ ಗುರುವಾರ ಸಭೆ ನಡೆಸಿದರು    

ಹುಣಸೂರು: ಹುಣಸೂರು ನಗರ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ, 15 ಕಿ.ಮೀ, ಡಾಂಬರೀಕರಣಕ್ಕೆ ಕ್ರಮವಹಿಸಲಾಗಿದೆ ಎಂದು ಶಾಸಕ ಜಿ.ಡಿ.ಹರೀಶ್‌ ಗೌಡ ಹೇಳಿದರು.

ನಗರಸಭೆಯಲ್ಲಿ ಗುರುವಾರ ಅಧ್ಯಕ್ಷ ಮಲ್ಲಿಕ್‌ ಪಾಶಾ ಮತ್ತು ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆದ ವಿಶೇಷ ಸಭೆಯಲ್ಲಿ ಹುಣಸೂರು ನಗರ ವ್ಯಾಪ್ತಿಯೊಳಗಿನ ಪ್ರಮುಖ ರಸ್ತೆಗಳು ಗುಂಡಿ ಬಿದ್ದಿದ್ದು, ಈ ರಸ್ತೆಗಳ ದುಃಸ್ಥಿತಿ ವಿಶೇಷ ಅನುದಾನ ಬಳಸಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು ಎಂದರು.

ನಗರದ ದೇವರಾಜ ಅರಸು ಪುತ್ಥಳಿ ಬಳಿಯಿಂದ ಹಾಳಗೆರೆ, ಧ್ರುವ ಪೆಟ್ರೋಲ್‌ ಬಂಕ್‌ನಿಂದ ಕಾಫಿ ವರ್ಕ್‌, ಸಂವಿಧಾನ ವೃತ್ತದಿಂದ ಎಚ್.ಡಿ.ಕೋಟೆ ವೃತ್ತದ ವರಗೆ, ಕಲ್ಪತರು ವೃತ್ತದಿದಂತ ಶಬ್ಬೀರ್‌ ನಗರದ ಪಿಡಬ್ಯುಡಿ ವ್ಯಾಪ್ತಿಗೆ ಸೇರಿದ 11 ಕಿ.ಮಿ.₹ 12 ಕೋಟಿ ಮತ್ತು ನಗರಸಭೆ ವ್ಯಾಪ್ತಿಗೆ ಸೇರಿದ 5 ಕಿ.ಮಿ. ರಸ್ತೆಗಳ ಅಭಿವೃದ್ಧಿಗೆ ₹1.50 ಕೋಟಿ ಅನುದಾನ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ADVERTISEMENT

‘ಹುಣಸೂರು ಕೆ.ಆರ್.ನಗರ ಶನಿದೇವರ ದೇವಸ್ಥಾನದ ಬಳಿ ಮಳೆ ನೀರು ಹರಿದು ಹೋಗಲು ಸಮರ್ಪಕವಾದ ವ್ಯವಸ್ಥೆ ಇಲ್ಲದೆ ರಸ್ತೆ ಹಾಳಾಗುತ್ತಿದ್ದು, ಈ ಸ್ಥಳಕ್ಕೆ ಸಿಮೆಂಟ್‌ ರಸ್ತೆ ಮಾಡಿ ಮಳೆ ನೀರು ಹರಿದುಹೋಗಲು ಕ್ರಮವಹಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದೇನೆ. ನಗರದ ಎಸ್.ಜೆ. ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗುವ ಸ್ಥಳದಲ್ಲಿ ಸೂಕ್ತ ಕ್ರಮವಹಿಸಲು ತಿಳಿಸಲಾಗಿದೆ’ ಎಂದರು.

ಅನುದಾನ:

‘ಸರ್ಕಾರದಿಂದ ಶಾಸಕರಿಗೆ ನೀಡಬೇಕಾದ ಅನುದಾನ ಸಮರ್ಪಕವಾಗಿ ನೀಡದೆ ಕ್ಷೇತ್ರದಲ್ಲಿ ಪ್ರಗತಿ ಕಾಮಗಾರಿ ಕೈಗೊಳ್ಳಲು ಆಗುತ್ತಿಲ್ಲ. ಶಾಸಕರ ವೈಯಕ್ತಿಕ ಅನುದಾನವನ್ನಷ್ಟೇ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೇಲ್ನೋಟಕ್ಕೆ ಅನುದಾನ ನೀಡುತ್ತಿದ್ದೇವೆ ಎಂದು ಸರ್ಕಾರ ಹೇಳಿಕೆ ನೀಡುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.

ಘನತ್ಯಾಜ್ಯ:

ನಗರದ ಘನತ್ಯಾಜ್ಯ ಘಟಕದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಭೆಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಯಿತು. ಈ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಮುಂದಿನ ಕ್ರಮಕ್ಕೆ ಶಾಸಕರು ಆಯುಕ್ತೆ ಮಾನಸ ಅವರಿಗೆ ಸೂಚಿಸಿದರು.

ಸಭೆಯಲ್ಲಿ ನಗರಸಭೆ ಆಯುಕ್ತೆ ಮಾನಸ, ಉಪಾಧ್ಯಕ್ಷೆ ಆಶಾ, ವಿರೋಧ ಪಕ್ಷದ ಮುಖಂಡ ಸ್ವಾಮಿಗೌಡ, ಕೃಷ್ಣರಾಜಗುಪ್ತ, ಗೀತಾ ಲಿಂಗರಾಜ್‌, ಗಣೇಶ್‌ ಕುಮಾರಸ್ವಾಮಿ, ವಿವೇಕ್‌, ಶ್ರೀನಾಥ್‌, ದೇವರಾಜ್‌, ದೇವರಾಜ್‌ ನಾಯಕ ಉಪಸ್ಥಿತರಿದ್ದರು.

‘ತೆರವು ಕಾರ್ಯಾಚರಣೆ ಶೀಘ್ರ’
‘ನಗರದ ಪ್ರಮುಖ ವ್ಯಾಪಾರ ವಹಿವಾಟು ರಸ್ತೆಗಳನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದು ಈ ಸಂಬಂಧ ನಗರಸಭೆ ಪೊಲೀಸ್‌ ಮತ್ತು ಪಿಡಬ್ಯುಡಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಿದೆ. ಶಬ್ಬಿರ್‌ ನಗರದ ಪ್ರಮುಖ ರಸ್ತೆ ಬಹುತೇಕ ಆಕ್ರಮಿಸಿಕೊಂಡು ಕಟ್ಟಡ ನಿರ್ಮಿಸಿರುವ ಬಗ್ಗೆ ನಗರಸಭೆ ಸದಸ್ಯ ಯೂನಿಸ್‌ ಗಮನಕ್ಕೆ ತಂದಿದ್ದು ಆ ಭಾಗದಲ್ಲಿಯೂ ತೆರವು ಕಾರ್ಯಾಚರಣೆ ಅತಿ ಶೀಘ್ರದಲ್ಲಿ ನಡೆಯಲಿದೆ’ ಎಂದರು.