ಮೈಸೂರು: ಈಚೆಗೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಹುಣಸೂರಿನ ದರೋಡೆ ಪ್ರಕರಣದಲ್ಲಿ ಆರೋಪಿಗಳು ಕೃತ್ಯ ನಡೆಸುವಾಗ ಮೊಬೈಲ್ ಬಳಸದೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಪೊಲೀಸರು ಮುಖಚರ್ಯೆ ಗುರುತಿಸಿ ಬಿಹಾರ ರಾಜ್ಯದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಸ್‌ಪಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಟೋರಿಯಸ್ ಗ್ಯಾಂಗ್ ಹುಣಸೂರಿನ ದರೋಡೆ ಪ್ರಕರಣ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದೇವೆ. 10ಕ್ಕೂ ಹೆಚ್ಚು ಆರೋಪಿಗಳಿದ್ದು, ಅವರ ಪತ್ತೆಗೆ ತನಿಖೆ ಮುಂದುವರೆಸಿದ್ದೇವೆ’ ಎಂದು ತಿಳಿಸಿದರು.
‘ಪ್ರಕರಣದ ತನಿಖೆ ಆರಂಭಿಸಿದಾಗ ಐವರು ಬಂದು ದರೋಡೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅವರೆಲ್ಲರೂ ಮೊಬೈಲ್ ಬಳಸದೇ ಇದ್ದ ಕಾರಣ ಆರೋಪಿಗಳನ್ನು ಕಂಡುಹುಡುಕುವುದು ಕ್ಲಿಷ್ಟಕರವಾಗಿತ್ತು’ ಎಂದರು.
‘ದೃಶ್ಯಗಳಲ್ಲಿ ಮೂವರ ಮುಖ ಕಾಣಿಸುತ್ತಿತ್ತು. ಅವರ ಮುಖಚಹರೆ ಹಾಗೂ ನಮ್ಮಲ್ಲಿರುವ ತಂತ್ರಜ್ಞಾನ ಬಳಸಿದಾಗ ಬಿಹಾರ ರಾಜ್ಯದವರೆಂದು ತಿಳಿಯಿತು. ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದಾಗ, ಆರೋಪಿಗಳ ಗುರುತು ಪತ್ತೆಹಚ್ಚಿದರು. ಎಎಸ್‌ಪಿ ಎಲ್.ನಾಗೇಶ್ ನೇತೃತ್ವದಲ್ಲಿ ಐದು ತಂಡ ರಚಿಸಿ ವಿವಿಧ ಜಿಲ್ಲೆಗಳಿಗೆ ಕಳಿಸಿಕೊಡಲಾಯಿತು’ ಎಂದು ಮಾಹಿತಿ ನೀಡಿದರು.
‘ಬಿಹಾರ ರಾಜ್ಯಕ್ಕೆ ತೆರಳಿದ್ದ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್, ಡಿ.ಎಂ.ಪುನೀತ್, ಪಿಎಸ್‌ಐ ಅಜಯ್ ಕುಮಾರ್ ನೇತೃತ್ವದ ತಂಡವು ಬಿಹಾರ ಪೊಲೀಸರ ನೆರವಿನೊಂದಿಗೆ ದರ್ಬಾಂಗ್ ಜಿಲ್ಲೆಯಲ್ಲಿ ಕೃತ್ಯದಲ್ಲಿ ಭಾಗಿಯಾಗಿದ್ದ ದೆಹಲಿ ಮೂಲದ ರಿಷಿಕೇಶ್ ಕುಮಾರ್ ಸಿಂಗ್ ಹಾಗೂ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಬಾಗಲ್‌ಪುರ್ ಜಿಲ್ಲೆಯ ಪಂಕಜ್‌ನ್ನು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಾರಂಟ್ ಪಡೆದು ಆರೋಪಿಗಳನ್ನು ಜಿಲ್ಲಾ ಪೊಲೀಸರ ವಶಕ್ಕೆ ಪಡೆದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ’ ಎಂದು ತಿಳಿಸಿದರು.
ನಟೋರಿಯಸ್ ತಂಡ: ಪತ್ತೆಯಾಗಿರುವ ಪಂಕಜ್ 27 ಪ್ರಕರಣ ಹಾಗೂ ರಿಷಿಕೇಶ್ ಅಲಿಯಾಸ್ ಚೋಟು 4 ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ‘ಹುಣಸೂರು ದರೋಡೆ ಪ್ರಕರಣಕ್ಕೆ ಪಂಕಜ್ ಯುವಕರನ್ನು ಒಟ್ಟುಗೂಡಿಸಿ, ಲಾಜಿಸ್ಟಿಕ್ ಬೆಂಬಲ ಒದಗಿಸಿರುವುದು ಗೊತ್ತಾಗಿದೆ. ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳ ದರೋಡೆ ಪ್ರಕರಣದಲ್ಲೂ ಇವರು ಭಾಗಿಗಳಾಗಿದ್ದಾರೆ. ಇತರೆ ಪ್ರಕರಣಗಳಲ್ಲಿ ಜೈಲು ಸೇರಿರುವಾಗ ಅಲ್ಲಿ ಸ್ನೇಹಿತರಾಗಿ ಬಳಿಕ ಗುಂಪಾಗಿ ಕೆಲಸ ಮಾಡುತ್ತಿರುವ ಮಾಹಿತಿಯಿದ್ದು, ವಿವಿಧ ರಾಜ್ಯಗಳ ಆರೋಪಿಗಳಿರುವ ಸಾಧ್ಯತೆಯಿದೆ. ಆದರೆ ಸ್ಥಳೀಯರು ಯಾರೂ ಭಾಗಿಯಾಗಿಲ್ಲ’ ಎಂದು ಎಸ್‌ಪಿ ತಿಳಿಸಿದರು.
ನಕಲಿ ದಾಖಲೆ ಬಳಸಿ ವಾಸ್ತವ್ಯ: ‘ಇದು ವೃತ್ತಿಪರ ದರೋಡೆಕೋರರು ನಡೆಸಿದ ಕೃತ್ಯ. ಕರ್ನಾಟಕದಲ್ಲಿ ಮೊದಲ ಬಾರಿ ದರೋಡೆ ನಡೆಸಿದ್ದಾಗಿ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿ ಕೊಡಗು, ಹಾಸನ, ಮೈಸೂರು ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಹುಣಸೂರಿನ ಬೈಪಾಸ್ ರಸ್ತೆಯಲ್ಲಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಚಿನ್ನಾಭರಣ ಮಳಿಗೆ ಗುರುತು ಮಾಡಿಕೊಂಡಿದ್ದಾರೆ’ ಎಂದರು.
‘ಕೃತ್ಯಕ್ಕೆ ಮೊದಲು ಹುಣಸೂರು, ಪಿರಿಯಾಪಟ್ಟಣದ ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡಿದ್ದು, ಅಲ್ಲಿ ನಕಲಿ ಆಧಾರ್ ಕಾರ್ಡ್ ಹಾಗೂ ಇನ್ಯಾರದ್ದೂ ಮೊಬೈಲ್ ಸಂಖ್ಯೆ ನಮೋದಿಸಿದ್ದಾರೆ. ಕೃತ್ಯ ನಡೆಸಿದ ಬಳಿಕ ಜೊತೆಗೆ ತೆರಳದೆ, ವಿವಿಧ ಕಡೆಗೆ ತೆರಳಿದ್ದಾರೆ. ಇದು ಆರಂಭಿಕ ಕೆಲಸವಾಗಿದ್ದು, ಈ ತಂಡವನ್ನು ಪತ್ತೆಹಚ್ಚಿದ ಬಳಿಕ ಯಾಕಾಗಿ ಹುಣಸೂರನ್ನು ಆಯ್ಕೆ ಮಾಡಿದರು, ಯೋಜನೆ ಹೇಗಿತ್ತು ಎಂಬುದು ತಿಳಿಯಲಿದೆ’ ಎಂದು ಹೇಳಿದರು.
‘ಚಿನ್ನಾಭರಣ ದೋಚಿದ ಆರೋಪಿಗಳನ್ನು ಬಂಧಿಸುವುದರೊಂದಿಗೆ, 8 ಕೆ.ಜಿ ಆಭರಣ ಎಲ್ಲಿ ಹೊಗಿವೆ ಎಂಬುದನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲು ಆದ್ಯತೆ ನೀಡಲಾಗಿದೆ’ ಎಂದರು.
ಐವತ್ತು ಪೊಲೀಸರಿಂದ ಹುಡುಕಾಟ: ‘ಸ್ಕೈ ಗೋಲ್ಡ್ ಆಂಡ್ ಡೈಮಂಡ್ ಮಳಿಗೆಯ ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಸಿ, 450 ವಿವಿಧ ಮಾದರಿಯ ₹10 ಕೋಟಿ ಮೌಲ್ಯದ 8.34 ಕೆಜಿ ಚಿನ್ನಾಭರಣ ದೋಚಿರುವ ಆರೋಪಿಗಳನ್ನು ಪತ್ತೆಹಚ್ಚಲು ಐವತ್ತು ಪೊಲೀಸರು ಎರಡು ವಾರದಿಂದ ಸತತವಾಗಿ ಹುಡುಕಾಟ ನಡೆಸಿದ್ದಾರೆ’ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
‘ಆರೋಪಿಗಳಿಂದ 12.5 ಗ್ರಾಂ ಚಿನ್ನಾಭರಣ ಹಾಗೂ ₹92 ಸಾವಿರ ನಗದು, ಸ್ಕೈ ಗೋಲ್ಡ್ ಚಿಹ್ನೆ ಇರುವ ಒಂದು ಬಾಕ್ಸ್, ರಾಯಲ್ ಎನ್‌ಫೀಲ್ಡ್ ಬೈಕ್ ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.