ADVERTISEMENT

ಐಎಎಸ್‌ ಅಧಿಕಾರಿಯೊಬ್ಬರ ಬಗ್ಗೆ ನಾನೂ ಸಿನಿಮಾ ಮಾಡುತ್ತೇನೆ: ಶಾಸಕ ಸಾ.ರಾ.ಮಹೇಶ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 10:20 IST
Last Updated 9 ಜೂನ್ 2021, 10:20 IST
ಸಾ.ರಾ.ಮಹೇಶ್
ಸಾ.ರಾ.ಮಹೇಶ್   

ಮೈಸೂರು: ‘ಆಂಧ್ರ ಮೂಲದ ಐಎಎಸ್‌ ಅಧಿಕಾರಿಯೊಬ್ಬರ ಜೀವನದ ಕುರಿತು ಚಲನಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆದಿರುವುದು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಬಡ ರೈತನ ಮಗನೊಬ್ಬ ಐಎಎಸ್‌ ಆದ ಕಥೆಯನ್ನಾಧರಿಸಿ ನಾನೂ ಒಂದು ಸಿನಿಮಾ ಮಾಡುತ್ತೇನೆ’ ಎಂದು ಶಾಸಕ ಸಾ.ರಾ.ಮಹೇಶ್‌,ಹೆಸರು ಹೇಳದೆಯೇ ರೋಹಿಣಿ ಸಿಂಧೂರಿ ಅವರನ್ನು ಕುಟುಕಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅವರ ಬಗ್ಗೆ ನಿರ್ಮಾಣ ಆಗುತ್ತಿರುವ ಸಿನಿಮಾ ಬಿಡುಗಡೆ ಆಗಲಿ. ಆ ಬಳಿಕ ನಾವೂ ನಿರ್ಮಾಣಕ್ಕೆ ಇಳಿಯುವೆವು. ಬಡ ರೈತನ ಮಗನೊಬ್ಬ ಕಷ್ಟಪಟ್ಟು ಓದಿ ಐಎಎಸ್‌ ಅಧಿಕಾರಿಯಾದದ್ದು, ಅವರ ಜೀವನ ಹೇಗೆ ದುರಂತ ಅಂತ್ಯ ಕಂಡಿತು ಎಂಬ ಕುರಿತು ಸಿಬಿಐ ವರದಿಯನ್ನಾಧರಿಸಿ ಸಿನಿಮಾ ನಿರ್ಮಾಣ ಮಾಡುತ್ತೇನೆ’ ಎಂದರು.

ತಿಂಗಳಿಗೆ ₹ 50 ಸಾವಿರಕ್ಕೂ ಅಧಿಕ ವಿದ್ಯುತ್ ಬಿಲ್‌: ಈ ಹಿಂದಿನ ಜಿಲ್ಲಾಧಿಕಾರಿಗಳು ಇದ್ದ ಅವಧಿಯಲ್ಲಿ ಅವರ ನಿವಾಸದ ವಿದ್ಯುತ್‌ ಬಿಲ್‌ ಗರಿಷ್ಠ ಎಂದರೆ ತಿಂಗಳಿಗೆ ₹ 7 ರಿಂದ 8 ಸಾವಿರದವರೆಗೆ ಬರುತ್ತಿತ್ತು. ಆದರೆ ಇವರು ಬಂದ ಬಳಿಕ ತಿಂಗಳಿಗೆ ₹ 50 ಸಾವಿರಕ್ಕೂ ಅಧಿಕ ವಿದ್ಯುತ್‌ ಬಿಲ್‌ ಬಂದಿದೆ ಎಂದು ಆರೋಪಿಸಿದರು.

ADVERTISEMENT

ಜಿಲ್ಲಾಧಿಕಾರಿಗಳ ನಿವಾಸಕ್ಕೆ ಒಟ್ಟು ಮೂರು ವಿದ್ಯುತ್‌ ಮೀಟರ್‌ಗಳು ಇವೆ. ಅವುಗಳಲ್ಲಿ ಎರಡು ಮೀಟರ್‌ಗಳಲ್ಲಿ ಮೇ ತಿಂಗಳಲ್ಲಿ ₹ 42,371 ಹಾಗೂ ಜೂನ್‌ ತಿಂಗಳಲ್ಲಿ ₹ 36,406 ಬಿಲ್‌ಗಳು ಬಂದಿವೆ. ಇನ್ನೊಂದು ಮೀಟರ್‌ಗೆ ಬಂದಿರುವ ಬಿಲ್‌ಅನ್ನೂ ಸೇರಿಸಿದೆ ತಿಂಗಳ ಒಟ್ಟು ಬಿಲ್ ₹ 50 ಸಾವಿರ ದಾಟುತ್ತದೆ. ಜಿಮ್‌, ಈಜುಕೊಳ ನಿರ್ಮಾಣ ಆಗಿರುವುದೇ ಇದಕ್ಕೆ ಕಾರಣ ಎಂದರು.

‘ಮೈಸೂರಿನ ಜನರಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಇರುವುದಿಲ್ಲ. ಆದರೆ ಜಿಲ್ಲಾಧಿಕಾರಿ ನಿವಾಸದಲ್ಲಿ ನಿರ್ಮಾಣವಾಗಿರುವ ಈಜುಕೊಳಕ್ಕೆ ಕುಡಿಯುವ ನೀರು ಬಳಸಲಾಗಿದೆ. ಅವರನ್ನು ವರ್ಗಾವಣೆ ಮಾಡುವ ಬದಲು ಅಮಾನತು ಮಾಡಬೇಕಿತ್ತು’ ಎಂದು ಕಿಡಿಕಾರಿದರು.

‘ಮೈಸೂರಿನಿಂದ ವರ್ಗಾವಣೆಯಾಗಿರುವ ಜಿಲ್ಲಾಧಿಕಾರಿ ವಿರುದ್ಧ ನಾನು ಮಾಡಿರುವ 10 ಆರೋಪಗಳ ಕುರಿತು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಎಲ್ಲ ದಾಖಲೆಗಳನ್ನೂ ಒದಗಿಸಿದ್ದೇನೆ. ಇವುಗಳ ಬಗ್ಗೆ ಸಮಗ್ರ ತನಿಖೆ ಆಗಲಿ. ಇದೇ ವಿಷಯಗಳನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.