ADVERTISEMENT

ಕೊಳವೆಬಾವಿ ಅಕ್ರಮ: ₹163 ಕೋಟಿ ಕಮಿಷನ್‌- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮೇ 2022, 8:32 IST
Last Updated 19 ಮೇ 2022, 8:32 IST
ಎಂ.ಲಕ್ಷ್ಮಣ್‌
ಎಂ.ಲಕ್ಷ್ಮಣ್‌   

ಮೈಸೂರು: ‘ಸಮಾಜ ಕಲ್ಯಾಣ ಇಲಾಖೆಯು ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ನಿಗಮಗಳ ಮೂಲಕ 14,577 ಕೊಳವೆ ಬಾವಿಗಳನ್ನು ಕೊರೆಸಲು ₹431 ಕೋಟಿ ಮೊತ್ತದ ಟೆಂಡರ್‌ ನೀಡಿದ್ದು, ಇದರಲ್ಲಿ ₹163 ಕೋಟಿ ಕಮಿಷನ್‌ ಪಡೆಯಲಾಗಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆರೋಪಿಸಿದರು.

‘ಒಂದು ಕೊಳವೆ ಬಾವಿ ಕೊರೆಸಲು ಸಮಾಜ ಕಲ್ಯಾಣ ಇಲಾಖೆಯು ₹1.93 ಲಕ್ಷ ನಿಗದಿಪಡಿಸಿದೆ. ಆದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ₹83 ಸಾವಿರ ನಿಗದಿಪಡಿಸಿದೆ. ಪ್ರತಿ ಕೊಳವೆ ಬಾವಿಗೆ ಹೆಚ್ಚುವರಿಯಾಗಿ ₹1.10 ಲಕ್ಷವನ್ನು ನಿಗದಿಪಡಿಸಿದ್ದು, ಇದನ್ನು ಕಮಿಷನ್‌ ರೂಪದಲ್ಲಿ ಪಡೆಯಲಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಒಂದು ಸಾವಿರ ಕೊಳವೆ ಬಾವಿ ಕೊರೆದಿರುವ ಹಾಗೂ ₹10 ಕೋಟಿ ವಹಿವಾಟು ನಡೆಸಿರುವ ಸಂಸ್ಥೆಗೆ ಟೆಂಡರ್‌ ನೀಡಬೇಕೆಂಬ ನಿಯಮವಿದೆ. ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ ಅರ್ಹತೆ ಇಲ್ಲದ ಒಟ್ಟು 22 ಸಂಸ್ಥೆಗಳಿಗೆ ಟೆಂಡರ್‌ ನೀಡಲಾಗಿದೆ. ಈ ಸಂಸ್ಥೆಗಳ ಆದಾಯ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ಡಾ.ಅಂಬೇಡ್ಕರ್‌ ಅಭಿವೃದ್ಧಿ ನಿಗಮವು ಆದಾಯ ತೆರಿಗೆ ಇಲಾಖೆಯ ವಾಣಿಜ್ಯ ಆಯುಕ್ತರಿಗೆ ಮಾರ್ಚ್‌ 9ರಂದು ಪತ್ರ ಬರೆದಿದ್ದರೂ ಇಲ್ಲಿವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಾಂಗ್ರೆಸ್‌ ಪಕ್ಷವು ದೂರು ನೀಡಿದೆ. ಪ್ರಕರಣದ ಬಗ್ಗೆ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 5 ವರ್ಷಗಳಲ್ಲಿ ₹90 ಸಾವಿರ ಕೋಟಿ ಸಾಲ ಮಾಡಿದ್ದರು’ ಎಂಬ ಬಿಜೆಪಿ ವಕ್ತಾರ ಗಣೇಶ್‌ ಕಾರ್ಣಿಕ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ್‌, ‍‘ದೇಶದಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಅಧಿಕಾರಾವಧಿಯಲ್ಲಿ 5,386 ಜಲಾಶಯಗಳು, 59 ಲಕ್ಷ ಶಾಲೆಗಳನ್ನು ನಿರ್ಮಿಸಿತ್ತು. ಇದಕ್ಕಾಗಿ ₹53 ಲಕ್ಷ ಕೋಟಿ ಸಾಲ ಮಾಡಿತ್ತು. 2014ರ ಮಾರ್ಚ್‌ನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಈವರೆಗೆ ₹100 ಲಕ್ಷ ಕೋಟಿ ಸಾಲ ಮಾಡಿದೆ. ಯಾವ ಜಲಾಶಯ, ರಸ್ತೆ ನಿರ್ಮಿಸಿದೆ? ಎಷ್ಟು ಜನರಿಗೆ ಕೆಲಸ ನೀಡಿದೆ’ ಎಂದು ಪ್ರಶ್ನಿಸಿದರು.

‘153 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷಕ್ಕೆ ಯಾರದ್ದೋ ಚಿಂತನಾ ಬೈಠಕ್‌ ಕಾಪಿ ಹೊಡೆಯುವ ಅಗತ್ಯವಿಲ್ಲ. ನಮ್ಮ ಕಾರ್ಯಕ್ರಮಗಳನ್ನು ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳು ಕಾಪಿ ಮಾಡಿವೆ’ ಎಂದರು.

‘ಕೆಲಸ ಮಾಡದ ಪಾಲಿಕೆ ಸದಸ್ಯರ ಕುತ್ತಿಗೆ ಹಿಡಿದು ಕೇಳಿ ಎಂದು ಸಂಸದ ಪ್ರಸಾಪಸಿಂಹ ದರ್ಪ ತೋರಿದ್ದಾರೆ. ಪಾಲಿಕೆ ಸದಸ್ಯರೂ ಸಹ ನಿಮ್ಮಂತೆ ಜನಪ್ರತಿನಿಧಿಗಳಲ್ಲವೇ? ಅವರಿಗೆ ಸರ್ಕಾರ ಸರಿಯಾದ ಅನುದಾನ ನೀಡಿದರೆ ತಾನೆ ಕೆಲಸಗಳನ್ನು ಮಾಡಿಸಲು ಸಾಧ್ಯ? ನೀವು ಮೈಸೂರು ಕ್ಷೇತ್ರಕ್ಕೆ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದೀರಿ? 5 ರೂಪಾಯಿ ಸಹ ತಂದಿಲ್ಲ’ ಎಂದು ಕಿಡಿಕಾರಿದರು.

‘ಭಯೋತ್ಪಾದನೆ ಮಾದರಿ ದಾಳಿಗೆ ಸಂಚು’

‘ಕೊಡಗಿನ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಕಳೆದ ವಾರ ನಡೆದ ‘ಶೌರ್ಯ ಪ್ರಶಿಕ್ಷಣ ವರ್ಗ’ದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ದೀಕ್ಷೆ ನೀಡುವ ಮೂಲಕ ರಾಜ್ಯದಲ್ಲಿ ಭಯೋತ್ಪಾದನೆ ಮಾದರಿಯಲ್ಲಿ ದಾಳಿ ನಡೆಸಲು ಷಡ್ಯಂತ್ರ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸಿ, ಇದು ಪಾಕಿಸ್ತಾನಿ ಉಗ್ರಗಾಮಿ ಹಾಗೂ ಮುಸ್ಲಿಮರ ಸಂಚು ಎಂದು ಬಿಂಬಿಸಲು ಬಿಜೆಪಿ ಹುನ್ನಾರ ನಡೆಸಿದೆ’ ಎಂದು ಎಂ.ಲಕ್ಷ್ಮಣ್‌ ಆರೋಪಿಸಿದರು.

‘ಊಟ ವಿತರಣೆ: ಕೋಟ್ಯಂತರ ರೂಪಾಯಿ ಅಕ್ರಮ’

‘ಕೊರೊನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ಪೂರೈಸುವ ಉದ್ದೇಶದಿಂದ ನಾಲ್ಕು ಬೋಗಸ್‌ ಹೋಟೆಲ್‌ಗಳಿಗೆ ಟೆಂಡರ್‌ ನೀಡಲಾಗಿತ್ತು. ಇವು ಬಿಜೆಪಿಯ ಸತೀಶ್‌ ರೆಡ್ಡಿ, ಅರವಿಂದ ಲಿಂಬಾವಳಿ ಸಂಬಂಧಿಕರಿಗೆ ಸೇರಿದವು. ಸುಳ್ಳು ಬಿಲ್‌ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಕಬಳಿಸಲಾಗಿದೆ’ ಎಂದು ಎಂ.ಲಕ್ಷ್ಮಣ್‌ ಆರೋಪಿಸಿದರು.

ನಳಿನ್‌ ಕುಮಾರ್‌ ಕಟೀಲ್‌ ಅವರ ನಾಲಿಗೆ ಹಾಗೂ ಮಿದುಳಿಗೆ ಸಂಪರ್ಕವೇ ಇಲ್ಲ ಎನಿಸುತ್ತಿದೆ. ಹುಚ್ಚನಂತೆ ಏನೇನೋ ಮಾತನಾಡುತ್ತಾರೆ.

- ಎಂ.ಲಕ್ಷ್ಮಣ್‌, ಕೆಪಿಸಿಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.