ADVERTISEMENT

ಐಎಂಎ ವಂಚನೆ ಬೀದಿಗೆ ಬಿದ್ದ ಬೀಡಿ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:34 IST
Last Updated 16 ಜೂನ್ 2019, 20:34 IST

ಹೊಳೆನರಸೀಪುರ: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಅಧಿಕ ಬಡ್ಡಿ ಆಮಿಷಕ್ಕೆ ಹಣ ಹೂಡಿಕೆ ಮಾಡಿದ ಹಲವರು ಬೀದಿಗೆ ಬಿದ್ದಿದ್ದಾರೆ.

ತಾಲ್ಲೂಕಿನ ಬಡ ಬೀಡಿ ಕಾರ್ಮಿಕರು, ಹಪ್ಪಳ ತಯಾರಕರು, ಆಟೋ ಚಾಲಕರು, ಗುಜರಿ ಅಂಗಡಿ ನಡೆಸುವವರು, ತಳ್ಳುಗಾಡಿಯಲ್ಲಿ ಹಣ್ಣು ಮಾರುವವರು, ಸಣ್ಣಪುಟ್ಟ ಅಂಗಡಿಗಳ ಮಾಲೀಕರು ಸೇರಿದಂತೆ ಪಟ್ಟಣದ ಬಸವನಗುಡಿ ಬೀದಿ, ಬಡಾ ಮೊಹಲ್ಲಾ, ರಿವರ್‌ ಬ್ಯಾಂಕ್‌ ರಸ್ತೆಯ ನೂರಾರು ಜನರು ಕಂಪನಿಯಲ್ಲಿ ಹಣ ತೊಡಗಿಸಿದ್ದಾರೆ. ಈ ಮೊತ್ತ ಮೂರು ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಪಟ್ಟಣದ ಹಾಜಿರಾ ₹ 2.5 ಲಕ್ಷ, ಮುಸವೀರ್‌ ಪಾಷಾ ₹ 2.5 ಲಕ್ಷ, ಶಾಖಿರಾ ಬಾನು ₹ 2 ಲಕ್ಷ, ನಜೀರ್‌ ₹ 4 ಲಕ್ಷ, ಸಬೀಹಾ ₹ 4.5 ಲಕ್ಷ, ನಫೀಜಾ ₹ 1.5 ಲಕ್ಷ, ಖಮರ್‌ ಜಹಾ ₹ 13 ಲಕ್ಷ, ನಸೀರ್‌, ತೌಸಿಕ್‌, ಫಾತಿಮಾ ಹಾಗೂ ಕುಟುಂಬದ ಇತರೆ ಸದಸ್ಯರಿಂದ ₹ 75 ಲಕ್ಷ, ರಹಿನಾ ಕುಟುಂಬವರಿಂದ ₹ 70 ಲಕ್ಷ, ಸಹೀದ್‌ ₹ 4 ಲಕ್ಷ, ಅಬ್ದುಲ್‌ ರಬ್‌ ₹ 10 ಲಕ್ಷ, ನೂರುಲ್ಲಾ ₹ 12 ಲಕ್ಷ, ತನ್ನು ₹ 2.5 ಲಕ್ಷ, ಸೇರಿದಂತೆ 70 ಕ್ಕೂ ಹೆಚ್ಚು ಜನರು ಹಣ ತೊಡಗಿಸಿದ್ದಾರೆ.

ADVERTISEMENT

ಈ ಎಲ್ಲರೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಹಣ ಹೂಡಿಕೆ ಮಾಡಿರುವ ವಿವರ ಲಗತ್ತಿಸಿದ್ದಾರೆ.

ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪುರಸಭೆ ಮಾಜಿ ಸದಸ್ಯ ಮುಜಾಹಿದ್‌, ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ ಪೊಲೀಸರಿಗೆ ದೂರು ಕೊಡಿಸಿದ್ದಾರೆ.

‘ಮಹಿಳೆಯೊಬ್ಬರಿಗೆ ಪತಿ ಸಾವಿನ ನಂತರ ₹ 4.5 ಲಕ್ಷ ವಿಮೆ ಬಂದಿತ್ತು. ಈ ಹಣವನ್ನು ಕಂಪನಿಯಲ್ಲಿ ತೊಡಗಿಸಿ ಹಣ ಕಳೆದು ಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.