
ಮೈಸೂರು: ‘ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ಕಳೆದುಕೊಂಡ ಅರ್ಹ ರೈತರಿಗೆ ಪರಿಹಾರ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಉದ್ಯಮಿಗಳ ಸಭೆ ನಡೆಸಿದ ಅವರು, ‘ಬೋಗಸ್ ಇದ್ದವರನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಬೇಕು. ಅವರಿಗೆ ಪರಿಹಾರ ಕೊಡಬಾರದು. ಹಂಚಿಕೆಯಲ್ಲಿ ಲೋಪ ಎಸಗಿದ್ದಾರೆ ಎಂಬ ದೂರು ಕೇಳಿಬಂದಿರುವುದರಿಂದ ಅಲ್ಲಿನ ತಹಶೀಲ್ದಾರ್‌ಗೆ ತನಿಖೆಯ ಜವಾಬ್ದಾರಿ ಕೊಡಬಾರದು’ ಎಂದು ನಿರ್ದೇಶನ ನೀಡಿದರು.
ರೈತರ ಒತ್ತಾಯಕ್ಕೆ ಸ್ಪಂದಿಸಿದ ಅವರು, ‘ಆ ತಹಶೀಲ್ದಾರ್ ವರ್ಗಾವಣೆ ಅಥವಾ ಕ್ರಮ ಕೈಗೊಳ್ಳುವುದು ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಕಂದಾಯ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಭರವಸೆ ನೀಡಿದರು.
ಎರಡು ತಿಂಗಳಿಗಾದರೂ ನಡೆಸಿ:
‘ಜಿಲ್ಲಾ ಮಟ್ಟದ ಏಕಗವಾಕ್ಷಿ ಏಜೆನ್ಸಿ ಸಭೆಯನ್ನು ಕನಿಷ್ಠ ಎರಡು ತಿಂಗಳಿಗೊಮ್ಮೆ ನಡೆಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಈ ಹಂತದಲ್ಲೇ ಬಗೆಹರಿಸಿದರೆ ನಮ್ಮವರೆಗೆ ಬರುವುದಿಲ್ಲ. ತಕ್ಷಣವೇ ಹಣ ಕೊಡಿಸುವುದಕ್ಕೆ ಅದೇನು ಜೆರಾಕ್ಸ್ ಯಂತ್ರದಿಂದ ಆಗುವಂಥದ್ದಲ್ಲ; ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಮ್ಮಾವು ಪ್ರದೇಶದ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಹೇಳಿದರು.
‘ಮಣಿಪಾಲ್ ಆಸ್ಪತ್ರೆ ಬಳಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಎನ್ಎಚ್ಎಐನಿಂದ ಮಂಜೂರಾತಿ ಸಿಕ್ಕಿದೆ’ ಎಂದರು.
ಕಡಕೊಳ, ತಾಂಡ್ಯ ಕೈಗಾರಿಕಾ ಪ್ರದೇಶದ ರಾಮಕೃಷ್ಣೇಗೌಡ ಮಾತನಾಡಿ, ‘ಬಂಡವಾಳ ಹೂಡಿದವರಿಗೆ ಕಟ್ಟಡ ಕಟ್ಟಲು ಅವಕಾಶ ಕೊಡುತ್ತಿಲ್ಲ. ರಕ್ಷಣೆ ದೊರೆಯುತ್ತಿಲ್ಲ. ಈಗಾಗಲೇ ಮೂರು ವರ್ಷ ವ್ಯರ್ಥವಾಗಿದೆ. ಆದ್ದರಿಂದ ಇಮ್ಮಾವು ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಯ ಅವಧಿಯನ್ನು ಮತ್ತೆ ಮೂರು ವರ್ಷಗಳಿಗೆ ವಿಸ್ತರಣೆ ಮಾಡಬೇಕು’ ಎಂದು ಕೋರಿದರು.
ಪರಿಹಾರ ಕೊಡಿ:
ತ್ರಿವೇಣಿ ಇಂಡಸ್ಟ್ರೀಸ್ ಪ್ರತಿನಿಧಿ ರಾಜಾ, ‘ಇಮ್ಮಾವು ರೈತರ ಸಮಸ್ಯೆ ನಿವಾರಿಸಿಲ್ಲ. ಇದರಿಂದಾಗಿ ನಾವು ಕಟ್ಟಡ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಪರಿಹಾರ ಬಿಡುಗಡೆ ಮಾಡಿ ನಾವು ಕೈಗಾರಿಕೆ ಆರಂಭಿಸಲು ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಪತ್ರಿಕೋದ್ಯಮಿ ರವಿ ಕೋಟಿ ಮಾತನಾಡಿ, ‘ಮೈಸೂರು ಪ್ರಿಂಟರ್ಸ್ ಕ್ಲಸ್ಟರ್ 15 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ತ್ವರಿತವಾಗಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.
ದಲಿತ ಮುಖಂಡ ಕೂಡ್ಲೂರು ಶ್ರೀನಿವಾಸಮೂರ್ತಿ, ‘ಮಂಜೂರಾತಿ ಆದೇಶ ನೀಡಿದ್ದರೂ ನಮಗೆ ಈವರೆಗೂ ನಿವೇಶನ ಕೊಟ್ಟಿಲ್ಲ’ ಎಂದು ತಿಳಿಸಿದರು. ಇದನ್ನು ಪರಿಶೀಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಿ:
ಮುಖಂಡ ಯಡತೊರೆ ನಿಂಗರಾಜ್, ‘ಇಮ್ಮಾವು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನುಗಳ ರೈತರಲ್ಲಿ 50 ಮಂದಿಗೆ ಪರಿಹಾರ ಕೊಟ್ಟಿಲ್ಲ. ಪರಿಹಾರವನ್ನು ತಹಶೀಲ್ದಾರ್ ಮೂಲಕ ಕೊಡುವ ಬದಲಿಗೆ ಇಲಾಖೆಯಿಂದಲೇ ನೀಡಬೇಕು. ರೈತರಿಗೆ ಉದ್ಯೋಗ ಹಾಗೂ ನಿವೇಶನ ಒದಗಿಸಬೇಕು’ ಎಂದು ಕೋರಿದರು.
ದನಿಗೂಡಿಸಿದ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊಸಕೋಟೆ ಬಸವರಾಜು, ‘ಇಮ್ಮಾವು ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಈವರೆಗೂ ಪರಿಹಾರ ಪಾವತಿಸಿಲ್ಲ. ನಿಜವಾದ ರೈತರಿಗೆ ಪರಿಹಾರ ಕೊಟ್ಟಿಲ್ಲ. ಇದಕ್ಕೆ ಕಾರಣವಾದ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ವಿಶ್ವನಾಥ್, ‘ನಗರದ ರಫ್ತು ಕೇಂದ್ರಕ್ಕೆ ₹ 2 ಕೋಟಿ ಅನುದಾನ ಒದಗಿಸಬೇಕು’ ಎಂದು ಕೋರಿದರು.
ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್, ‘ಕೈಗಾರಿಕಾ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್, ಟ್ರಕ್ ಟರ್ಮಿನಲ್ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.
ಉದ್ಯಮಿಗಳಾದ ಚನ್ನಕೇಶವ, ಸತೀಶ್ ಎ.ಎಸ್. ಮಾತನಾಡಿದರು. ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಇಲಾಖೆಯ ಪ್ರಧಾನ ಎಸ್. ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಮಹೇಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಪಾಲ್ಗೊಂಡಿದ್ದರು.
ಭೂಸ್ವಾಧೀನಕ್ಕೆ ಬೇಡಿಕೆ!
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ಅಡಕನಹಳ್ಳಿಯಲ್ಲಿ 76 ಎಕರೆ ಸರ್ಕಾರಿ ಜಾಗವನ್ನು
ಕೆಐಎಡಿಬಿಗೆ ಹಸ್ತಾಂತರಿಸಬೇಕು. ಹಿಂದುಳಿದ ತಾಲ್ಲೂಕುಗಳಾದ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ, ಚಾಮರಾಜನಗರ ಜಿಲ್ಲೆಯ ಹನೂರು ಹಾಗೂ ಕೊಳ್ಳೇಗಾಲದಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಬೇಕು. ಅಲ್ಲಿ ಕೈಗಾರಿಕೆಗಳು ಬಂದರೆ ನಿರುದ್ಯೋಗ ನಿವಾರಣೆಗೆ ಸಹಕಾರಿ ಆಗುತ್ತದೆ’ ಎಂದು ಕೋರಿದರು.
ಸ್ಪಂದಿಸಿದ ಸಚಿವರು, ‘ಅಲ್ಲಿನ ರೈತರಿಂದ ಸಮಸ್ಯೆ ಇಲ್ಲವೆಂದರೆ ಭೂಸ್ವಾಧೀನಕ್ಕೆ ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.
ಇಲಾಖೆಯಲ್ಲಿದ್ದಾಗ ಮಾಡಲ್ಲ!
ಪ್ರಸ್ತುತ ಕಡಕೊಳ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ, ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ರಾಮಕೃಷ್ಣೇಗೌಡ ಅವರ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ‘ಇಲಾಖೆಯಲ್ಲಿದ್ದಾಗ ಕೆಲಸ ಮಾಡಲ್ಲ. ಈಗ ಮಾಡಿ ಎಂದು ನಮಗೆ ಹೇಳುತ್ತೀರಾ, ಬಯಸುತ್ತೀರಾ?’ ಎಂದು ಕೇಳಿದಾಗ ಸಭೆಯಲ್ಲಿ ನಗೆಯ ಹೊನಲು ಹರಡಿತು.
ಸಮಸ್ಯೆ ಬಗೆಹರಿಸಿ...
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ‘ನಗರದ ಕೈಗಾರಿಕಾ ಪ್ರದೇಶಗಳ ರಸ್ತೆಗಳು ಹಾಳಾಗಿವೆ. ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಆಗಿಲ್ಲ. ಚರಂಡಿಗಳನ್ನೂ ನಿರ್ಮಿಸಿಲ್ಲ. ನಾವು ಕೆಲವೇ ದಿನಗಳಲ್ಲಿ ಬಂದ್ ನಡೆಸಲು ಉದ್ದೇಶಿಸಿದ್ದೆವು. 2013ರಲ್ಲಿ ಹಣ ಕಟ್ಟಿರುವವರಿಗೆ ಈವರೆಗೂ ನಿವೇಶನ ಕೊಟ್ಟಿಲ್ಲ. ಹೆಬ್ಬಾಳ ಕೈಗಾರಿಕಾ ಪ್ರದೇಶಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಲ್ಲಿ ತಾತ್ಸಾರ ತೋರಲಾಗಿದೆ. ಈ ಸಮಸ್ಯೆಗಳನ್ನು ನಿವಾರಿಸಬೇಕು. ಮಣಿಪಾಲ್ ಆಸ್ಪತ್ರೆ ಬಳಿ ಮೇಲ್ಸೇತುವೆ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.