ಮೈಸೂರು: ಬೇಸಿಗೆಯಲ್ಲಿ ಒಣಗಿರುವ, ಮಳೆಗಾಲದಲ್ಲಿ ತುಂಬಿರುವ ‘ಉಂಡಬತ್ತಿ’ ಕೆರೆಗೆ ನಗರೀಕರಣದ ಬಿಸಿ ತಟ್ಟುವ ಪರಿಸ್ಥಿತಿ ಎದುರಾಗಿದೆ. ಕೆರೆಯ ಒಡಲಿನಲ್ಲಿನ ಕೆಂಪು ಮಣ್ಣನ್ನು ದಶಕಗಳಿಂದ ಬಗೆಯಲಾಗಿದೆ. ಹೀಗಾಗಿಯೇ ಕೆರೆಯಲ್ಲಿ ಬಹುದಿನ ನೀರು ನಿಲ್ಲದೇ ಬತ್ತಿ ಹೋಗುತ್ತದೆ.
ಕೆರೆಯ ಜಲಾನಯನ ಪ್ರದೇಶ ಇರುವುದು ಕೇವಲ 2.26 ಚದರ ಕಿ.ಮೀ. ಇದರಿಂದ ವರ್ಷದ ಬಹುಕಾಲ ನೀರಿಲ್ಲದೇ ಸೊರಗಿರುತ್ತದೆ. ಇದಕ್ಕೆ ಮೇಲಿನ ಕೆರೆಗಳ ಜಾಲವಿಲ್ಲ. ವರುಣ ಕಾಲುವೆಯಿಂದ ಗದ್ದೆ– ತೋಟಗಳಲ್ಲಿ ಬಸಿದು ಬಂದ ನೀರೇ ಕೆರೆಗೆ ಸೇರುತ್ತದೆ.
29.33 ಎಕರೆ ವಿಸ್ತೀರ್ಣದ ಕೆರೆಯು, ಮರಸೆ ಹಾಗೂ ಮಾದರಗಳ್ಳಿ ಗ್ರಾಮಗಳ ಗಡಿಗಳನ್ನು ಹಂಚಿಕೊಂಡಿದೆ. ಮರಸೆ ಗ್ರಾಮದ ಸರ್ವೆ ಸಂಖ್ಯೆ 95 ಹಾಗೂ ಮಾದರಗಳ್ಳಿಯ ಸರ್ವೆ ಸಂಖ್ಯೆ 10ರಲ್ಲಿ ಕೆರೆಯು ವ್ಯಾಪಿಸಿದೆ. ಈ ಗ್ರಾಮಗಳಲ್ಲಿ ಹೊಸ ಜನವಸತಿ ನಿರ್ಮಾಣ ಆಗುತ್ತಿರುವುದರಿಂದ ಸಂಕ್ಷರಣೆಗೆ ಎಚ್ಚರಿಕೆ ವಹಿಸುವುದೂ ಅಗತ್ಯವಾಗಿದೆ.
ಭವಿಷ್ಯದಲ್ಲಿ ಕಟ್ಟಡ ತ್ಯಾಜ್ಯ ತುಂಬುವ ತಾಣವಾಗಲಿದ್ದು, ಉಂಡಬತ್ತಿ ಶಾಶ್ವತವಾಗಿ ಬತ್ತುವ ಆತಂಕವೂ ಇದೆ.
ಪೂರ್ವ ದಿಕ್ಕಿಗೆ ಮೈಸೂರು– ನೀಲಗಿರಿ ರಸ್ತೆಗೆ ಹೊಂದಿಕೊಂಡಿರುವ ಈ ಕೆರೆಯ ಉತ್ತರ ಭಾಗದಲ್ಲಿ ಮೈಸೂರು ವಿಮಾನ ನಿಲ್ದಾಣವೂ ಇದೆ. ಏರ್‌ಪೋರ್ಟ್ ಸುತ್ತಮುತ್ತ ಐದು ವರ್ಷಗಳಿಂದ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ನಿವೇಶನ, ಮನೆ ಖರೀದಿಸುವವರು ಹೆಚ್ಚಾಗಿದ್ದಾರೆ. ಈ ಬಡಾವಣೆಗಳ ಚರಂಡಿ ನೀರು ಉಂಡಬತ್ತಿ ಕೆರೆಯತ್ತ ಹರಿಯುವುದು ನಿಶ್ಚಿತ.
ಕೆರೆಯ ದಕ್ಷಿಣ ಭಾಗದ ಸ್ವಲ್ಪ ದೂರದಲ್ಲಿ ದಡದಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿದ್ದು, ಅದಕ್ಕೆ ಹೊಂದಿಕೊಂಡಂತೆ ಹೊಸ ಬಡಾವಣೆ ನಿರ್ಮಾಣವಾಗುತ್ತಿವೆ. ಕೆರೆಯ ನೈರುತ್ಯ ಭಾಗದಲ್ಲಿ ತೆಂಗಿನ ತೋಟಗಳಿವೆ. ಪಶ್ಚಿಮ ಭಾಗದಲ್ಲಿ ಕೃಷಿಕರಿಂದ ಒತ್ತುವರಿಯೂ ನಡೆದಿದೆ. ಕೆರೆಯಂಚು ಪ್ಲಾಸ್ಟಿಕ್, ಕಟ್ಟಡ ತ್ಯಾಜ್ಯ ಸುರಿಯುವ ತಾಣವಾಗುತ್ತಿದೆ.
ಮೈಸೂರು– ನೀಲಗಿರಿ ರಸ್ತೆಯಲ್ಲಿ ತೆರಳುವವರು ಆಕಸ್ಮಿಕ ಬಿದ್ದು ಇಲ್ಲಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ ಕೆರೆ ಏರಿಗೆ ಕಬ್ಬಿಣದ ತಡೆ ಬೇಲಿ ಹಾಕಲಾಗಿದೆ.
‘ಕೆರೆಗಳ ಜಾಲದಲ್ಲಿಲ್ಲದ ಸ್ವತಂತ್ರ ಕೆರೆಯಾಗಿದೆ. ಹೀಗಾಗಿ ಮೇಲಿನ ಕೆರೆಗಳ ಹೆಚ್ಚುವರಿ ನೀರು ಇಲ್ಲಿಗೆ ಹರಿಯುವುದಿಲ್ಲ. ಹೀಗಾಗಿಯೇ ವರ್ಷದಲ್ಲಿ ಕೆಲ ತಿಂಗಳು ಮಾತ್ರ ಈ ಕೆರೆ ತುಂಬಿರುತ್ತದೆ. ಅಂತರ್ಜಲ ಹೆಚ್ಚಿಸುವಲ್ಲಿ ಕೆರೆಯ ಪಾತ್ರ ನಿರ್ಣಾಯಕ. ಹೀಗಾಗಿ ಇದನ್ನೂ ಉಳಿಸಿಕೊಳ್ಳಬೇಕು’ ಎಂದು ಪರಿಸರ ತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಡುವ ಕರಾಳ ನೆನಪು
ಯಾವಾಗಲೂ ಬತ್ತಿರುವ ಕೆರೆ ವರ್ಷಾಂತ್ಯದಲ್ಲಿ ತುಂಬಿರುತ್ತದೆ. 2010ರ ಡಿ.14ರಂದು ತುಂಬಿದ್ದ ಇದೇ ಕೆರೆಗೆ ಮಾಕ್ಸಿಕ್ಯಾಬ್ ಉರುಳಿ ಬಿದ್ದು 31 ಮಂದಿ ಮೃತಪಟ್ಟಿದ್ದರು. ಬೀಗರ ಔತಣಕೂಟ ಮುಗಿಸಿಕೊಂಡು ನಂಜನಗೂಡಿನಿಂದ ಪಾಂಡವಪುರ ತಾಲ್ಲೂಕಿನ ಅರಳುಕುಪ್ಪೆ ಗ್ರಾಮಕ್ಕೆ 40 ಮಂದಿ ಮ್ಯಾಕ್ಸಿಕ್ಯಾಬ್‌ನಲ್ಲಿ ಮರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ವಾಹನ ಉಂಡಬತ್ತಿ ಕೆರೆಗೆ ಉರುಳಿತ್ತು. 26 ಮಹಿಳೆಯರು 4 ಮಕ್ಕಳು ಮತ್ತು ಒಬ್ಬ ಪುರುಷ ಜಲಸಮಾಧಿಯಾಗಿದ್ದರು. ಆಗಾಗ್ಗೆ ಇಲ್ಲಿ ಅವಘಡಗಳು ನಡೆಯುತ್ತಲೇ ಇರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.