ADVERTISEMENT

ನಗರದಲ್ಲಿ ಕಳೆಗಟ್ಟಿತು ಬೆಳಕಿನ ಹಬ್ಬ

ಅಮಾವಾಸ್ಯೆ ಪೂಜೆ, ಲಕ್ಷ್ಮೀ ಪೂಜೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 4:43 IST
Last Updated 16 ನವೆಂಬರ್ 2020, 4:43 IST
ಮೈಸೂರಿನ ಜೆ.ಕೆ.ಮೈದಾನದಲ್ಲಿ ಭಾನುವಾರ ಸಾರ್ವಜನಿಕರು ಪಟಾಕಿ ಖರೀದಿಸಿದರು
ಮೈಸೂರಿನ ಜೆ.ಕೆ.ಮೈದಾನದಲ್ಲಿ ಭಾನುವಾರ ಸಾರ್ವಜನಿಕರು ಪಟಾಕಿ ಖರೀದಿಸಿದರು   

ಮೈಸೂರು: ಬಲಿಪಾಡ್ಯಮಿಯ ಮುನ್ನಾ ದಿನವಾದ ಭಾನುವಾರ ದೀಪಾವಳಿಯ ಸಂಭ್ರಮ ನಗರದಲ್ಲಿ ಕಳೆಗಟ್ಟಿತು. ಅಮಾವಾಸ್ಯೆಪೂಜೆ, ಲಕ್ಷ್ಮೀಪೂಜೆಗಳು ಸಾಂಗವಾಗಿ ನೆರವೇರಿದವು. ಹಬ್ಬಕ್ಕೆ ಬೇಕಾದ ತಯಾರಿಯಲ್ಲಿ ಸಾರ್ವಜನಿಕರು ಮಗ್ನರಾದರು.‌

ದೀಪಗಳ ಖರೀದಿ ಭರಾಟೆ ಜೋರಾಗಿ ನಡೆಯಿತು. 4 ದೀಪಗಳಿಗೆ ₹ 10ರಿಂದ ಬೆಲೆಆರಂಭವಾಗಿತ್ತು. ₹ 200 ದಾಟಿದ ದೀಪಗಳೂ ಮಾರುಕಟ್ಟೆಯಲ್ಲಿದ್ದವು. ಮಣ್ಣು ಮತ್ತು ಪಿಂಗಾಣಿ ಹಣತೆಗಳು ಸಾಕಷ್ಟು ಮಾರಾಟವಾದವು. ಇದಕ್ಕೆ ಪ್ಲಾಸ್ಟಿಕ್‌ ಹಾಗೂ ಮೇಣದ ದೀಪಗಳು ತೀವ್ರ ಪೈಪೋಟಿ ಒಡ್ಡಿದವು.

ಚಿಮಣಿ ದೀಪಗಳು, ವಿವಿಧ ಬಗೆಯ ವಿನ್ಯಾಸಗಳ ಹಣತೆಗಳು ಗ್ರಾಹಕರ ಮನ ಗೆದ್ದವು. ದೇವರಾಜ ಮಾರುಕಟ್ಟೆ, ನಂಜು
ಮಳಿಗೆ, ಅಗ್ರಹಾರ ಸೇರಿದಂತೆ ಅನೇಕ ಕಡೆ ದೀಪಗಳ ಮಾರಾಟ ಜೋರಾಗಿತ್ತು.

ADVERTISEMENT

ಮಾವಿನತೋರಣ ಹಾಗೂ ಬಾಳೆಕಂದುಗಳ ಮೂಲಕ ಹಲವು ದೇಗುಲಗಳನ್ನು ಸಿಂಗರಿಸಲಾಗಿತ್ತು. ವಿಶೇಷವಾಗಿ ನಗರದಲ್ಲಿರುವ ಎಲ್ಲ ಮಹದೇಶ್ವರ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಸಿದ್ದಪ್ಪ ಚೌಕ, ಹೊಸಕೇರಿ, ಲಷ್ಕರ್ ಮೊಹಲ್ಲಾ, ನಾರಾಯಣಶಾಸ್ತ್ರಿ ರಸ್ತೆಗಳಲ್ಲಿರುವ ಮಹದೇಶ್ವರ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು.

ನಿಷೇಧದ ನಡುವೆಯೂ ಮೊಳಗಿದ ಪಟಾಕಿ ಸದ್ದು: ಪಟಾಕಿ ಖರೀದಿಗೆ ಭಾನುವಾರವೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜೆ.ಕೆ.ಮೈದಾನದೆಡೆಗೆ ಬಂದಿದ್ದರು. ಹಸಿರು ಪಟಾಕಿಗಳನ್ನೇ ಮಾರಾಟಕ್ಕೆ ಇಡಲಾಗಿತ್ತು. ಮಕ್ಕಳು, ಯುವಕರು ಸಂಜೆಯ ನಂತರ ಪಟಾಕಿ ಹೊಡೆದು ಸಂಭ್ರಮಿಸಿದರು.

ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಹಸಿರು ಪಟಾಕಿ ಬಿಟ್ಟು ಇತರೆ ಪಟಾಕಿಗಳನ್ನು ನಿಷೇಧಿಸಿದ್ದರೂ ನಗರದ ಅಲ್ಲಲ್ಲಿ ಪಟಾಕಿಗಳ ಮೊರೆತ ಜೋರಾಗಿಯೇ ಕೇಳಿ ಬಂದಿತು. ರಾತ್ರಿ ವೇಳೆ ಪಟಾಕಿಗಳು ಅಗ್ರಹಾರದಲ್ಲಿ ಆರ್ಭಟಿಸಿದವು. ಆದರೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿತ್ತು. ಹೋದ ವರ್ಷ ಮನೆಯಲ್ಲಿ ಉಳಿದ ಪಟಾಕಿಗಳನ್ನು ಕೆಲವರು ಹೊಡೆದರೆ, ಮತ್ತೆ ಕೆಲವರು ತಿಂಗಳಿಗೂ ಮುಂಚಿತವಾಗಿಯೇ ಶಿವಕಾಸಿಯಿಂದ ಖರೀದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.