ADVERTISEMENT

ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದ ಸುಗ್ಗಿ ಹಬ್ಬ

ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ರಂಗವಲ್ಲಿ ಬಿಡಿಸಿ ಸಂಭ್ರಮಿಸಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 3:37 IST
Last Updated 15 ಜನವರಿ 2021, 3:37 IST
ನಗರದ ರಾಮಚಂದ್ರಾಪುರ ಮಠದ ಭಾರತೀಯ ಗೋ ಪರಿವಾರದ ಮೈಸೂರು ವಲಯದ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಭತ್ತದ ಕಣಕ್ಕೆ ಪೂಜೆ ಸಲ್ಲಿಸಲಾಯಿತು
ನಗರದ ರಾಮಚಂದ್ರಾಪುರ ಮಠದ ಭಾರತೀಯ ಗೋ ಪರಿವಾರದ ಮೈಸೂರು ವಲಯದ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಭತ್ತದ ಕಣಕ್ಕೆ ಪೂಜೆ ಸಲ್ಲಿಸಲಾಯಿತು   

ಮೈಸೂರು: ನಗರದಲ್ಲಿ ಗುರುವಾರ ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಜನರು ಸಂಭ್ರಮದಿಂದ ಆಚರಿಸಿದರು.

ಹೆಂಗಳೆಯರು ಮನೆಯ ಮುಂದಿನ ಅಂಗಳವನ್ನು ಸ್ವಚ್ಛಗೊಳಿಸಿ ಬಣ್ಣ ಬಣ್ಣದ ರಂಗವಲ್ಲಿಗಳನ್ನು ರಚಿಸುವ ಮೂಲಕ ಹಬ್ಬಕ್ಕೊಂದು ಮುನ್ನುಡಿಯನ್ನು ನಸುಕಿನಲ್ಲೇ ಹಾಕಿಕೊಟ್ಟರು. ಸಂಕ್ರಾಂತಿಯ ಶುಭಾಶಯ ಎಂದು ರಂಗೋಲಿಯಲ್ಲೇ ಬರೆಯುವ ಮೂಲಕ ಶುಭ ಕೋರಿದ ಅವರು, ಪಥ ಬದಲಿಸಿದ ಸೂರ್ಯನಿಗೆ ಸ್ವಾಗತ ಕೋರಿದರು.

ರಂಗೋಲಿಯ ಜತೆಗೆ ಮನೆಗೆ ಮಾವಿನ ತೋರಣ ಕಟ್ಟಿ ಸಿಂಗರಿಸಿದರು. ಸಿಹಿ ಪೊಂಗಲ್‌, ಎಳ್ಳು, ಬೆಲ್ಲದ ಮಿಶ್ರಣಗಳನ್ನು ದೇವರಿಗೆ ನೈವೇದ್ಯ ಮಾಡಿದರು.

ADVERTISEMENT

ದೇಗುಲಗಳಲ್ಲಿ ಸೂರ್ಯೋದಯದ ಹೊತ್ತಿಗೆ ಅರ್ಚಕರು ಅಗತ್ಯ ಸಿದ್ಧತಾ ಕಾರ್ಯ ನಡೆಸಿ, ವಿಶೇಷ ಪೂಜಾ ಕೈಂಕರ್ಯಗಳಿಗೆ ಅಣಿಯಾದರು. ಮಧ್ಯಾಹ್ನದವರೆಗೂ ನಿರಂತರವಾಗಿ ಪೂಜಾ ಕೈಂಕರ್ಯಗಳು ಸಾಗಿದವು.

ಎಲ್ಲೆಡೆ ಸಂಜೆಯ ಹೊತ್ತಿಗೆ ಎಳ್ಳು ಬೀರುವಿಕೆ ಕಂಡು ಬಂತು. ದ್ವಿಚಕ್ರ ವಾಹನಗಳಲ್ಲಿ, ಕಾರುಗಳಲ್ಲಿ ದೂರದಲ್ಲಿ ನೆಲೆಸಿರುವ ನೆಂಟರಿಷ್ಟರಿಗೆ, ಸ್ನೇಹಿತರ ಮನೆಗಳಿಗೆ ಕೆಲವರು ತೆರಳಿದರೆ, ಸಮೀಪವೇ ಇದ್ದ ಮನೆಗಳಿಗೆ ನಡೆದುಕೊಂಡೇ ಎಳ್ಳುಬೀರಿ ಸಂಭ್ರಮಿಸಿದರು. ಎಳ್ಳು ಬೆಲ್ಲದ ಜತೆಗೆ ವೀಳ್ಯದೆಲೆ, ಹೂ, ಕಬ್ಬು, ಬಾಳೆಹಣ್ಣುಗಳನ್ನು ನೀಡಿ ಶುಭಾಶಯ ಕೋರಿದರು.

ಅಗ್ರಹಾರ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಗೋಪಾಲಕರು ತಮ್ಮತಮ್ಮ ಗೋವುಗಳನ್ನು ವಿಶೇಷವಾಗಿ ಸಿಂಗರಿಸಿದ್ದರು. ಕೆಲವರು ಮೈಗೆಲ್ಲ ಅರಿಸಿನ ಬಳಿದಿದ್ದರೆ, ಮತ್ತೆ ಕೆಲವರು ಗೋವುಗಳ ಕಣ್ಣಿನ ಸುತ್ತ ಚಿತ್ರಾಲಂಕಾರ ಮಾಡಿದ್ದರು. ಕೆಲವು ಗೋವುಗಳ ಕೊಂಬುಗಳಿಗೆ ಹೂವುಗಳು, ಬಣ್ಣದ ಕಾಗದಗಳ ಮೂಲಕ ವಿಶೇಷವಾಗಿ ಅಲಂಕರಿಸಲಾಗಿತ್ತು. ಗೋವುಗಳ ಕೊರಳಿಗೆ ಹೊಸ ಘಂಟೆಯನ್ನು ಕಟ್ಟಿದ್ದರು. ಗೋವುಗಳಿಗೆ ನೇವೇದ್ಯ ಅರ್ಪಿಸುವ ಮೂಲಕ ಭಕ್ತಿಭಾವ ಮೆರೆಯಲಾಯಿತು.

ಸಿದ್ಧಿ ವಿನಾಯಕ ಸೇವಾ ಸಮಿತಿ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜೆ.ಪಿ.ನಗರದ ಜನತಾ ಕಾಲೊನಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉಮಾಪತಿ ಮತ್ತು ತಂಡವು ಸುಗಮ ಸಂಗೀತ ಹಾಗೂ ಭಕ್ತಿ ಗೀತೆಗಳ ಗಾಯನವನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.