ADVERTISEMENT

ಮೈಸೂರು: ಸೀರೆಯುಟ್ಟು ಹೆಜ್ಜೆ ಇಟ್ಟ ನೀರೆಯರು

ವಾಕಥಾನ್‌ನಲ್ಲಿ ಭಾಗಿಯಾದ ನೂರಾರು ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:07 IST
Last Updated 8 ಮಾರ್ಚ್ 2021, 5:07 IST
ವಿಶ್ವ ಮಹಿಳಾ ದಿನದ ಪ್ರಯುಕ್ತ ಇನ್ನರ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಮೈಸೂರಿನ ಪುರಭವನದ ಬಳಿ ಭಾನುವಾರ ಏರ್ಪಡಿಸಿದ್ದ ಮೂರನೇ ವರ್ಷದ ಸ್ಯಾರಿ ವಾಕಥಾನ್‌ನಲ್ಲಿ ಸಾಹಿತಿ ಧರಣೀದೇವಿ ಮಾಲಗತ್ತಿ ಸೇರಿದಂತೆ ಹಲವು ಮಹಿಳೆಯರು ಭಾಗವಹಿಸಿದ್ದರು
ವಿಶ್ವ ಮಹಿಳಾ ದಿನದ ಪ್ರಯುಕ್ತ ಇನ್ನರ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಮೈಸೂರಿನ ಪುರಭವನದ ಬಳಿ ಭಾನುವಾರ ಏರ್ಪಡಿಸಿದ್ದ ಮೂರನೇ ವರ್ಷದ ಸ್ಯಾರಿ ವಾಕಥಾನ್‌ನಲ್ಲಿ ಸಾಹಿತಿ ಧರಣೀದೇವಿ ಮಾಲಗತ್ತಿ ಸೇರಿದಂತೆ ಹಲವು ಮಹಿಳೆಯರು ಭಾಗವಹಿಸಿದ್ದರು   

ಮೈಸೂರು: ನಗರದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಸೀರೆಯುಟ್ಟ ನಾರಿಯರು ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಇಡುತ್ತಿದ್ದರೆ, ಮದುವೆಗೋ, ಶುಭ ಸಮಾರಂಭಕ್ಕೋ ದಿಬ್ಬಣವೊಂದು ಹೊರಟಂತೆ ಭಾಸವಾಗುತ್ತಿತ್ತು. ಮಹಿಳೆಯರ ಘನ ಗಾಂಭೀರ್ಯದ ದಾಪುಗಾಲನ್ನು ಕಂಡು ಸಾರ್ವಜನಿಕರು ಒಂದರೆಗಳಿಗೆ ಚಕಿತರಾದರು.

ಈ ದೃಶ್ಯಗಳು ವಿಶ್ವ ಮಹಿಳಾ ದಿನದ ಅಂಗವಾಗಿ ‘ಇನ್ನರ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್’ ಇಲ್ಲಿ ಆಯೋಜಿಸಿದ್ದ ‘ಸ್ಯಾರಿ ವಾಕಥಾನ್‌’ನಲ್ಲಿ ಕಂಡು ಬಂದಿತು.

ಪುರಭವನದ ಆವರಣದಿಂದ ಆರಂಭವಾದ ನಡಿಗೆಯು ಶ್ರೀ ಹರ್ಷ ರಸ್ತೆ, ಬೆಂಗಳೂರು–ನೀಲಗಿರಿ ರಸ್ತೆ, ಮಲೆಮಹದೇಶ್ವರ ದೇಗುಲದ ರಸ್ತೆ, ಹೇಮಚಂದ್ರ ವೃತ್ತ, ಕುಪ್ಪಣ್ಣ ಉದ್ಯಾನ, ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ), ಕೋಟೆ ಆಂಜನೇಯಸ್ವಾಮಿ ದೇಗುಲದ ಮೂಲಕ ಪುರಭವನವನ್ನು ತಲುಪಿತು. ಇದರಲ್ಲಿ 18ರಿಂದ 70 ವರ್ಷ ವಯೋಮಾನದ ಮಹಿಳೆಯರು ಭಾಗವಹಿಸಿದ್ದು ವಿಶೇಷ ಎನಿಸಿತ್ತು.

ADVERTISEMENT

ಸಾಹಿತಿ ಡಾ.ಧರಣಿದೇವಿ ಮಾಲಗತ್ತಿ ಅವರು ಈ ಅಪರೂಪದ ವಾಕ್‌ಥಾನ್‌ಗೆ ಚಾಲನೆ ನೀಡಿದರು.

‘ಸಂಸ್ಕೃತಿ ಉಳಿಸುವುದರ ಜತೆಗೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಸೀರೆ ಧರಿಸುವುದು ಮಾತ್ರವಲ್ಲ, ಸ್ವಾವಲಂಬಿ ಜೀವನ ನಡೆಸುವ ಕಡೆಗೂ ಗಮನ ಹರಿಸಬೇಕು’ ಎಂದು ಅವರು ಕಿವಿಮಾತು ಹೇಳಿದರು.

‘ಸ್ಯಾರಿ ವಾಕ್‌ಥಾನ್‌ ಸ್ಪರ್ಧೆ’ಯಲ್ಲಿ 50 ವರ್ಷದೊಳಗಿನ ವಿಭಾಗದಲ್ಲಿ ಶುಭ ರೈ (ಪ್ರಥಮ), ವಿ.ಲಲಿತಾ (ದ್ವಿತೀಯ) ರಂಜಿತಾ (ತೃತೀಯ) ರೇವತಿ ಸಮಾಧಾನಕರ ಬಹುಮಾನ ಪಡೆದರು.

50 ವರ್ಷ ಮೀರಿದವರ ವಿಭಾಗದಲ್ಲಿ ಡಾ.ಬಿ.ಮಲ್ಲಿಕಾ (ಪ್ರಥಮ), ಆಶಾ ಎಸ್. ರಾವ್ (ದ್ವಿತೀಯ) ಎಂ.ಎನ್.ಪ್ರೇಮ (ತೃತೀಯ), ನಿರ್ಮಾಲ ಪ್ರಭು, ಕುಸುಮಾ ಮೂರ್ತಿ ಸಮಾಧಾನಕರ ಬಹುಮಾನ ತಮ್ಮದಾಗಿಸಿಕೊಂಡರು. ‘ಲಕ್ಕಿ ಲೇಡಿ’ ಬಹುಮಾನ ಪಡೆದ ಟಿ.ಎಸ್‌.ಪೂರ್ಣಿಮಾ ಅವರಿಗೆ ₹5 ಸಾವಿರ ಮೌಲ್ಯದ ವೋಚರ್‌ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಕವಿತಾ ವಿನೋದ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.